ವಿಟ್ಲ : ವಿಟ್ಲ ಸೀಮೆಯ ಡೊಂಬ ಹೆಗ್ಗಡೆ ಅರಸು ಮನೆತನದ ಪಾರ್ಥಂಪಾಡಿ ಚಾವಡಿಯ ಪಟ್ಟದ ದೈವ ಶ್ರೀ ಪಾರ್ಥಂಪಾಡಿ ಜಠಾಧಾರಿ ದೈವದ ದೈವಸ್ಥಾನ, ಶ್ರೀ ನಾಗ ಸಾನ್ನಿಧ್ಯ ಮತ್ತು ಗುಳಿಗನ (ರಾಜನ್ ದೈವ) ಕಟ್ಟೆಗಳು ಸುಮಾರು 50 ಲಕ್ಷ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಪುನರ್ನಿರ್ಮಾಣಗೊಂಡಿದ್ದು, ಫೆ.6 ಮತ್ತು ಫೆ.7ರಂದು ಸ್ಥಾನ ಪ್ರದಾನ, ಪುನಃಪ್ರತಿಷ್ಠೆ ಮತ್ತು ಮೈಮೆಯು ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ ತಿಳಿಸಿದರು.
ಇದು ಪ್ರಾಚೀನ ದೈವಸ್ಥಾನಗಳಲ್ಲೊಂದು. ವಿಟ್ಲ ಸೀಮೆಯೆಂದು ಕರೆಯಲ್ಪಡುವ 19 ಗ್ರಾಮಗಳನ್ನು ಹೆಚ್ಚಿನ ಮಟ್ಟಿಗೆ ಸ್ವತಂತ್ರವಾಗಿ ಆಳುತ್ತಿದ್ದ ರಾಜವಂಶ, ವಿಟ್ಲ ಡೊಂಬ ಹೆಗ್ಗಡೆ ಅರಸು ಮನೆತನವು ವಿಟ್ಲ ಸೀಮೆಯಲ್ಲಿ 16 ದೈವ- ದೈವಸ್ಥಾನಗಳನ್ನು ನಡೆಸಿಕೊಂಡು ಬಂದಿತ್ತು. ವಿಟ್ಲ ಅರಸು ಮನೆತನದ ಪಾರ್ಥಂಪಾಡಿ ಚಾವಡಿಯ ಪಟ್ಟದ ದೈವ ಶ್ರೀ ಪಾರ್ಥಂಪಾಡಿ ಜಠಾಧಾರಿ ದೈವದ ದೈವಸ್ಥಾನವೂ ಶಿಥಿಲಗೊಂಡು ಪುನರ್ನಿರ್ಮಾಣ ಮಾಡಬೇಕೆನ್ನುವ ಆಶಯ ಭಕ್ತರದಾಗಿತ್ತು. ಜೀರ್ಣೋದ್ಧಾರವಸ್ಥೆಯಲ್ಲಿದ್ದ ಶ್ರೀ ಪಾರ್ಥಂಪಾಡಿ ಜಠಾಧಾರಿ ದೈವಸ್ಥಾನವನ್ನು ಪುನರ್ನಿರ್ಮಾಣಕ್ಕೆ ಯೋಚಿಸಿ, ದೈವಜ್ಞರಿಂದ ಪ್ರಶ್ನಾ ಚಿಂತನೆ ನಡೆಸಲಾಯಿತು. ಪ್ರಮುಖ ದೈವ ಶ್ರೀ ಜಠಾಧಾರಿ, ನಾಗನ ಸಾನ್ನಿಧ್ಯ ಮತ್ತು ಗುಳಿಗ ದೈವದ ಸಾನ್ನಿಧ್ಯವೂ ಶಿಥಿಲಗೊಂಡಿದೆ. ಅದೆಲ್ಲವನ್ನೂ ಜೀರ್ಣೋದ್ಧಾರಗೊಳಿಸಬೇಕೆಂದು ಕಂಡುಬಂದಂತೆ, ವಿಟ್ಲದ ಅರಸರು, ಒಡಿಯೂರು ಶ್ರೀಗಳು, ಮಾಣಿಲ ಶ್ರೀಗಳು ಮತ್ತು ಸೀಮೆಯ ತಂತ್ರಿಯವರ ಮಾರ್ಗದರ್ಶನದಲ್ಲಿ ದೈವಸ್ಥಾನದ ಪುನರ್ನಿರ್ಮಾಣ ನಡೆಸಲು ತೀರ್ಮಾನಿಸಲಾಯಿತು. ಜೀರ್ಣೋದ್ಧಾರ ಸಮಿತಿ ರಚಿಸಿ, ಕಾಮಗಾರಿ ಕೈಗೆತ್ತಿಕೊಂಡು ಇದೀಗ ಸಂಪೂರ್ಣಗೊಳಿಸಲಾಗಿದೆ. ಫೆ.6 ಮತ್ತು 7ರಂದು ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ನಾನಾ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಫೆ.7ರಂದು ರಾತ್ರಿ ಕೇರಳದ ಕುಡಾಲುಮೇರ್ಕಳದ ಬಾಡೂರು ಎಂಬಲ್ಲಿಂದ ಭಂಡಾರ ಆಗಮಿಸಿ, ಜಠಾಧಾರಿ ದೈವದ ಮೈಮೆ 157 ವರ್ಷಗಳ ಬಳಿಕ ನಡೆಯಲಿದೆ ಎಂದು ತಿಳಿಸಿದರು.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಬಾಬು ಕೆ.ವಿ. ಅವರು ಮಾತನಾಡಿ, ಫೆ. 5 ರಂದು ವಿಟ್ಲ ಶ್ರೀ ಪಂಲಲಿಂಗೇಶ್ವರ ದೇವಸ್ಥಾನ ದಿಂದ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಮೆರವಣಿಗೆ ಹೊರಡಲಿದೆ. ಫೆ.6ರಂದು ಸಂಜೆ 5 ಗಂಟೆಗೆ ತಂತ್ರಿಯವರು ಆಗಮಿಸಿ, ದೈವದ ಪೀಠದ ಜಲಾಧಿವಾಸಕ್ರಿಯೆ, ಆಚಾರ್ಯವರಣ, ಸ್ಥಳಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ ನೆರವೇರಿಸಲಿದ್ದಾರೆ. ಫೆ.7ಕ್ಕೆ ರಾತ್ರಿ 8.30ರಿಂದ ಧರ್ಮಸಭೆ ನಡೆಯಲಿದ್ದು, ಗೌರವಾಧ್ಯಕ್ಷ-ವಿಟ್ಲ ಅರಮನೆಯ ವಿ.ಜನಾರ್ದನ ವರ್ಮ ಅರಸರು ಅಧ್ಯಕ್ಷತೆ ವಹಿಸಲಿದ್ದಾರೆ. ಒಡಿಯೂರು ಶ್ರೀಗಳು, ಮಾಣಿಲ ಶ್ರೀ, ಕಣಿಯೂರು ಶ್ರೀ, ಬಾಳೆಕೋಡಿ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಚೆಲ್ಲಡ್ಕ ಕುಸುಮೋಧರ ಡಿ.ಶೆಟ್ಟಿ, ಕಂಬಾರು ದೇವಸ್ಥಾನದ ಬಾಡೂರು ಯಜಮಾನ ಕುಂಞಣ್ಣ ಭಂಡಾರಿ, ಜ್ಯೋತಿಷಿ ಕೆ.ಕೇಶವ ಭಟ್ ಭಾಗವಹಿಸುತ್ತಾರೆ. ತುಳುನಾಡ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಮಹೇಂದ್ರನಾಥ ಸಾಲೆತ್ತೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಪ್ರಮುಖ ರಸ್ತೆ ಬದಿಯಲ್ಲಿ ಯಾವುದೇ ಸಂತೆ ವ್ಯಾಪಾರಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಲಕ್ಷ್ಮಣ ಆರ್.ಎಸ್., ವಿಟ್ಲ ಅರಮನೆಯ ಶ್ರೀಕಂಠ ವರ್ಮ, ಸದಸ್ಯ ರವಿ ವರ್ಮ, ಕಾಶಿಮಠ ಶ್ರೀ ಕಾಶಿ ಯುವಕ ಮಂಡಲ ಅಧ್ಯಕ್ಷ ಕೇಶವ ವಿ.ಕೆ. ಮತ್ತಿತರರು ಉಪಸ್ಥಿತರಿದ್ದರು.
