ವಿಟ್ಲ: ಕರೊನಾ ವೈರಸ್ ವಿರುದ್ಧ ಜಿಲ್ಲೆಯಲ್ಲಿ ಶನಿವಾರ ವಿಟ್ಲದಲ್ಲಿ ಯಾವೊಂದು ಅಂಗಡಿಗಳನ್ನು ತೆರೆಯದೇ ಪೂರ್ಣ ಬಂದ್ ಆಚರಿಸಿ ಯಶಸ್ವಿ ಲಾಕ್‍ಡೌನ್ ಮಾಡಲಾಯಿತು. ವಿಟ್ಲದಲ್ಲಿ ಬೆಳಗಿನಿಂದ ಬೆರಳೆಣಿಕೆಯ ವಾಹನಗಳು ಆಗಾಗ ರಸ್ತೆಯಲ್ಲಿ ಕಾಣುತ್ತಿದ್ದವು. ಮೆಡಿಕಲ್ ಅಂಗಡಿಗಳೂ ತೆರೆಯಲಿಲ್ಲ. ಈ ಮಧ್ಯೆ ವಿಟ್ಲದಲ್ಲಿ ಒಂದೇ ಒಂದು ಪೆಟ್ರೋಲ್ ಬಂಕ್ ತೆರೆದಿದ್ದು, ಅವಶ್ಯಕ ಇಂಧನಕ್ಕೆ ಸಹಕರಿಸಿತ್ತು.


ಮುಚ್ಚಲಾಗಿದ್ದ ಒಳ ರಸ್ತೆಗಳು : ವಿಟ್ಲ ವ್ಯಾಪ್ತಿಯ ಗ್ರಾಮಗಳೊಳಗೆ ಸಂಪರ್ಕಿಸುವ ಒಳ ರಸ್ತೆಗಳನ್ನು ಸ್ಥಳೀಯರು ಕೆಂಪು ಕಲ್ಲುಗಳನ್ನು ಒಂದರ ಮೇಲೊಂದು ಇಟ್ಟು ಗೋಡೆ ನಿರ್ಮಿಸಿ ಮುಚ್ಚಿದ್ದರು. ಕೆಲವು ಕಡೆ ಮಣ್ಣು ಗುಡ್ಡೆ ಹಾಕಿ, ಅದರ ಮೇಲೆ ಮರದ ಗೆಲ್ಲುಗಳನ್ನು ಅಡ್ಡ ಹಾಸಲಾಗಿತ್ತು.
ಕರೊನಾ ವೈರಸ್ ತಡೆಗಟ್ಟುವ ನೆಪದಲ್ಲಿ ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಗಳನ್ನು ಸಕಾರಣವಿಲ್ಲದೇ ಮುಚ್ಚಿದ ಕಾರಣ ಗ್ರಾಮದೊಳಗೆ ಬರುವ ಹಲವರಿಗೆ ತೊಂದರೆಯೂ ಎದುರಾಯಿತು. ಗ್ರಾಮದೊಳಗಿಂದ ಅನಾರೋಗ್ಯಪೀಡಿತರಾಗಿ ಆಸ್ಪತ್ರೆಗೆ ಸಾಗುವವರಿಗೆ ಪರ್ಯಾಯ ರಸ್ತೆ ಇಲ್ಲದ ಕಾರಣ ಪರದಾಡುವ ಪರಿಸ್ಥಿತಿಯೂ ಎದುರಾಯಿತು.
ವಿಟ್ಲದಿಂದ ಪುತ್ತೂರಿಗೆ ಸಾಗುವ ರಸ್ತೆಯಲ್ಲಿ ಉರಿಮಜಲು-ಕೋಲ್ಪೆ ರಸ್ತೆ, ವಿಟ್ಲಮೂಡ್ನೂರು ಗ್ರಾಮದ ಕೆಮನಾಜೆ ಜಂಕ್ಷನ್, ಕುಳ ಗ್ರಾಮದ ಓಜಾಲ ಮುಂತಾದೆಡೆಗಳಲ್ಲಿ ಸ್ಥಳೀಯರಿಂದಲೇ ರಸ್ತೆ ಮುಚ್ಚುಗಡೆಯಾಗಿತ್ತು. ದೂರದೂರುಗಳಿಂದ ಅಪರಿಚಿತರು ಒಳ ಸಂಪರ್ಕ ರಸ್ತೆಗಳಲ್ಲಿ ಅವ್ಯಾಹತವಾಗಿ ಸಂಚರಿಸುತ್ತಾರೆ, ಗಾಂಜಾ ಸರಬರಾಜು ಮಾಡುವ ಅಡ್ಡದಾರಿಯ ದಂಧೆಯೂ ನಡೆಯುತ್ತದೆ ಎಂಬ ಆರೋಪದ ಆದಾರದಲ್ಲಿ ರಸ್ತೆ ಮುಚ್ಚಲಾಗಿತ್ತೆನ್ನಲಾಗಿದೆ.
ಅಗ್ಗದಲ್ಲಿ ಬಿಕರಿಯಾಗುತ್ತಿರುವ ಮಾಂಸದ ಕೋಳಿಗಳು: ಲಾಕ್‍ಡೌನ್‍ನಿಂದ ಎಲ್ಲಾ ವ್ಯವಹಾರಗಳು ಸ್ಥಗಿತವಾದ ಹಿನ್ನೆಲೆಯಲ್ಲಿ ಕೋಳಿ ಸಾಕಾಣಿಕ ಫಾರಂಗಳಲ್ಲಿಯೇ ಉಳಿದಿದ್ದ ಕೋಳಿಗಳು ಅಗ್ಗದ ಬೆಲೆಯಲ್ಲಿ ಬಿಕರಿಯಾಗುವುದ ಸಾಮಾನ್ಯವಾಗಿದೆ. ಬಾಯ್ದೆರೆ ಮಾಹಿತಿ, ವೈಕ್ತಿಕ ಮೊಬೈಲ್ ಸಂಪರ್ಕದ ಮೂಲಕ ಕೋಳಿ ಫಾರಂಗಳ ಮಾಲಿಕರು ಫಾರಂನಲ್ಲಿದ್ದ ಮಾಂಸದ ಕೋಳಿಗಳನ್ನು ಅಲ್ಲಿಯೇ ತೂಕ ಮಾಡಿ ಮಾರುತ್ತಿದ್ದಾರೆ. ಎರಡು ದಿನಗಳ ಹಿಂದೆ ಕೆ.ಜಿ 40 ರೂ.ಗಳಿಗೂ ಸಿಗುತ್ತಿತ್ತು. ಆದರೆ ಈಗ ಕೋಳಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಮಾಂಸದ ಬೇಡಿಕೆ, ಗ್ರಾಹಕರ ಸಂಖ್ಯೆ ಹೆಚ್ಚಾದ ಕಾರಣ ಕೆ.ಜಿ ಒಂದಕ್ಕೆ 65 ರೂ.ಗಳಂತೆ ಮಾರಾಟವಾಗುತ್ತಿತ್ತೆನ್ನಲಾಗಿದೆ. ಆದರೆ ಇವೆಲ್ಲವೂ ತೀರಾ ಗ್ರಾಮೀಣ ಪ್ರದೇಶಗಳಲ್ಲಿರುವ ಕೋಳಿ ಫಾರಂಗಳಲ್ಲಿ ಮಾತ್ರ ಲಭ್ಯವಾಗುತ್ತಿತ್ತು.


ಗಡಿ ಗೇಟ್ ಬಂದ್: ಕೇರಳ ಸರಕಾರಕ್ಕೆ ನುಂಗಲಾರದ ತುತ್ತು. ಕರ್ನಾಟಕದೊಳಗೆ ಅಕ್ರಮವಾಗಿ ಪ್ರವೇಶಿಸಲು ಯಾವುದೇ ದಾರಿ ಇಲ್ಲದಂತೆ ಆಗಿರುವುದು ಪಿಣರಾಯಿ ಸರಕಾರದ ನಿದ್ದೆಗೆಡಿಸುವಂತೆ ಮಾಡಿದ್ದು, ವಾರದಿಂದ ನೆನಪಿಲ್ಲದ ಭೂಪ್ರದೇಶದ ನೆನಪು ಶನಿವಾರ ಇದ್ದಕ್ಕಿದ್ದಂತೆ ಕೇರಳ ಸರಕಾರಕ್ಕೆ ಆಗಿದೆ.
ಅಡ್ಯನಡ್ಕ ಪ್ರದೇಶದಲ್ಲಿ ಎಣ್ಮಕಜೆ ಗ್ರಾಮದ ಒಂದಷ್ಟು ಭೂ ಭಾಗವಿದ್ದು, ಇಲ್ಲಿನ ಮನೆಯವರ ವ್ಯವಹಾರ ಓಡಾಟ ಎಲ್ಲವೂ ಕರ್ನಾಟಕದ ಜತೆಗೆ ಇದೆ. ಕೇರಳದಲ್ಲಿ ಕೊರೊನಾ ಪ್ರಕರಣದ ಸಂಖ್ಯೆ ಗಣನೀಯವಾಗಿ ಹೆಚ್ಚುತಿರುವುದರಿಂದ ಚಿಕಿತ್ಸೆಗೆ ಕರ್ನಾಟಕವನ್ನು ಆಶ್ರಯಿಸಬಹುದೆಂಬ ಆಲೋಚನೆಯೂ ರಸ್ತೆಗಳನ್ನು ಬಂದ್ ಮಾಡಿದ ಕಾರಣ ತಲೆಕೆಳಗಾಗಿದೆ. ಒಳ ರಸ್ತೆಗಳಲ್ಲಿಯೂ ಸ್ಥಳೀಯರು ನಿಗಾ ಇಟ್ಟು ಅಧಿಕಾರಿಗಳ ಗಮನಕ್ಕೆ ತರುತ್ತಿರುವುದು ಬಿಸಿ ತುಪ್ಪವಾಗಿದೆ.
ತೊಕ್ಕೊಟ್ಟಿನಲ್ಲಿ ದಿನಸಿ ಹಾಗೂ ಅಗತ್ಯವಸ್ತುಗಳ ವಾಹನ ಬಿಡುವುದು ಬಿಟ್ಟರೆ ಯಾವುದೇ ಆಂಬ್ಯುಲೆನ್ಸ್ ವಾಹನ ಬಿಡದಂತೆ ಸಂಸದ ನಳಿನ್ ಕುಮಾರ್ ಅಧಿಕಾರಿಗಳಿಗೆ ತಾಕೀತು ಮಾಡಿದ ಬೆನ್ನಲ್ಲೆ ಸಾರಡ್ಕ ಚೆಕ್ ಪೋಸ್ಟ್ ಮುಚ್ಚಿದ್ದಾರೆಂಬ ತಗಾದೆ ತೆಗೆಯಲು ಕೇರಳ ಸರಕಾರ ಆರಂಭಿಸಿದೆ. ಕೇರಳದ ಭೂಭಾಗಕ್ಕೆ ಸಂಪರ್ಕ ಕಲ್ಪಿಸಲಾದರೂ ಚೆಕ್ ಪೋಸ್ಟ್ ತೆರೆಯಬೇಕೆಂಬ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಮಾಡಲಾಗುತ್ತಿದೆ.
ಶನಿವಾರ ಸಾರಡ್ಕ ಚೆಕ್ ಪೋಸ್ಟ್ ಗೆ ಕೇರಳದ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಫೋಟೋಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಸಾರಡ್ಕ ಚೆಕ್‍ಪೋಸ್ಟ್ ತೆರೆದದ್ದೇ ಆದರೆ ವಿಟ್ಲ ಪ್ರದೇಶವೂ ಕರೊನಾ ವೈರಸ್‍ಗೆ ತತ್ತರಿಸುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ಸಾರಡ್ಕ ಗೇಟ್ ತೆರೆಯಬಾರದು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.












