ಬಂಟ್ವಾಳ: ತಾಲೂಕಿನ ಶಂಭೂರು ಬೊಂಡಾಲ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿಯ ವತಿಯಿಂದ ಯಕ್ಷಗಾನದ ಬಯಲಾಟದ ಸುವರ್ಣ ಸಂಭ್ರಮವು ಫೆ. ೧೪ರಿಂದ ೧೬ರ ವರೆಗೆ ಬೊಂಡಾಲದಲ್ಲಿ ಮೂರು ದಿನಗಳ ಯಕ್ಷಗಾನ, ಮೇಳಕ್ಕೆ ಆಯುಧ ಸಮರ್ಪಣೆ ಹಾಗೂ ಬೊಂಡಾಲ ಪ್ರಶಸ್ತಿ ಪ್ರದಾನದೊಂದಿಗೆ ನಡೆಯಲಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಹೇಳಿದರು.

ಅವರು ಗುರುವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಾರ್ಯಕ್ರಮದಲ್ಲಿ ಫೆ. ೧೪ರಂದು ಬೆಳಗ್ಗೆ ಗಣಹೋಮ, ಮೇಳದ ಶ್ರೀ ದೇವರ ಆಗಮನ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಮೇಳಕ್ಕೆ ಸಮರ್ಪಣೆಗೊಳ್ಳಲಿರುವ ಸುಮಾರು ೨ ಲಕ್ಷ ರೂ. ವೆಚ್ಚದ ಬೆಳ್ಳಿಯ ಆಯುಧಗಳ ಮೆರವಣಿಗೆ, ಚೌಕಿ ಪೂಜೆ, ಯಕ್ಷಗಾನ ಬಯಲಾಟ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ, ಸಭಾ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ವೇ.ಮೂ.ಲಕ್ಷ್ಮೀನಾರಾಯಣ ಆಸ್ರಣ್ಣ ಹಾಗೂ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ವೇ.ಮೂ.ವಾಸುದೇವ ಆಸ್ರಣ್ಣರು, ವೇ.ಮೂ.ವೆಂಕಟರಮಣ ಆಸ್ರಣ್ಣರು, ವೇ.ಮೂ.ಹರಿನಾರಾಯಣದಾಸ ಆಸ್ರಣ್ಣರು, ವೇ.ಮೂ.ಕಮಲಾದೇವಿ ಪ್ರಸಾದ ಆಸ್ರಣ್ಣರು, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ, ಮಂಗ್ಲಿಮಾರ್ ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ರವಿಶಂಕರ್ ಶೆಟ್ಟಿ ಬಡಾಜೆಗುತ್ತು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ವಾಸುದೇವ ಕಾರಂತ ನರಿಕೊಂಬು, ದಿ.ರಾಮಚಂದ್ರ ರಾವ್ ನರಿಕೊಂಬು ಮನೆಯವರು, ಪದ್ಮನಾಭ ಮಯ್ಯ ಏಲಬೆ, ಮೇಳದ ಕಲಾವಿದರು, ಬಯಲಾಟ ಪ್ರಾರಂಭಿಸಿದ ಹಿರಿಯರ ಮನೆಯವರು, ಸಮಿತಿ ಸದಸ್ಯರು ಹಾಗೂ ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ ನಡೆಯಲಿದೆ.
ಫೆ. ೧೫ರಂದು ಸಂಜೆ ಮೇಳದ ದೇವರ ಅದ್ದೂರಿಯ ಮೆರವಣಿಗೆ, ಯಕ್ಷಗಾನ ಶ್ರೀ ದೇವಿ ಲಲಿತೋಪಾಖ್ಯಾನ, ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಸಂಸ್ಮರಣೆ ಹಾಗೂ ಬೊಂಡಾಲ ಪ್ರಶಸ್ತಿ-೨೦೨೪ ಪ್ರದಾನ ಸಮಾರಂಭದಲ್ಲಿ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ವೇ.ಮೂ.ಅನಂತಪದ್ಮನಾಭ ಆಸ್ರಣ್ಣರು ಆಶೀರ್ವಚನ ನೀಡಲಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದ.ಕ.ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ನರಿಕೊಂಬು ಶ್ರೀ ನಾಲ್ಕೈತ್ತಾಯ ಪಂಜುರ್ಲಿ ನೇಮೋತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಾಲ್ ಭಾಗವಹಿಸಲಿದ್ದಾರೆ.
ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಹಾಗೂ ಸಾಲಿಗ್ರಾಮ ಮೇಳದ ಸಂಚಾಲಕ ಪಲ್ಲಿ ಕಿಶನ್ ಹೆಗ್ಡೆ ಅವರನ್ನು ಸಮ್ಮಾನಿಸಲಾಗುತ್ತದೆ. ಕಟೀಲು ಮೇಳದ ಕಲಾವಿದ ಮೋಹನ್ ಕುಮಾರ್ ಅಮ್ಮುಂಜೆ ಅವರಿಗೆ ಬೊಂಡಾಲ ಪ್ರಶಸ್ತಿ- ೨೦೨೪ ಪ್ರದಾನ ಮಾಡಲಾಗುತ್ತದೆ. ಫೆ. ೧೬ರಂದು ಸಂಜೆ ಮೇಳದ ದೇವರ ಮೆರವಣಿಗೆ, ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಬಿ.ಸೀತಾರಾಮ ಶೆಟ್ಟಿ ಮಂಗಳೂರು, ಪದ್ಮನಾಭ ಮಯ್ಯ ಏಲಬೆ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಸುನಾದರಾಜ್ ಶೆಟ್ಟಿ ಬೊಂಡಾಲ ಅಂತರಗುತ್ತು ಉಪಸ್ಥಿತರಿದ್ದರು.