ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಮಿಥುನ್ ರೈಯವರು ಪಕ್ಷದ ಕಾರ್ಯಕರ್ತರೊಂದಿಗೆ ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕರೊಂದಿಗೆ ಮತಯಾಚಿಸಿದರು.
ಮೇಗಿನ ಪೇಟೆಯಿಂದ ಆರಂಭಗೊಂಡ ಮೆರವಣಿಗೆಯೂ ಖಾಸಗಿ ಬಸ್ಸುನಿಲ್ದಾಣ, ಸಂತೆ ರಸ್ತೆ ಆಗಿ ಸರಕಾರಿ ಬಸ್ಸು ನಿಲ್ದಾಣದವರೆಗೆ ಸಾಗಿ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಕೊನೆಗೊಂಡಿತು. ಬಳಿಕ ಮಿಥುನ್ ರೈಯವರು ಬಳಿಕ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಶ್ರೀ ದೇವರ ದರ್ಶಣ ಪಡೆದರು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಸ್ವಾಗತಿಸಿದರು. ಬಳಿಕ ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಉಮ್ಮರ್ ಸಅದಿ ಅವರ ನೇತೃತ್ವದಲ್ಲಿ ಹಾಗೂ ವಿಟ್ಲ ಶೋಕ ಮಾತಾ ಚರ್ಚ್‌ನಲ್ಲಿ ಧರ್ಮಗುರು ಎರಿಕ್ ಕ್ರಾಸ್ತಾ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್ ಮಹಮ್ಮದ್, ಮಂಜುಳಾ ಮಾಧವ ಮಾವೆ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ವಕ್ತಾರ ರಮಾನಾಥ ವಿಟ್ಲ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ಸುನಿತಾ ಕೋಟ್ಯಾನ್, ನಾಮನಿರ್ದೇಶಿತ ಸದಸ್ಯರಾದ ಸಮೀರ್ ಪಳಿಕೆ, ಭವಾನಿ ರೈ ಕೊಲ್ಯ, ಪ್ರಭಾಕರ ಭಟ್ ಮಾವೆ, ಮಾಣಿಲ ಗ್ರಾ.ಪಂ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ.ಕೆ.ಎಂ ಅಶ್ರಫ್, ಯು.ಟಿ ತೌಸಿಫ್ ಭಾಗವಹಿಸಿದ್ದರು.


ಜಿಲ್ಲೆಯ ಮತದಾರರು ಬದಲಾವಣೆಗೆ ಕಾತರರಾಗಿದ್ದಾರೆ -ಮಿಥುನ್ ರೈ
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ಹೊರಬಂದ ಮಿಥುನ್ ರೈಯವರು ಪತ್ರಕರ್ತರೊಂದಿಗೆ ಮಾತನಾಡಿ ಜಿಲ್ಲೆಯ ಪ್ರಜ್ಞಾವಂತ ಮತದಾರರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಬದಲಾವಣೆಯ ವಾತಾವರಣ ಸೃಷ್ಟಿಯಾಗುತ್ತಿದೆ. ಜಿಲ್ಲೆಯ ನಾಗರೀಕರಿಗೆ ಶೂನ್ಯ ಪ್ರಗತಿಯ ಜಿಲ್ಲೆಯಿಂದ ಪೂರ್ಣ ಪ್ರಗತಿಯ ಜಿಲ್ಲೆಯಾಗಬೇಕೆನ್ನುವ ನಿರೀಕ್ಷೆ ಇದೆ. ಯುವಕರ ಕಷ್ಟಕ್ಕೆ ಸಹಕಾರ ನೀಡುವ ಓರ್ವ ನಾಯಕ ಬೇಕೆನ್ನುವ ನಿರೀಕ್ಷೆ ಇದೆ. ಯುವಕರ ಧ್ವನಿಯಾಗಿ ಲೋಕಸಭೆಯಲ್ಲಿ ಸ್ಪಂದಿಸುವ ನಾಯಕರ ಕೊರತೆ ಇದೆ. ದ.ಕ ಜಿಲ್ಲೆಯ ಎಲ್ಲಾ ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿ ನನ್ನನ್ನು ಆಯ್ಕೆ ಮಾಡಿ ಅವರ ಕಷ್ಟಕ್ಕೆ ಸ್ಪಂದಿಸುವ ನಾಯಕನನ್ನಾಗಿ ಮಾಡುತ್ತಾರೆ ಎನ್ನುವ ಭರವಸೆ ಇದೆ ಎಂದರು.