ವಿಟ್ಲ: ಶಿಬಿರದ ಮೂಲಕ ಗ್ರಾಮ ಮಟ್ಟದಲ್ಲಿ ಸಿಗುವ ಸೇವೆಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಬೇಕು. ವಾಹನ ಅಪಘಾತಗಳಿಂದ ಹಲವರಿಗೆ ರಕ್ತದ ಅವಶ್ಯಕತೆ ಬರುತ್ತದೆ. ಗ್ಯಾರೇಜುಗಳಲ್ಲಿ ರಕ್ತದಾನದ ಮಹತ್ವವನ್ನು ಗ್ರಾಹಕರಿಗೆ ತಿಳಿಸುವ ಕಾರ್ಯ ಮಾಡಬೇಕು. ಇದರಿಂದ ಇಂಥ ಕಾರ್‍ಯಕ್ರಮಗಳ ಆಯೋಜನೆಗೆ ಬೆಲೆ ಬರುತ್ತದೆ ಎಂದು ಜಿಲ್ಲಾ ನಿವೃತ್ತ ಕ್ಷಯರೋಗ ಅಧಿಕಾರಿ ಡಾ. ಪಿ. ಎಸ್. ರಾಮಚಂದ್ರ ಶಾಸ್ತ್ರಿ ಹೇಳಿದರು.

ಅವರು ವಿಠಲ ಪದವಿಪೂರ್ವ ಕಾಲೇಜು ಸುವರ್ಣ ರಂಗ ಮಂದಿರದಲ್ಲಿ ದಕ್ಷಿಣ ಕನ್ನಡ ಗ್ಯಾರೇಜು ಮಾಲಕರ ಸಂಘ ಮಂಗಳೂರು ವಿಟ್ಲ ವಲಯದ ವತಿಯಿಂದ ಕಾರ್ಮಿಕರ ದಿನದ ಅಂಗವಾಗಿ ನಡೆದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ, ರಕ್ತದಾನ ಶಿಬಿರ, ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ವಾಯು ಸೇನೆಯ ನಿವೃತ್ತ ಸರ್ಜೆಂಟ್ ಶ್ರೀಪ್ರಕಾಶ್ ಕುಕ್ಕಿಲ ಮಾತನಾಡಿ ಗ್ರಾಹಕರಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಸೇವೆಯನ್ನು ನೀಡಿದಾಗ ಮೆಚ್ಚುಗೆಯ ಜತೆಗೆ ಹೆಸರುಗಳಿಸಬಹುದು. ಸೇನೆಗೆ ಸೇರಲು ಇಚ್ಛಿಸುವ ೨೩ವರ್ಷದ ಒಳಗಿನ ಯುವಕರಿಗೆ ಗದಗದಲ್ಲಿ ಮೇ ೨೮ಕ್ಕೆ ರ್‍ಯಾಲಿ ನಡೆಯಲಿದೆ. ಸೈನ್ಯಕ್ಕೆ ಸೇರಲು ಇಚ್ಛಿಸುವ ದಕ್ಷಿಣ ಕನ್ನಡದ ಯುವರಿಗೆ ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಉಚಿತ ಮಾರ್ಗದರ್ಶನ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿಟ್ಲ ಆರೋಗ್ಯ ಇಲಾಖೆಯ ನಿವೃತ್ತ ವಾಹನ ಚಾಲಕ ಉಮೇಶ್ ಶೆಟ್ಟಿ, ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಪಿ. ಕೆ. ಶಶಿಕಲ ಅವರನ್ನು ಸನ್ಮಾನಿಸಲಾಯಿತು. ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಪ್ರಾದೇಶಿಕ ರಕ್ತಪೂರಣ ಕೇಂದ್ರದ ರಕ್ತನಿಧಿ ಅಧಿಕಾರಿ ಡಾ. ಶರತ್ ಕುಮಾರ್ ರಾವ್ ಜಿ. ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಗ್ಯಾರೇಜು ಮಾಲಕರ ಸಂಘ ವಿಟ್ಲ ವಲಯದ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಆರ್. ಎಸ್. ವಹಿಸಿದ್ದರು. ಹುತಾತ್ಮ ಸೈನಿಕರಿಗೆ ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಟ್ಲದ ಎಲ್ಲಾ ಗ್ಯಾರೇಜ್ ಗಳನ್ನು ಬಂದ್ ಮಾಡಿ ಶಿಬಿರವನ್ನು ಆಯೋಜಿಸಲಾಗಿತ್ತು. ೬೦ಕ್ಕೂ ಅಧಿಕ ಮಂದಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.
ವಿಟ್ಲ ಸಮುದಾಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಪ್ರಶಾಂತ್ ಬಿ. ಎನ್., ದ ಕ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಗುಣಪಾಲ್ ಎಂ., ವಿಟ್ಲ ವಲಯ ಗೌರವಾಧ್ಯಕ್ಷ ಹರೀಶ್ ಆಚಾರ್‍ಯ ವಿ. ಮತ್ತಿತರರು ಉಪಸ್ಥಿತರಿದ್ದರು.
ವೈಷ್ಣವಿ ಪಿ. ವಿ. ಪ್ರಾರ್ಥಿಸಿದರು. ಗೌರವ ಸಲಹೆಗಾರ ಸುಂದರ ಆಚಾರ್‍ಯ ನೆಗಳಗುಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ಚಂದ್ರಿಕಾ ವೆಂಕಟೇಶ್ ಸನ್ಮಾನ ಪತ್ರ ವಾಚಿಸಿದರು. ಕಾರ್‍ಯದರ್ಶಿ ಪ್ರಕಾಶ್ ಅಡ್ಯನಡ್ಕ ವಂದಿಸಿದರು. ಪರಮೇಶ್ವರ ಆಚಾರ್ಯ ಮಂಕುಡೆ ನಿಡ್ಯಾಳ ಕಾರ್‍ಯಕ್ರಮ ನಿರೂಪಿಸಿದರು.