ವಿಟ್ಲ: ಕೊವೀಡ್-19 ಕೊರೋನಾ ಸಾಂಕ್ರಾಮಿಕ ರೋಗದಿಂದ ಲಾಕ್‍ಡೌನ್ ಆದೇಶ ಜಾರಿಯಲ್ಲಿದ್ದು, ಸ್ಥಳೀಯ ಸಂಸ್ಥೆಗಳಿಗೆ ಜವಾಬ್ದಾರಿ ನೀಡಿ ಕಾರ್ಯಪಡೆ ರಚಿಸಿರುವ ಸರಕಾರ, ಇದುವರೆಗೆ ಯಾವುದೇ ತುರ್ತು ಸೇವೆಗೆ ಅನುದಾನ ನೀಡಿಲ್ಲ. ಈ ಬಗ್ಗೆ ಹಲವಾರು ಸಮಸ್ಯೆಗಳನ್ನು ಎತ್ತಿಕೊಂಡು ಜನತೆ ಪ್ರತಿನಿತ್ಯ ಗ್ರಾಮ ಪಂಚಾಯತ್ ಕಚೇರಿಗಳಿಗೆ ಬಂದು ಸಹಾಯ ಯಾಚನೆ ಮಾಡುತ್ತಿದ್ದು. ಅದರಲ್ಲಿಯೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಬೇಡಿಕೆ ಅತ್ಯಗತ್ಯವಾಗಿರುತ್ತದೆ. ಇದಕ್ಕೆ ಸಹಕರಿಸಲಾಗದೇ ಗ್ರಾಮ ಪಂಚಾಯಿತಿ ಆಡಳಿತ ಮೌನವಹಿಸುವಂತಾಗಿದೆ. ಈ ಬಗ್ಗೆ ಈಗಾಗಲೇ ಪಂಚಾಯಿತಿ ಪ್ರತಿನಿಧಿಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ನಮಗೆ ಇದುವರೆಗೆ ಅಧಿಕೃತ ಯಾವುದೇ ಆದೇಶ ಬಂದಿಲ್ಲವೆಂದು ನಿರುತ್ತರಾಗಿದ್ದಾರೆ. ಇದನ್ನೆಲ್ಲ ಮನಗಂಡ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಎಲ್ಲಾ ವಿವರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀ ನಿವಾಸ ಪೂಜರಿಯವರಿಗೆ ನೀಡಿ, ತುರ್ತು ಆದೇಶ ನೀಡಲು ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.
ಮನವಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಧಿಕಾರಿಗಳಿಗೆ ಈ ಮೇಲಿನ ಸಂಬಂಧಿಸಿದ ವಿಷಯಕ್ಕೆ ಆದೇಶ ನೀಡಲು ಸೂಚಿಸಿರುವುದಾಗಿ ಒಕ್ಕೂಟದ ಅಧ್ಯಕ್ಷರಿಗೆ ಉತ್ತರಿಸಿದ್ದಾರೆ.


