ವಿಟ್ಲ: ಯುವ ಪೀಳಿಗೆಗೆ ಮಣ್ಣಿನ ಮಹತ್ವದ ಬಗ್ಗೆ ಮಾಹಿತಿ ಅತ್ಯಗತ್ಯವಾಗಿದೆ. ಆಟಿ ಆಚರಣೆಗಳು ನಮ್ಮ ಹಿರಿಯರು ಬದುಕಿನಲ್ಲಿ ಅನುಭವಿಸಿದ್ದ ಸಂಕಷ್ಟ, ಸವಾಲು, ಜೀವನ ಪದ್ಧತಿಗಳ ಬಗ್ಗೆ ತಿಳಿಯುವುದರೊಂದಿಗೆ ಅವರ ಆಚಾರ ವಿಚಾರ, ಆಹಾರ ಪದ್ಧತಿ, ಕೃಷಿ ಸಂಸ್ಕೃತಿಗಳನ್ನು ನೆನಪಿಸಲು ಪೂರಕವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿನ ಸಹಾಯಕ ಕಾರ್ಯದರ್ಶಿ ಸಚಿನ್ ಕುಮಾರ್ ಹೇಳಿದರು. ಮಕ್ಕಳ
ಅವರು ಭಾನುವಾರ ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ವತಿಯಿಂದ ನಡೆದ ಬಿರುವೆರ್‍ನ ಆಟಿಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇವಲ ಸಂಘಗಳನ್ನು ಕಟ್ಟಿಕೊಂಡಾಗ ಮಾತ್ರ ಸಂಘಟನೆ ನೈಜ ಉದ್ದೇಶ ಈಡೇರುವುದಿಲ್ಲ. ಬಿಲ್ಲವರು ಸ್ವಾರ್ಥಪರ ಹೋರಾಟಗಳನ್ನು ಬದಿಗಿರಿಸಿ ಸಮಾಜಪರ ಉತ್ತಮ ಕಾರ್ಯಗಳಲ್ಲಿ ಸಂಘಟನೆಗಳನ್ನು ತೊಡಗಿಸಬೇಕು. ಆಟಿ ಆಚರಣೆ ತುಳುನಾಡಿನ ಮೂಲನಂಬಿಕೆ ಉಳಿಯಲು ಪ್ರೇರಣೆಯಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಂಟ್ವಾಳದ ವಕೀಲ ಪದ್ಮನಾಭ ಪೂಜಾರಿ ಸಣ್ಣಗುತ್ತು ತಿಳಿಸಿದರು.
ಕುಂಡಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಹರೀಶ್ ಪೂಜಾರಿ ಮರುವಾಳ ಅಧ್ಯಕ್ಷತೆ ವಹಿಸಿದ್ದರು. ಭಾರತ ಶಾಮಿಯಾನದ ಸಂಜೀವ ಪೂಜಾರಿ, ಕುಂಡಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷ ದೇಜಪ್ಪ ಪೂಜಾರಿ ನಿಡ್ಯ, ಕೋಶಾಧಿಕಾರಿ ಕೃಷ್ಣಪ್ಪ ಪೂಜಾರಿ ಬೇರಿಕೆ, ಮಹಿಳಾ ಘಟಕದ ಗೌರವಾಧ್ಯಕ್ಷೆ ಸುಮ ದೇಜಪ್ಪ ಪೂಜಾರಿ, ಅಧ್ಯಕ್ಷೆ ಬಬಿತಾ ಉಮೇಶ್ ಉಪಸ್ಥಿತರಿದ್ದರು.
ಮೋಹನ್ ಗುರ್ಜಿನಡ್ಕ ಸ್ವಾಗತಿಸಿದರು. ಯಶು ಕಟ್ನಾಜೆ ವಂದಿಸಿದರು. ಹರೀಶ್ ನೀರಕೋಡಿ ಕಾರ್‍ಯಕ್ರಮ ನಿರೂಪಿಸಿದರು.
ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು. ವಸಂತ ಸುವರ್ಣ ಬನ್ನೂರು ಹಾಗೂ ಸ್ಥಳೀಯರಿಂದ ಭಕ್ತಿಗೀತೆ ನಡೆಯಿತು. ಇದೇ ಸಂದರ್ಭದಲ್ಲಿ ನವವಿವಾಹಿತರಾದ ಸತೀಶ್-ಸೌಜನ್ಯ ಹಾಗೂ ಭಾರತಿ-ರಮೇಶ್ ದಂಪತಿಗಳನ್ನು ಗುರುತಿಸಿ ನೆನಪಿನ ಕಾಣಿಕೆ ನೀಡಲಾಯಿತು. ತುಳುನಾಡಿನಲ್ಲಿ ಬಳಸಲ್ಪಡುವ ಆಟಿ ತಿಂಗಳ ವಿಶೇಷ ೨೧ ಖಾದ್ಯಗಳನ್ನು ಹಂಚಲಾಯಿತು.

