ವಿಟ್ಲ: ಭಾರತ ಬಂದ್‌ನ ಬಿಸಿ ವಿಟ್ಲದಲ್ಲಿ ಕೊಂಚ ಮಟ್ಟಿಗಷ್ಟೇ ತಟ್ಟಿದ್ದು ಕಂಡು ಬಂದಿತು. ಹೆಚ್ಚಿನ ಖಾಸಗಿ ಬಸ್ಸುಗಳು, ಕೆಲವು ಟ್ಯಾಕ್ಸಿ, ಕೆಲ ಅಟೋ ರಿಕ್ಷಾಗಳನ್ನು ಬಿಟ್ಟರೆ ಸರಕಾರಿ ಬಸ್ಸುಗಳು ಹಾಗೂ ಇತರ ಖಾಸಗಿ ವಾಹನಗಳು ಮಾಮೂಲಿಯಂತೆ ಸಂಚರಿಸುತ್ತಿದ್ದವು. ಆದರೆ ಪೇಟೆಯ ಅಂಗಡಿ ಮುಗ್ಗಟ್ಟುಗಳು ಅರ್ಧದಷ್ಟು ಬಾಗಿಲು ಮುಚ್ಚಿದ್ದವು. ಹಾಲು, ಮೆಡಿಕಲ್ ಶಾಪ್, ದಿನಸಿ ಅಂಗಡಿಗಳು, ಹೋಟೆಲ್‌ಗಳು, ಬಾರ್, ವೈನ್‌ಶಾಪ್‌ಗಳು ಎಂದಿನಂತೆ ವ್ಯವಹಾರ ನಡೆಸಿದವು. ಶಾಲಾ ಕಾಲೇಜುಗಳಿಗೆ ರಜೆ ಸಾರಿದ್ದರಿಂದ, ಬಂದ್‌ನ ಬಗ್ಗೆ ಮೊದಲೇ ತಿಳಿದಿದ್ದ ಕಾರಣ ಪೇಟೆಯಲ್ಲಿ ಜನ ಸಂಚಾರ, ವ್ಯವಹಾರ ಕಡಿಮೆಯಾಗಿತ್ತು. ವಿಟ್ಲ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದೇ ಬಂದ್ ಶಾಂತವಾಗಿತ್ತು.


ಎಂದಿನಂತೆ ನಡೆದ ವಾರದ ಸಂತೆ: ವಿಟ್ಲದಲ್ಲಿ ಮಂಗಳವಾರ ವಾರದ ಸಂತೆ ದಿನವಾಗಿದ್ದ ಕಾರಣ ಸಂತೆ ಮಾರುಕಟ್ಟೆಯಲ್ಲಿ ಸಂತೆ ವ್ಯವಹಾರ ಎಂದಿನಂತೆ ನಡೆಯಿತು. ಬಂದ್‌ನ ಬಿಸಿ ಸಂತೆಗೆ ಮುಟ್ಟಲೇ ಇಲ್ಲ. ಸಂತೆಗೆ ಸರಕು ಮಾಮೂಲಿಯಂತೆ ಬಂದಿತ್ತು. ಹಸಿ ತರಕಾರಿ ಕಾಯಿಪಲ್ಲೆ, ಹಣ್ಣುಹಂಪಲು, ದಿನಸಿ, ಒಣಮೀನು ಎಲ್ಲವೂ ಸಂತೆಯೊಳಗೆ ಇದ್ದ ಕಾರಣ ಬಂದ್ ಎಂದು ಗೊತ್ತಾಗುತ್ತಿರಲಿಲ್ಲ. ಆದರೆ ವ್ಯಾಪಾರ, ವ್ಯವಹಾರದ ಬಿರುಸುತನ ಕಡಿಮೆಯಾಗಿತ್ತು. ಸಂತೆ ಬರುವವರು ಬರುತ್ತಲೇ ಇದ್ದರು.