ವಿಟ್ಲ: ’ವಿಶ್ವ ಧರ್ಮ ಮಂದಿರ’ – ಇಂಡಿಯಾ ಆನ್ ದ ಮೂವ್’ ಅಭಿಯಾನದ ಗೌರವಕ್ಕೆ ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಜಯರಾಮ ರೈ ಕಾಟುಕುಕ್ಕೆ ಆಯ್ಕೆಯಾಗಿದ್ದಾರೆ.
ಕಳೆದ 18 ವರ್ಷಗಳಿಂದ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು 2008ರಿಂದ ಪ್ರಿನ್ಸಿಪಾಲರಾಗಿ ಭಡ್ತಿಗೊಂಡು, ಸಂಸ್ಥೆಯನ್ನು ದ.ಕ. ಜಿಲ್ಲೆಯಲ್ಲಿ ಅಗ್ರಸ್ಥಾಕ್ಕೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಲ್‌ಕೆಜಿ ಯಿಂದ 10ನೇ ತರಗತಿವರೆಗೆ 1230 ಮಂದಿ ವಿದ್ಯಾರ್ಥಿಗಳು ಹಾಗೂ 60 ಮಂದಿ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿವರ್ಗವನ್ನು ಹೊಂದಿರುವ ಜೇಸಿ ಆಂಗ್ಲಮಾಧ್ಯಮ ಸಂಸ್ಥೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತ 15 ವರ್ಷಗಳಿಂದ ಶೇಕಡಾ 100 ಫಲಿತಾಂಶವನ್ನು ದಾಖಲಿಸಿದ್ದು, ಕಳೆದ ಸಾಲಿನಲ್ಲಿ ಫಲಿತಾಂಶದ ಗುಣಮಟ್ಟ ಸೂಚ್ಯಂಕದಲ್ಲಿ ಜಿಲ್ಲೆಯ 413 ಪ್ರೌಢಶಾಲೆಗಳಲ್ಲಿ 5ನೇ ಸ್ಥಾನವನ್ನು, ರಾಜ್ಯದ 10,877 ಶಾಲೆಗಳ ಪೈಕಿ 129ನೇ ಸ್ಥಾನವನ್ನು ಪಡೆದಿದೆ. ಈ ಸಂಸ್ಥೆಯ ಪ್ರಿನ್ಸಿಪಾಲ್ ಜವಾಬ್ದಾರಿಯೊಂದಿಗೆ ಗಣಿತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ವಾಗ್ಮಿ, ಹವ್ಯಾಸಿ ಯಕ್ಷಗಾನ ಕಲಾವಿದರಾಗಿ, ತಾಳಮದ್ದಳೆ ಅರ್ಥದಾರಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು ಸಂಗೀತದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ವಿದ್ಯಾರ್ಥಿಗಳನ್ನು ಸಮರ್ಪಕವಾಗಿ ಬೆಳೆಸುವಲ್ಲಿ ಪ್ರೇರಕರಾಗಿದ್ದಾರೆ.
ಶಿಕ್ಷಣದಲ್ಲಿ ಭಾರತೀಯ ವಿಚಾರಧಾರೆಗಳನ್ನು ಅಳವಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು, ಉತ್ತಮ ಗುಣನಡತೆ ಹಾಗೂ ದೇಶಪ್ರೇಮವನ್ನು ಬೆಳೆಸುವಲ್ಲಿ ಅವರು ತೋರಿದ ಆಸಕ್ತಿ ಹಾಗೂ ಈ ನಿಟ್ಟಿನಲ್ಲಿ, ಅವರ ಪ್ರಯತ್ನವನ್ನು ಪರಿಗಣಿಸಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸ್ಥಾಪಕ ಚೇರ್‌ಮೇನ್ ಪೂಜ್ಯ ಆಚಾರ್‍ಯ ಅಜಿತ್ ಕುಮಾರ್ ತಿಳಿಸಿದ್ದಾರೆ. ಎಪ್ರಿಲ್ 7 ರಂದು ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯುವ, ವಿಶ್ವಧರ್ಮಮಂದಿರ ಅಭಿಯಾನದ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಈ ಗೌರವ ಪ್ರದಾನ ಮಾಡಲಾಗಲಿದೆ. ಕಾರ್‍ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸುವ ವಿಜ್ಞಾನಿ ಪದ್ಮಶ್ರೀ ಡಾ. ಪ್ರಹ್ಲಾದ್ ರಾಮರಾವ್ ಗೌರವ ಪ್ರದಾನ ಮಾಡಲಿದ್ದಾರೆ.

