Saturday, January 31, 2026

ಕರಾವಳಿ ಗಂಡುಕಲೆ ಯಕ್ಷಗಾನ ಪ್ರದರ್ಶನ ನವೆಂಬರ್ ಅಂತ್ಯಕ್ಕೆ ಆರಂಭ: ಸಚಿವ ಕೋಟ

ಮಂಗಳೂರು : ಯಕ್ಷಗಾನ ಕಲಾವಿದರು ವೃತ್ತಿಯನ್ನು ಕಳೆದುಕೊಳ್ಳಬಾರದು ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸೂಕ್ತ ಮುಂಜಾಗೃತ ಕ್ರಮದೊಂದಿಗೆ ಸಂಪ್ರದಾಯದ ಪ್ರಕಾರ ಕರಾವಳಿಯ ಗಂಡುಕಲೆ ಯಕ್ಷಗಾನ ಜಿಲ್ಲೆಯಾದ್ಯಂತ ನವೆಂಬರ್ ಅಂತ್ಯಕ್ಕೆ ಪ್ರದರ್ಶನಗೊಳ್ಳಲಿದೆ ಎಂದು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಯಕ್ಷಗಾನ ಮೇಳಗಳ ಸಂಚಾಲಕರ ಸಭೆಯನ್ನುದ್ಧೇಶಿಸಿ ಮಾತನಾಡಿದ ಸಚಿವರು, ಕೋವಿಡ್–19ನಿಂದಾಗಿ ಯಕ್ಷಗಾನ ಕಲಾವಿದರ ಸ್ಥಿತಿ ಸಂಕಷ್ಟದಲ್ಲಿದೆ. ಯಾವುದೇ ಕಲಾವಿದನಿಗೆ ಅನ್ಯಾಯವಾಗದಂತೆ ಶೀಘ್ರದಲ್ಲಿಯೇ ಸರಕಾರದಿಂದ ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದ.ಕ. ಜಿಲ್ಲೆಯಲ್ಲಿ ಕಟೀಲು, ಬಪ್ಪನಾಡು, ಸಸಿಹಿತ್ಲು ಸೇರಿದಂತೆ 20ಕ್ಕೂ ಹೆಚ್ಚು ವೃತ್ತಿಪರ ತೆಂಕುತಿಟ್ಟಿನ ಯಕ್ಷಗಾನ ಮೇಳಗಳಿದ್ದು, ಸರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಲಾವಿದರು ಮತ್ತು ಪೂರಕ ಕೆಲಸಗಾರರಿದ್ದಾರೆ. ನವೆಂಬರ್ ಅಂತ್ಯಕ್ಕೆ ಯಕ್ಷಗಾನ ಬಯಲಾಟ ಆರಂಭವಾಗಲಿದೆ. ಕಲಾವಿದರ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವುದು ಆದ್ಯ ಕರ್ತವ್ಯವಾಗಿರುವುದರಿಂದ ಸರಕಾರದ ಮಾರ್ಗಸೂಚಿಯಂತೆ ಆರೋಗ್ಯ ಇಲಾಖೆಯ ವತಿಯಿಂದ ಯಕ್ಷಗಾನ ಕಲಾವಿದರು ಯಕ್ಷಗಾನ ಪ್ರಾರಂಭಕ್ಕೂ ಮುನ್ನ ಕಡ್ಡಾಯವಾಗಿ ಕೊರೋನಾ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇದರ ಜೊತೆಗೆ ಯಕ್ಷಗಾನ ಮೇಳಗಳಲ್ಲಿಯೂ ಸಹ ವಾರಕ್ಕೆ ಒಂದು ಬಾರಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಬೇಕೆಂದರು. ಎಲ್ಲಾ ಕಲಾವಿದರು ಹೊಸ ಹುಮ್ಮಸ್ಸಿನಿಂದ ಮಾನಸಿಕ ಮತ್ತು ದೈಹಿಕವಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಯಾವೊಬ್ಬ ಕಲಾವಿದರು ಕೂಡ ಕೆಲಸವಿಲ್ಲದೆ ಕೂರಬಾರದು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯವರು ಜಂಟಿಯಾಗಿ ಯಕ್ಷಗಾನ ಅಕಾಡೆಮಿಯಿಂದ ಕಲಾವಿದರ ಮಾಹಿತಿ ಪಡೆದುಕೊಂಡು, ಕಲಾವಿದರ ದಾಖಲೀಕರಣ ಮಾಡಿ ಎಂದು ಸೂಚಿಸಿದ ಅವರು ಯಕ್ಷಗಾನ ಬಯಲಾಟ ಪ್ರದರ್ಶನಕ್ಕೆ ಈ ಬಾರಿ ಮೇಳಗಳು ಮುಂಗಡ ಬುಕ್ಕಿಂಗ್ ಆಗದೇ ಕಲಾವಿದರು ತೀವ್ರ ಸಂಕಷ್ಟದಲ್ಲಿದ್ದಾರೆ ಅವರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, ಬಯಲು ಪ್ರದೇಶಗಳಲ್ಲಿ ಯಕ್ಷಗಾನ ಪ್ರಾರಂಭಕ್ಕೂ ಮುನ್ನ ಮುನ್ನೆಚ್ಚರಿಕಾ ಕ್ರಮವಾಗಿ ಕಡ್ಡಾಯವಾಗಿ 200 ಜನ ಮೀರದಂತೆ ಕ್ರಮವಹಿಸಬೇಕು. ಆ ಪ್ರದೇಶದ ಸುತ್ತಮುತ್ತ ಸ್ಯಾನಿಟೈಸರ್ ಮಾಡಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಹಾಕುವಂತೆ ಸಂಬಂಧಪಟ್ಟವರು ಕ್ರಮವಹಿಸಬೇಕು ಎಂದು ತಿಳಿಸಿದರು.
ಕಟೀಲು ದೇವಳದ ಆಡಳಿತ ಮೊಕ್ತೇಸರ ಶ್ರೀ ಹರಿ ಅಸ್ರಣ್ಣ ಮಾತನಾಡಿ, ಕಟೀಲಿನ ಆರು ಮೇಳಗಳು ನಿಗದಿತ ಸಮಯದಲ್ಲಿ ಪ್ರದರ್ಶನಕ್ಕೆ ಹೊರಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಬಪ್ಪನಾಡು, ಸಸಿಹಿತ್ಲು ಮೇಳಗಳ ಸಹಿತ ಅನೇಕರು ಕೊರೋನಾದ ಸಂದರ್ಭದಲ್ಲಿ ಕಲಾವಿದರು ಮತ್ತು ವೃತ್ತಿಪರ ಮೇಳಗಳ ಸಮಸ್ಯೆಗಳನ್ನು ವಿವರಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಯಕ್ಷಗಾನದ ತಂಡದ ಉಜಿರೆ ಅಶೋಕ್ ಭಟ್ ಮಾತನಾಡಿ, ಪ್ರತಿ ವರ್ಷ ಯಕ್ಷಗಾನ ಪ್ರದರ್ಶನಗಳು ಮೇ ತಿಂಗಳಿನಲ್ಲಿ ಆರಂಭವಾಗುತ್ತದೆ. ಆದರೆ ಈ ವರ್ಷ ಕೊರೊನಾ ವೈರಸ್‍ನಿಂದಾಗಿ ಮುಂಗಡವಾಗಿ ಖಾಯ್ದಿರಿಸಿದ್ದ ಹಲವು ಯಕ್ಷಗಾನ ಪ್ರದರ್ಶನಗಳು ರದ್ದಾಗಿದೆ. ಹರಕೆಯ ಯಕ್ಷಗಾನ ಆಟ ಬಿಟ್ಟರೆ ಮತ್ತೆ ಬೇರೆ ಯಾವುದೇ ಯಕ್ಷಗಾನ ಪ್ರದರ್ಶನಗಳೂ ಈ ಬಾರಿ ಇಲ್ಲದಿರುವುದು ಬಹು ದೊಡ್ಡ ಸವಾಲಾಗಿದೆ ಎಂದು ಹೇಳಿದರು.

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...