ಕೋಲಾರ: ರಾಜ್ಯದ ಹಲವು ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಕಂಡು ಬಂದಿದ್ದು, ದಿನದಿಂದ ದಿನಕ್ಕೆ ಈ ರೋಗ ಉಲ್ಬಣಗೊಳ್ಳುತ್ತಿದೆ. ಇನ್ನು ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಕೋಲಾರ ಮತ್ತು ದಾವಣಗೆರೆಯಲ್ಲೂ ಸಂತೆ, ಜಾತ್ರೆ, ಜಾನುವಾರು ಸಾಗಾಣಿಕೆಯನ್ನು ಒಂದು ತಿಂಗಳ ನಿಷೇಧಿಸಿ ಕೋಲಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲೂ ಜಾನುವಾರುಗಳಿಗೆ ಚರ್ಮ ಗಂಟು ರೋಗ ಹೆಚ್ಚಾಗಿದ್ದು, ಸಂತೆ ಜಾತ್ರೆಗಳಿಗೆ ಜಾನುವಾರು ಸಾಗಾಣಿಕೆ ನಿಷೇಧ ಹೇರಲಾಗಿದೆ. ಇನ್ನು ಜಾನುವಾರುಗಳ ರೋಗ ಪತ್ತೆಗೆ ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆ ಪ್ರಯೋಗಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಎಂದು ಡಿಸಿ ಶಿವಾನಂದ ಕಾಪಶಿ ರೈತರಿಗೆ ಸಲಹೆ ನೀಡಿದ್ದಾರೆ.
ಹೇಗೆ ಹರಡುತ್ತದೆ?
ರೋಗಪೀಡಿತ ಜಾನುವಾರುಗಳ ಬಾಯಿ, ಮೂಗಿನಿಂದ ಸುರಿಯುವ ಲೋಳೆಯಂತಹ ದ್ರವ ಬಿದ್ದ ಕಡೆ ಆರೋಗ್ಯವಂತ ರಾಸುಗಳು ಆಹಾರ ಸೇವಿಸಿದರೆ ರೋಗ ಹರಡುತ್ತದೆ. ಜಾನುವಾರುಗಳು ಕುಡಿಯುವ ನೀರಿನಲ್ಲಿ ರೋಗ ಬಂದ ಹಸುವಿನ ಜೊಲ್ಲು, ಇತರ ದ್ರವ ಸೇರಿದ್ದರೂ ರೋಗ ಹರಡುತ್ತದೆ. ರೋಗಪೀಡಿತ ಆಕಳಿನ ಸಂಪರ್ಕದ ಕೀಟ, ನೋಣ, ಸೊಳ್ಳೆ ಇತರ ಜಾನುವಾರುಗಳಿಗೆ ಕಡಿದಾಗಲೂ ರೋಗ ಹರಡುತ್ತದೆ.
ರೋಗ ಲಕ್ಷಣಗಳು
ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ. ವಾರಗಟ್ಟಲೆ ಜ್ವರ ಇರುವುದರೊಂದಿಗೆ ಹಾಲು ನೀಡುವ ಪ್ರಮಾಣವೂ ಕಡಿಮೆಯಾಗುತ್ತದೆ. ಈ ರೋಗವು ಮನುಷ್ಯರಿಗೆ, ಕುರಿ, ಮೇಕೆಗಳಿಗೆ ಹರಡುವುದಿಲ್ಲ. ಆದರೆ ಹಸು-ದತ್ತುಗಳಿಗೆ ಮಾತ್ರ ಜೀವಕಂಟಕವಾಗಬಲ್ಲದು.