ವಿಟ್ಲ: ಕೊರೊನಾ ವೈರಾಣು ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಸಮಾಜದಲ್ಲಿ ಆತಂಕ ಮನೆ ಮಾಡಿದೆ. ಈ ಸಂದರ್ಭದಲ್ಲಿ ಕೋವಿಡ್-19 ನಿರ್ವಹಣೆ ಕುರಿತಂತೆ ಸಮಾಜದಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕಾಗಿದೆ. ವಿವಿಧ
ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ಸಕ್ರಿಯರಾಗಿರುವ ಕಾರ್ಯಕರ್ತರಿಗೆ ಈ ಕುರಿತಂತೆ ತರಬೇತಿ ನೀಡುವ ಅಗತ್ಯವಿದ್ದು, ಈ ಹಿನ್ನೆಲೆ ವಿಟ್ಲ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಹಾಗೂ ಟೋಪ್ಕೋ ಜ್ಯುವೆಲ್ಲರಿ ವಿಟ್ಲ ಮತ್ತು ಪುತ್ತೂರು
ಸಹಯೋಗದೊಂದಿಗೆ ಕೋವಿಡ್-19 ನಿರ್ವಹಣೆ ಕುರಿತಂತೆ ಕಾರ್ಯಾಗಾರವನ್ನು ಜು.9 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರ ವರೆಗೆ ನಡೆಯಲಿದೆ.

ಈ ಕಾರ್ಯಗಾರ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ದಿ ಕ್ಯಾಂಪಸ್ ಕೆರಿಯರ್ ಅಕಾಡೆಮಿಯ ಉಮರ್ ಯು.ಎಚ್. ಬರಲಿದ್ದಾರೆ. ಶಿಬಿರದಲ್ಲಿ ಜನಜಾಗೃತಿಯ ಅಗತ್ಯತೆ ಮತ್ತು ವಿಧಾನಗಳು, ಮುಂದಿನ ಸವಾಲುಗಳು, ‘ಒತ್ತಡ ನಿರ್ವಹಣೆ’ಯ ಕೌನ್ಸಿಲಿಂಗ್, ಸರಕಾರದ ಯೋಜನೆಗಳು ಹಾಗೂ ಕೊರೊನ ಸೋಂಕಿತರ ನಿರ್ವಹಣೆ ಮತ್ತು ಮೃತರ ಅಂತ್ಯಸಂಸ್ಕಾರ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಿಂದ, ವೈದ್ಯರಿಂದ ಮಾಹಿತಿ, ಮಾರ್ಗದರ್ಶನ ನೀಡಲಾಗುವುದು.
ಕಾರ್ಯಾಗಾರದಲ್ಲಿ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ನೀಡಲಾಗುವುದು. ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯವಾಗಿದೆ. ಮೊದಲು ಹೆಸರು ನೋಂದಾಯಿಸುವ 30 ಮಂದಿಗೆ ಮಾತ್ರ ಅವಕಾಶ. ಆಸಕ್ತರು +91 90088 57506 ಅಥವಾ +91 9900802040 ಈ ಮೊಬೈಲ್ ನಂಬರ್ ಅನ್ನು ಸಂಪರ್ಕಿಸಬಹುದು. ಹೆಸರು, ಊರು, ಮೊಬೈಲ್ ನಂಬರ್ ಅನ್ನು ನೋಂದಾಯಿಸಬಹುದು. ಎರಡು ತಾಸಿನ ಕಾರ್ಯಾಗಾರಕ್ಕೆ ಸಮಯಕ್ಕೆ 15 ನಿಮಿಷ ಮುಂಚಿತವಾಗಿ ಆಗಮಿಸಬೇಕು. ಸಮಯಾನುಸಾರ ಉಪಹಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

