ವಿಟ್ಲ: ಯುವವಾಹಿನಿ ನಡೆಸುತ್ತಿರುವ ನಾನಾ ಚಟುವಟಿಕೆಗಳು ಬಿಲ್ಲವ ಸಮಾಜದ ಪ್ರತಿಭಾನ್ವೇಷಣೆಗೆ ನೆರವಾಗುತ್ತಿದೆ ಎಂದು ಬಹುಭಾಷಾ ಚಲನಚಿತ್ರನಟ ರಾಜಶೇಖರ ಕೋಟ್ಯಾನ್ ಅಭಿಪ್ರಾಯಪಟ್ಟರು. ಅವರು ಅನಂತಾಡಿ ಬಾಕಿಲ ಕಂಬಳಗದ್ದೆಯಲ್ಲಿ ಭಾನುವಾರ ನಡೆದ ಯುವವಾಹಿನಿ ಅಂತರ್ ಘಟಕ ಕೋಟಿ-ಚೆನ್ನಯ ಕೆಸರುಗದ್ದೆ ಕ್ರೀಡಾಕೂಟ ದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಯಾವುದೇ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಗಳ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಯುವವಾಹಿನಿ ಸಮಜದ ಅಭ್ಯುದಯಕ್ಕೆ ಪೂರಕವಾದ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಗ್ರಾಮೀಣ ಪರಿಸರದ ನೆಲಜಲ, ಮಣ್ಣನ್ನು ಪ್ರೀತಿಸುವ ಇಂತಹಾ ಕ್ರೀಡಾಕೂಟಗಳು ಇಡೀ ಸಮಾಜಕ್ಕೆ ಹೊಸ ಚೈತನ್ಯ ನೀಡುತ್ತದೆ ಎಂದರು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಅಧ್ಯಕ್ಷತೆ ವಹಿಸಿದ್ದರು. ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ನಾರಾಯಣ ಸಾಲ್ಯಾನ್, ಬಾಕಿಲ ವೈದ್ಯನಾಥೇಶ್ವರ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೂಜಾರಿ ಜಲ್ಲಿಗುಡ್ಡೆ, ಆಡಳಿತ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಮಾಡಾವು , ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷ ಈಶ್ವರ ಪೂಜಾರಿ ಹಿರ್ತಡ್ಕ , ಬಾಕಿಲ ವೈದ್ಯನಾಥೇಶ್ವರ ದೈವಸ್ಥಾನದ ಮೊಕ್ತೇಸರ ಜನಾರ್ದನ ಪೂಜಾರಿ ಬಾಕಿಲ, ಮಾಣಿ ಯುವವಾಹಿನಿ ಘಟಕದ ಅಧ್ಯಕ್ಷ ಹರೀಶ್ ಪೂಜಾರಿ ಬಾಕಿಲ, ಕೇಂದ್ರ ಸಮಿತಿಯ ಕಾರ್‍ಯದರ್ಶಿ ಸುನಿಲ್ ಅಂಚನ್, ಸಲಹೆಗಾರ ರವಿಚಂದ್ರ ಮಾಣಿ, ಕ್ರೀಡಾ ನಿರ್ದೇಶಕಿ ಸುಪ್ರೀತಾ ಪೂಜಾರಿ, ಮಾಣಿ ಯುವವಾಹಿನಿ ಘಟಕದ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಪೂಜಾರಿ ಬಾಬನಕಟ್ಟೆ, ಮಾಣಿ ಯುವವಾಹಿನಿ ಘಟಕದ ಉಪಾಧ್ಯಕ್ಷ ಪ್ರಶಾಂತ್ ಅನಂತಾಡಿ , ಕಾರ್‍ಯದರ್ಶಿ ಸುಜಿತ್ ಅಂಚನ್ ಮಾಣಿ ಉಪಸ್ಥಿತರಿದ್ದರು.
ರಮೇಶ್ ಮುಜಲ ಸ್ವಾಗತಿಸಿದರು, ತ್ರಿವೇಣಿ ಮುಜಲ ವಂದಿಸಿದರು. ದಿನಕರ್ ಬರಿಮಾರು, ರಾಜೇಶ್ ಪೂಜಾರಿ, ಪ್ರೇಮನಾಥ್ ಕಾರ್‍ಯಕ್ರಮ ನಿರ್ವಹಿಸಿದರು.
ಹಾಸ್ಯಕಲಾವಿದರಾದ ಅನೀಶ್ ವೇಣೂರು, ಹಿತೇಶ್ ಕಾಪಿನಡ್ಕ, ಸತೀಶ್ ಬಂದಲೆ ಭಾಗವಹಿಸಿ ವಿಶೇಷ ಆಕರ್ಷಣೆ ನೀಡಿದರು.
ಪುತ್ತೂರು ಘಟಕಕ್ಕೆ ಸಮಗ್ರ ಪ್ರಶಸ್ತಿ:
ಪುತ್ತೂರು ಯುವವಾಹಿನಿ ಘಟಕ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರೆ, ಹಳೆಯಂಗಡಿ ಯುವವಾಹಿನಿ ಘಟಕ ದ್ವಿತೀಯ ಸ್ಥಾನ ಪಡೆಯಿತು. ಕೊಲ್ಯ ಯುವವಾಹಿನಿ ಘಟಕವು ಶಿಸ್ತು ಘಟಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.

