ವಿಟ್ಲ: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೆರಿಗೆ ಏರಿಕೆಗೆ ಸದಸ್ಯರಿಂದ ವಿರೋಧ ವ್ಯಕ್ತವಾದರೂ, ಕರೊನಾ ಸಂಕಷ್ಟದಲ್ಲಿರುವ ಜನರಿಗೆ ತೆರಿಗೆ ಹೆಚ್ಚಳದ ಕೊಡುಗೆಯನ್ನು ಪಟ್ಟಣ ಪಂಚಾಯಿತಿ ನೀಡಿದೆ. ಮನೆಗಳಿಗೆ ಶೇ.೧೫, ಅಂಗಡಿಗಳಿಗೆ ಶೇ.18ರಂತೆ ಏರಿಕೆಯಾಗಿದ್ದು, ಸದಸ್ಯರು ತೋರಿಕೆಗೆ ವಿರೋಧ ವ್ಯಕ್ತ ಪಡಿಸಿದ್ದಾರೆಯೇ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ಪ್ರಶ್ನಿಸಿದ್ದಾರೆ.


ಸರಕಾರದ ಮೀಸಲಾತಿಯ ಕಾರಣದಿಂದ ಅಧಿಕಾರದಲ್ಲಿ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷರಾಗಿದ್ದಾರೆ. ಬಹುಮತದ ನಿರ್ಣಯಗಳ ಮೇಲೆ ಎಲ್ಲಾ ವಿಚಾರಗಳು ಜಾರಿಗೆ ಬರುತ್ತದೆ. ಜನರು ಹಣವಿಲ್ಲದೇ ಸಂಕಷ್ಟದಲ್ಲಿರುವ ಸಮಯದಲ್ಲಿ ತೆರಿಗೆ ವಿನಾಯಿತಿ ಮಾಡಬೇಕು. ಕಟ್ಟಡ ಪರವಾನಿಗೆ ಪಡೆಯಲು ಅಗತ್ಯವಿರುವ ವಿಟ್ಲ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಲು ಶಾಸಕರು ಪ್ರಯತ್ನ ಮಾಡಬೇಕು ಎಂದು ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದರು.
ಕಸ ವಿಲೇವಾರಿಯಲ್ಲಿ ಮಾದರಿ ಎಂದು ಪ್ರಶಸ್ತಿ ಪಡೆದ ವಿಟ್ಲದಲ್ಲಿ ಇಂದು ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಪೇಟೆಯಲ್ಲಿ ಗುಡ್ಡೆ ಬೀಳಲು ಆರಂಭವಾಗುತ್ತಿದೆ. ಪ್ರತಿ 700 ಮಂದಿಗೆ ಓರ್ವ ಸಿಬ್ಬಂದಿಯ ನೇಮಕ ನಡೆದರೆ ಈ ಸಮಸ್ಯೆಯನ್ನು ಬಗೆ ಹರಿಸಬಹುದಾಗಿದೆ. ಆದರೆ ಸದ್ಯ ಕಸ ವಿಲೇವಾರಿಗೆ ನೇಮಕವಾದ ಸಿಬ್ಬಂದಿಗಳಿಂದ ಪಂಚಾಯಿತಿ ಕಚೇರಿಯಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಇದನ್ನು ಜಿಲ್ಲಾಡಳಿತ ಸರಿಯಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ ಎಂದರು.
ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ. ಕೆ. ಎಂ. ಅಶ್ರಫ್, ಉಪಾಧ್ಯಕ್ಷ ಅಶೋಕ್ ಕುಮಾರ್ ಎನ್. ಎಸ್. ಡಿ., ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ರಹಿಮಾನ್ ಕುರುಂಬಳ ಮತ್ತಿತರರು ಉಪಸ್ಥಿತರಿದ್ದರು.












