Tuesday, February 3, 2026

ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ 3ನೇ ಬ್ರಿಡ್ಜ್ ನಲ್ಲೂ ನೀರು ಸಂಗ್ರಹ ಆರಂಭ

ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಇದೇ ಮೊದಲ ಬಾರಿಗೆ ಗೇಟ್ ಹಾಕಿ ನೀರು ಸಂಗ್ರಹ ಆರಂಭಗೊಂಡಿದೆ.

ಸಣ್ಣ ನೀರಾವರಿ ಇಲಾಖೆಯ ಮೂಲಕ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ 3ನೇ ಬ್ರಿಡ್ಜ್ ಕಂ ಬ್ಯಾರೇಜ್ ಇದಾಗಿದ್ದು, ಮೂರು ವರ್ಷ ಹಿಂದೆ ಹರೇಕಳದಲ್ಲಿ ನೀರು ಸಂಗ್ರಹ ಕಾರ್ಯ ಆರಂಭಗೊಂಡಿತ್ತು. ಬಿಳಿಯೂರಿನಲ್ಲಿ ಕಳೆದ ವರ್ಷ ನೀರು ಸಂಗ್ರಹ ಆರಂಭಗೊಂಡಿದ್ದು, ಈ ವರ್ಷವೂ ಗೇಟ್ ಅಳವಡಿಸಲಾಗಿದೆ.

ಇದೀಗ ಈ ವರ್ಷದಿಂದ ಜಕ್ರಿಬೆಟ್ಟಿನ 3ನೇ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲೂ ನೀರು ಸಂಗ್ರಹ ಆರಂಭಗೊಂಡಿದೆ. 2022ರ ನವೆಂಬರ್‌ನಲ್ಲಿ ಅಂದಿನ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶಿಲಾನ್ಯಾಸ ನೆರವೇರಿಸಿ ಕಾಮಗಾರಿ ಆರಂಭಗೊಂಡಿತ್ತು. ಕಳೆದ ವರ್ಷವೇ ಇದರ ನಿರ್ಮಾಣದ ಕಾಮಗಾರಿ ಪೂರ್ಣಗೊಂಡು ಪ್ರಯೋಗಿಕ ಪರೀಕ್ಷೆ ನಡೆಸಲಾಗಿದ್ದು, ಪ್ರಸ್ತುತ ನದಿ ದಡಕ್ಕೆ ಕಲ್ಲು ಹಾಸುವ ಕೆಲಸ ಪೂರ್ಣಗೊಂಡು ಗೇಟ್ ಹಾಕಿ ನೀರು ನಿಲ್ಲಿಸುವಿಕೆ ಆರಂಭಗೊಂಡಿದೆ.

ಜಕ್ರಿಬೆಟ್ಟು ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ಉದ್ದ 351.25 ಮೀ. ಹಾಗೂ 5.50 ಮೀ. ಎತ್ತರವಿದ್ದು, ಪೂರ್ತಿ ಗೇಟ್ ಅಳವಡಿಸಿದರೆ 166 ಎಂಸಿಎಫ್‌ಟಿ ನೀರು ಶೇಖರಣೆಗೊಂಡು ಸುಮಾರು 5 ಕಿ.ಮೀ.ವರೆಗೆ ಹಿನ್ನೀರು ವ್ಯಾಪಿಸಲಿದೆ. ಸೇತುವೆಯ ಅಗಲ 7.50 ಮೀ. ಇದ್ದು, ಒಟ್ಟು 21 ಕಿಂಡಿಗಳಿವೆ. 12 ಮೀ. ಅಗಲದ ವರ್ಟಿಕಲ್ ಲಿಫ್ಟ್ ಗೇಟ್‌ಗಳಿದ್ದು, ಮಧ್ಯದಲ್ಲಿ ಎರಡು ಸ್ಕರ‍್ಸ್ ಸ್ಲೂಯಿಸ್ ಗೇಟ್‌ಗಳಿರುತ್ತವೆ. ತುರ್ತು ಪ್ರವಾಹದ ಸಂದರ್ಭ ನೀರಿನ್ನು ಕೆಳಕ್ಕೆ ಕಳುಹಿಸುವ ಉದ್ದೇಶದಿಂದ ಸ್ಕರ‍್ಸ್ ಸ್ಲೂಯಿಸ್ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಇದು ಲಿಫ್ಟ್ ಗೇಟ್‌ಗಳಿಗಿಂತ ತೀರಾ ಕೆಳಸ್ತರದಲ್ಲಿರುತ್ತದೆ.

ಹೀಗಾಗಿ ತಳ ಭಾಗದಲ್ಲಿ ಮರಳು ಸಂಗ್ರಹಗೊಂಡರೆ ಅದನ್ನು ಹೊರಕ್ಕೆ ಕಳುಹಿಸಲು ಅನುಕೂಲವಾಗುವ ದೃಷ್ಟಿಯಿಂದ ಈ ಗೇಟ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

ಕಳೆದ ವರ್ಷ ತುಂಬೆ ಡ್ಯಾಮ್‌ನಲ್ಲಿ ನೀರಿನ ಸಂಗ್ರಹ ಕಡಿಮೆಯಾದಾಗ ಶಂಭೂರು ಎಎಂಆರ್ ಡ್ಯಾಮ್‌ನ ಜತೆಗೆ 2 ಬಾರಿ ಬಿಳಿಯೂರು ಕಿಂಡಿ ಅಣೆಕಟ್ಟಿನಿಂದಲೂ ಗೇಟ್ ತೆರೆದು ಕೆಳಕ್ಕೆ ನೀರು ಹರಿಸಲಾಗಿತ್ತು. ಈ ವರ್ಷ ಎಎಂಆರ್ ಡ್ಯಾಮ್ ಮತ್ತು ತುಂಬೆ ಡ್ಯಾಮ್‌ನ ಮಧ್ಯೆ ಜಕ್ರಿಬೆಟ್ಟು ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿರುವುದರಿಂದ ಮಳೆ ಎಷ್ಟೇ ವಿಳಂಬವಾದರೂ ಆತಂಕ ಪಡಬೇಕಾಗಿರುವುದಿಲ್ಲ.

ಮಂಗಳೂರು ನಗರದ ಜತೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಇಲ್ಲಿ ಸಂಗ್ರಹಿಸಲ್ಪಟ್ಟ ನೀರು ಸಹಕಾರಿಯಾಗಲಿದ್ದು, ಜತೆಗೆ ನದಿ ಕಿನಾರೆಯ ಕೃಷಿ ತೋಟಗಳಿಗೆ ಅನುಕೂಲವಾಗುವ ಜತೆಗೆ ಸುತ್ತಮುತ್ತಲ ಪ್ರದೇಶದ ಅಂತರ್ಜಲ ವೃದ್ಧಿಗೂ ನೆರವಾಗಲಿದೆ.

More from the blog

B.C.Road : ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ..

ಬಂಟ್ವಾಳ : ಜೀವನದ ಪ್ರತೀ ಕ್ಷಣದಲ್ಲಿ ಮಹಿಳೆಯರು ಸಂತೋಷ-ಸಂತಸ‌ ಪಡೆಯುವ ಸನ್ನಿವೇಶಗಳು ಸಮಾಜದಲ್ಲಿ ನಿರ್ಮಾಣಗೊಳ್ಳಲಿ ಎಂದು ಹಿರಿಯ ವಕೀಲ ಅಶ್ವನಿ‌ ಕುಮಾರ್ ರೈ ಹೇಳಿದರು. ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ‌ ಸಂಸ್ಥೆ ಮತ್ತು...

ಮಡಂತ್ಯಾರು : ನಕಲಿ ಚಿನ್ನದ ಸರ ಅಡವಿಟ್ಟು ವಂಚನೆ – ಇಬ್ಬರ ಬಂಧನ

ಬಂಟ್ವಾಳ: ಲಕ್ಷಾಂತರ ರೂ ಸಾಲ ಪಡೆಯುವ ಉದ್ದೇಶದಿಂದ ನಕಲಿ ಚಿನ್ನದ ಸರವನ್ನು ಅಡವಿಡಲು ಸಹಕಾರಿ ಸಂಘವೊಂದಕ್ಕೆ ಬಂದ ಇಬ್ಬರು ಆರೋಪಿಗಳು ಪೋಲೀಸರ ಅತಿಥಿಯಾಗಿದ್ದಾರೆ. ಮಡಂತ್ಯಾರು ಎಂಬಲ್ಲಿರುವ ಒಡಿಯೂರು ಶ್ರೀ ವಿವಿದ್ದೋದೇಶ ಸೌಹಾರ್ದ ಸಹಕಾರಿ ಸಂಘಕ್ಕೆ...

ಮಾಣಿ : ಪೈಪ್ ಲೈನ್ ಕಾಮಗಾರಿಯಿಂದ ಹದಗೆಟ್ಟ ರಸ್ತೆ – ಪ್ರತಿಭಟನೆಗೆ ಮುಂದಾದ ನಾಗರಿಕರು 

ವಿಟ್ಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ನಡೆಸುವ ವೇಳೆ ಮಾಣಿ ಗ್ರಾಮದ ಅರ್ಬಿ ಪ್ರದೇಶದಲ್ಲಿ ರಸ್ತೆಯನ್ನು ಅಗೆದು ಅದರ ಮಧ್ಯ ಭಾಗದಲ್ಲಿ ಪೈಪ್ ಅಳವಡಿಕೆ ಮಾಡಿ ವ್ಯವಸ್ಥಿತವಾಗಿ ಅದನ್ನು...

B.C. Road : FTM ತರಬೇತಿ ಮತ್ತು ಅಭಿಯಾನ ಕಾರ್ಯಕ್ರಮ..

ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ , ಜಿಲ್ಲಾ ಪ್ರಯೋಗಾಲಯ ಮಂಗಳೂರು ಇವರ ವತಿಯಿಂದ, ಗ್ರಾ.ಪಂ.ಅಧ್ಯಕ್ಷರುಗಳು,ಸದಸ್ಯರುಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ FTM ತರಬೇತಿ ಮತ್ತು...