ವಿಟ್ಲ: ಕೋವಿಡ್-19 ಹಿನ್ನೆಲೆಯಲ್ಲಿ ಕೆಲವೊಂದು ಲೋಪಗಳು ಆಗಿದ್ದು, ಸದಸ್ಯರ ಬೇಡಿಕೆಯಂತೆ ಮುಂದಿನ ಆರ್ಥಿಕ ವರ್ಷದಲ್ಲಿ ಅದನ್ನು ಸರಿಪಡಿಸಲಾಗುವುದು. ಕಲ್ಲಡ್ಕ ಶಾಖೆಗೆ ಸ್ವಂತ ಕಟ್ಟಡಕ್ಕೆ ನಿವೇಶನ ಕಾಯ್ದಿರಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಒಪ್ಪಿಗೆ ದೊರೆತ ತಕ್ಷಣ ನಿರ್ಮಾಣ ಕಾರ್ಯಪ್ರವೃತ್ತರಾಗುತ್ತೇವೆ ಎಂದು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷ ಎಚ್. ಜಗನ್ನಾಥ ಸಾಲ್ಯಾನ್ ಹೇಳಿದರು.
ಅವರು ಬುಧವಾರ ವಿಟ್ಲ ಬೊಬ್ಬೆಕೇರಿ ಅಕ್ಷಯ ಸಮುದಾಯ ಭವನದಲ್ಲಿ ನಡೆದ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ ೬೫ ನೇ ವರ್ಷದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2019-20ನೇ ಸಾಲಿನಲ್ಲಿ ಠೇವಣಾತಿಯಲ್ಲಿ ಶೇ.8.84 ಏರಿಕೆಯಾಗಿದ್ದು, 98.05 ಕೋಟಿ ಠೇವಣಾತಿಯನ್ನು ಹೊಂದಿದೆ. ಸಾರ್ವಜನೋಪಕಾರ ನಿಧಿಯಿಂದ 5.54 ಲಕ್ಷವನ್ನು ಸಾರ್ವಜನಿಕ ಕಾರ್ಯಕ್ಕೆ ಬಳಸಲಿದ್ದು, ಕೋವಿಡ್ 19 ರಿಂದ ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕ ಕಿಟ್ ವಿತರಿಸುವ ನಿಟ್ಟಿನಲ್ಲಿ 50 ಸಾವಿರ ವಿನಿಯೋಗಿಸಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ನೆಪ್ಟ್, ಆರ್.ಟಿ.ಜಿ.ಎಸ್. ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಕೃಷ್ಣಮುರಳಿ ಶ್ಯಾಮ್ ಕೆ. ಮಾತನಾಡಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 474.23 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿ 1.55 ಕೋಟಿ ನಿವ್ವಳ ಲಾಭ ಗಳಿಸಿದೆ. 6402 ಸದಸ್ಯರಿದ್ದು, 2.29ಕೋಟಿ ಪಾಲು ಬಂಡವಾಳವನ್ನು ಹೊಂದಿದೆ. ಆಡಿಟ್ ವರ್ಗೀಕರಣದಲ್ಲಿ ಕಳೆದ ಕೆಲವು ವರ್ಷಗಳಿಂದ ಸತತವಾಗಿ ಎ ತರಗತಿಯಲ್ಲಿ ಮುನ್ನಡೆಯುತ್ತಿದೆ. ಕರೊನಾ ಸಂಕಷ್ಟದ ಮಧ್ಯೆಯೂ ಶೇ.89.08 ಸಾಲ ವಸೂಲಾತಿ ನಡೆದಿದೆ ಎಂದು ತಿಳಿಸಿದರು.
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ ನಿರ್ದೇಶಕರಾದ ಎಂ. ಹರೀಶ್ ನಾಯಕ್, ವಿಶ್ವನಾಥ ಎಂ., ಕೃಷ್ಣ ಕೆ., ಉದಯಕುಮಾರ್ ಎ., ಬಾಲಕೃಷ್ಣ ಪಿ. ಎಸ್, ದಿವಾಕರ ವಿ, ದಯಾನಂದ ಆಳ್ವ ಕೆ, ಸುಂದರ ಡಿ, ಗೋವರ್ಧನ ಕುಮಾರ್ ಐ, ಶುಭಲಕ್ಷ್ಮಿ, ಜಯಂತಿ ಎಚ್. ರಾವ್ ಉಪಸ್ಥಿತರಿದ್ದರು.


ಬಿ.ಸಿ.ರೋಡು ಶಾಖೆಯ ಪ್ರಭಾರ ಶಾಖಾಧಿಕಾರಿ ಕೆ. ಶ್ರೀನಿಧಿ ವಿ. ಕುಡ್ವ ಪ್ರಾರ್ಥಿಸಿದರು. ಮನೋರಂಜನ್ ಕೆ. ಆರ್. ಹಿಂದಿನ ವರ್ಷದ ಸಭೆಯ ನಡವಳಿಕೆಗಳ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಮೋಹನ್ ಕೆ. ಎಸ್. ವಂದಿಸಿದರು. ವಿಟ್ಲ ಕಚೇರಿ ಸಿಬ್ಬಂದಿ ಮಹೇಶ್ ಕುಮಾರ್ ಎಸ್. ಕಾರ್ಯಕ್ರಮ ನಿರೂಪಿಸಿದರು.












