-ಯಾದವ ಕುಲಾಲ್
ಬಂಟ್ವಾಳ : ಐದು ಲಕ್ಷ ವೆಚ್ಚದ ಸಭಾಭವನ, 2 ಲಕ್ಷ ವೆಚ್ಚ ಇಂಟರ್‌ಲಾಕ್, 1 ಲಕ್ಷ ವೆಚ್ಚದಲ್ಲಿ ಸುಣ್ಣ ಬಣ್ಣ, 16 ಸಿಸಿ ಕ್ಯಾಮರಾ, 2 ಲಕ್ಷ ವೆಚ್ಚದಲ್ಲಿ ವಿಶೇಷ ಶೌಚಾಲಯ, 21 ಕಂಪ್ಯೂಟರ್ ಸ್ಕ್ರೀನ್ ಪರದೆಗಳು, ಬಟ್ಟಲು ಸ್ಟ್ಯಾಂಡ್, ಕುಡಿಯುವ ನೀರು, ಕೂಲರ್, ಸೋಲಾರ್ ಅಳವಡಿಕೆ, ಕಚೇರಿ ಶೋಕೇಸ್, ಕಂಪ್ಯೂಟರ್ ಪ್ರಿಂಟರ್ ಇದೆಲ್ಲ ಇರುವುದು ಎಲ್ಲೋ ನಗರದ ಸಭಾಭವನದಲ್ಲಿ ಅಲ್ಲ. ಕಾವಳಪಡೂರು ಗ್ರಾಮದ ವಗ್ಗ ಎಂಬಲ್ಲಿರುವ ಸರಕಾರಿ ಪ್ರೌಢ ಶಾಲೆಯ ವೈವಿಧ್ಯತೆಗಳು.



ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳನ್ನು ಸೆಳೆಯಲು ಖಾಸಗಿ ವಿದ್ಯಾ ಸಂಸ್ಥೆಗಳು ವಿವಿಧ ರೀತಿಯಲ್ಲಿ ಸೆಳೆಯಲು ಬೇರೆ ಬೇರೆ ರೀತಿಯ ಯೋಜನೆಗಳು ಹಾಕಿ ತಮ್ಮ ದುಬಾರಿ ಡೊನೇಶನ್, ವಾಹನ ವ್ಯವಸ್ಥೆ ಖರ್ಚು, ಹೀಗೆ ನಾನಾ ರೀತಿಯ ಖರ್ಚುಗಳನ್ನು ವಿದ್ಯಾರ್ಥಿಗಳ ತಲೆಗೆ ಹಾಕುತ್ತಾರೆ. ಆದರೆ ಈ ದಾನಿಗಳ ಸಹಕಾರದಿಂದ ವಗ್ಗ ಸರಕಾರಿ ಪ್ರೌಢ ಶಾಲೆ ಖಾಸಗಿ ವಿದ್ಯಾ ಸಂಸ್ಥೆಯನ್ನು ಮೀರಿಸುವಂತಹ ವಾತಾವರಣ ನಿರ್ಮಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗ್ರಾಮೀಣ ಭಾಗದಲ್ಲೇ ವಿದ್ಯಾಭ್ಯಾಸದಲ್ಲಿ ತೊಡಗುವಂತೆ ಮಾಡಿಕೊಂಡಿದೆ.
ಮಂಗಳೂರು-ಧರ್ಮಸ್ಥಳ ಹೆದ್ದಾರಿಯ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗದ ಬಳಿಯ ಎತ್ತರ ಪ್ರದೇಶದಲ್ಲಿ ಸುತ್ತಲೂ ಆವರಣ ಗೋಡೆಯನ್ನು ಹೊಂದಿರುವ ಹೂದೋಟದಿಂದ ಹಚ್ಚಹಸಿನೊಂದಿಗೆ ಕಂಗೊಳಿಸುತ್ತಿದೆ ವಗ್ಗ ಸರಕಾರಿ ಪ್ರೌಢ ಶಾಲೆ. ಸುಮಾರು 30 ವರ್ಷಗಳ ಇತಿಹಾಸವುಳ್ಳ ಈ ಶಾಲೆ ಪ್ರಸ್ತುತ ಕಾರ್ಯವೈಖರಿಯಲ್ಲಿ ಇತರ ಮಾದರಿ ಶಾಲೆಯ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದೇ ವಿಶೇಷ.
ವಿಶಾಲವಾದ ರಂಗಮಂದಿರದೊಂದಿಗೆ ಸಭಾಂಗಣ, ಶಾಲೆಯಲ್ಲಿ ಸಂಪೂರ್ಣವಾಗಿ ಇಂಟರ್‌ಲಾಕ್ ಅಳವಡಿಕೆ, ಸುಸಜ್ಜಿತ ಕಂಪ್ಯೂಟರ್ ಘಟಕ, ಸೋಲಾರ್ ಅಳವಡಿಕೆ, ಸ್ಮಾರ್ಟ್ ಕ್ಲಾಸ್ ರೂಂ, ಸುಸಜ್ಜಿತ ಅಡುಗೆ ಕೋಣೆ,
ಸ್ವಚ್ಛ ವಿದ್ಯಾಲಯ ಪ್ರಶಸ್ತಿ, ಪರಿಸರ ಮಿತ್ರ ಹಳದಿ ಶಾಲೆ ಮತ್ತು ಕಿತ್ತಳೆ ಶಾಲೆ ಪ್ರಶಸ್ತಿ ಹೀಗೆ ಶಾಲೆಗೆ ಪ್ರಶಸ್ತಿ ದೊರೆಯುವುದರ ಜೊತೆಗೆ ಇಲ್ಲಿರುವ ಸಿಬ್ಬಂದಿಗಳಿಗೂ ಪ್ರಶಸ್ತಿಗಳು ಪಡೆದಿರುವುದೂ ವಿಶೇಷ. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯನ್ನು ಯಶಸ್ವಿಯಾಗಿ ಆಯೋಜಿಸಿದ ಜಿಲ್ಲೆಯ ಏಕೈಕ ಸರಕಾರಿ ಪ್ರೌಢ ಶಾಲೆ ಇದಾಗಿದ್ದು ಹಾಗೂ ಎಂಟು ಜಿಲ್ಲೆಗಳ ಆಯ್ದ ತಂಡಗಳಿಗೆ ವಿಭಾಗ ಮಟ್ಟದ ವಿಜ್ಞಾನ, ನಾಟಕ ಸ್ಪರ್ಧೆಯನ್ನು ಅತ್ಯಂತ ಯಶಸ್ವಿಯಿಂದ ಆಯೋಜಿಸಿದ ಏಕೈಕ ಸರಕಾರಿ ಪ್ರೌಢ ಶಾಲೆಯಾಗಿದ್ದು ಬೆಳ್ಳಿ ಹಬ್ಬವನ್ನು ಆಯೋಜಿಸಿರುವ ಶಾಲೆಯಾಗಿದೆ.
ದಾನಿಗಳ ಮತ್ತು ಶಾಲಾಭಿವೃದ್ಧಿ ಸಮಿತಿ ಸಹಕಾರದಿಂದ ಅತ್ಯಂತ ಸುಸಜ್ಜಿತ ಬೌತಿಕ ವ್ಯವಸ್ಥೆಯನ್ನು ಹೊಂದಿರುವ ಸರಕಾರಿ ಪೌಢ ಶಾಲೆಯಾಗಿದ್ದು ಮಗು-ಸ್ನೇಹಿ ಮತ್ತು ಪರಿಸರ ಸೇರಿ ವಾತಾವರಣದೊಂದಿಗೆ ಗುಣಾತ್ಮಕ ಮತ್ತು ರಚನಾತ್ಮಕ ಶಿಕ್ಷಣ ನೀಡುವುದೇ ಶಾಲೆಯ ಉದ್ದೇಶ ಎದ್ದು ಕಾಣುತ್ತದೆ.
ಬೌತಿಕ ಸವಲತ್ತುಗಳು : ದಾನಿಗಳ ಸಹಕಾರದಿಂದ ಅತ್ಯಂತ ಸುಸಜ್ಜಿತ ಶೌಚಾಲಕ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮಕ್ಕಳ ಸುರಕ್ಷತೆಗಾಗಿ ಒಟ್ಟು 16 ಸಿಸಿ ಕ್ಯಾಮರಾಗಳು, ರಂಗ ಮಂದಿರ ಸಭಾಂಗಣ, ಇಂಟರ್‌ಲಾಕ್ ಅಳವಡಿಕೆ, ಶಾಲೆಗೆ ಕಂಪ್ಯೂಟರ್, ಸೋಲಾರ್ ಅಳವಡಿಕೆಯ ಸ್ಮಾಟ್ ಕ್ಲಾಸ್ ರೂಂ, ಸುಸಜ್ಜಿತ ಅಡುಗೆಕೋಣೆ, ಸೌಂಡ್ ಸಿಸ್ಟಮ್, ಆವರಣ ಗೋಡೆ, ಬಡ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳು, ಬಸ್ ಪಾಸ್ ವ್ಯವಸ್ಥೆ ಇರುವುದೇ ಇಲ್ಲಿನ ವಿಶೇಷ.
************
ವಗ್ಗ ಸರಕಾರಿ ಪ್ರೌಢ ಶಾಲೆಯು ಸಮಗ್ರ ಅಭಿವೃದ್ಧಿಗೆ ದಾನಿಗಳ ಸಹಕಾರ ಶಾಲಾಭಿವೃದ್ಧಿ ಸಮಿತಿಯ ಪ್ರೋತ್ಸಾಹ ಮತ್ತು ಅಧ್ಯಾಪಕ ವೃಂದದ ಸತತ ಪ್ರಯತ್ನ ಮತ್ತು ಪೋಷಕ ಸಹಕಾರವೇ ಕಾರಣ.
ಜಿನರಾಜ ಆರಿಗ, ಕಾರ್ಯಾಧ್ಯಕ್ಷರು ಸರಕಾರಿ ಪ್ರೌಢ ಶಾಲೆ ವಗ್ಗ