ವಿಟ್ಲ: ವಿಟ್ಲ ಸಮೀಪದ ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿದೆ. ಮಕ್ಕಳನ್ನೇ ಸಾಂಕೇತಿಕವಾಗಿ ದೇವಿಗೆ ಹರಕೆ ರೂಪದಲ್ಲಿ ಸಮರ್ಪಿಸಿ ಪಡೆಯುವ ವಿಶಿಷ್ಟ ನಂಬಿಕೆ, ಸಂಪ್ರದಾಯ ‘ಕಜಂಬು’ ಉತ್ಸವ ಡಿ.16ರಂದು ನಡೆಯಲಿದೆ. ಕಜಂಬು ಹರಕೆ ನೆರವೇರಿದ ಬಳಿಕ ಶ್ರೀ ಉಳ್ಳಾಲ್ತಿ ನೇಮೋತ್ಸವ ನಡೆಯಲಿದೆ.
ಮಕ್ಕಳನ್ನು ದೇವರಿಗೆ ಹರಕೆ ರೂಪದಲ್ಲಿ ಸಾಂಕೇತಿಕವಾಗಿ ಒಪ್ಪಿಸುವ ವಿಶಿಷ್ಟ ಸಂಪ್ರದಾಯವೇ ‘ಕಜಂಬು’. ವಿಟ್ಲ ಸೀಮೆಗೆ ಸಂಬಂಧಪಟ್ಟ ಗ್ರಾಮದ ಭಕ್ತಾದಿಗಳು ಹಾಗೂ ಹರಕೆ ಹೇಳಿಕೊಂಡ ಭಕ್ತರು ಸಾತ್ವಿಕ ಆಹಾರ, ಫಲಾಹಾರದ ಕಡ್ಡಾಯ 1 ದಿನದ ವ್ರತ ಅನುಷ್ಠಾನದಲ್ಲಿರಬೇಕು. (ಸಣ್ಣ ಮಗುವಾದರೆ ತಾಯಿ ಕೂಡಾ ವೃತಾಚರಣೆಯಲ್ಲಿರಬೇಕು.)
ಮಧ್ಯಾಹ್ನ ಸಣ್ಣ ಉಳ್ಳಾಲ್ತಿ ಮತ್ತು ದೊಡ್ಡ ಉಳ್ಳಾಲ್ತಿ (ಎಲ್ಯಕ್ಕೆ ಮತ್ತು ಮಲ್ಲಕ್ಕೆ)ಯ ಮೂರ್ತಿಗಳೊಂದಿಗೆ ದೇವಿಗೆ ಆಭರಣ, ಭಂಡಾರಗಳು ವಿಟ್ಲ ಅರಮನೆಯಿಂದ ದೇವಾಲಯ ಸೇರುತ್ತದೆ. ಕಜಂಬು ಜಾತ್ರೋತ್ಸವದ ರಾತ್ರಿ ದೇವಾಲಯಕ್ಕೆ ಪೂರ್ಣಕುಂಭ ಸ್ವಾಗತದಲ್ಲಿ ವಿಟ್ಲ ಅರಮನೆಯಿಂದ ಅರಸು ವಂಶದ ಹಿರಿಯರ ಆಗಮನವಾದ ಬಳಿಕ, ದೇವಿಗೆ ಮಹಾ ಮಂಗಳಾರತಿ ನಡೆಯುತ್ತದೆ. ದೇವಾಲಯದ ಹಿಂದೆ ಹರಿಯುತ್ತಿರುವ ಕಿರು ಹೊಳೆಯಲ್ಲಿ ಹರಕೆ ಹೊತ್ತ ಮಕ್ಕಳನ್ನು ಜಳಕ ಮಾಡಿಸಿ ಸಿದ್ಧರಾಗಿ ದೇವಾಲಯದ ಮುಂಭಾಗದಲ್ಲಿ ಸೇರುತ್ತಾರೆ. ದೇವಿಯರ ಪಲ್ಲಕ್ಕಿ ಉತ್ಸವ ನಡೆದ ಬಳಿಕ ಸಂಪ್ರದಾಯದಂತೆ ದೇವಿಯ ಗುಡಿಗೆ ಅಡ್ಡಬಿದ್ದು ಅಂಗಣದ ನಾಲ್ಕೂ ದಿಕ್ಕುಗಳಲ್ಲಿ ದೇವರ ಕೆಲಸ ಮಾಡುವ `ನಾಲ್ಪೋಳು’É ಎಂಬ ದೈವಮಾನಿಗಳಿಗೆ ಕಾಣಿಕೆಯಿತ್ತು, ತೆರಳಿದ ನಂತರ ದೇವರ ಗರ್ಭಗುಡಿಯ ಮೆಟ್ಟಿಲಿಗೆ ಮಕ್ಕಳ ತಲೆಯನ್ನು ಸ್ಪರ್ಶಿಸಿ ಹರಕೆ ಒಪ್ಪಿಸಿಕೊಳ್ಳುತ್ತಾರೆ.
ಆದರೆ ಈ ಬಾರಿ ಕೋವಿಡ್ ನಿಯಮ ಜಾರಿಯಲ್ಲಿರುವ ಕಾರಣ ಕ್ಷೇತ್ರದಲ್ಲಿ ಹರಕೆ ಸಲ್ಲಿಸುವ ಮಕ್ಕಳಿಗೆ ಪವಿತ್ರ ಜಲ ಪ್ರೋಕ್ಷಣೆ ಮಾಡುವ ಮೂಲಕ ‘ಕಜಂಬು’ ಹರಕೆ ಸಮರ್ಪಣೆ ಮಾಡಲಾಗುತ್ತಿದೆ.














