ವಿಟ್ಲ: ದೇವಾಲಯಗಳು ಆತ್ಮೋನ್ನತಿಗೆ ಪೂರಕವಾಗಿರುತ್ತದೆ. ದೇವಾಲಯದ ಮೂಲಕ ಸರ್ವಂತರ್ಯಾಮಿಯಾದ ಭಗವಂತನ ದರ್ಶನ, ಅನುಗ್ರಹ ಆಗುತ್ತದೆ. ಮನೋಸಂಕಲ್ಪ ದೃಢವಾಗಿದ್ದಾಗ ಯಶಸ್ಸಿನ ಪ್ರತಿಫಲ ಲಭಿಸುತ್ತದೆ. ಮಹತ್ ಸಾಧನೆಯಿದ್ದಾಗ ಮನುಷ್ಯ ಕಂಡ ಕನಸು ನನಸಾಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವೀ ಶ್ರೀ ಮಾತಾನಂದಮಯೀ ಹೇಳಿದರು.
ಅವರು ಬುಧವಾರ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ನಡೆದ ಮಹಿಳಾ ಸಮಾವೇಶದಲ್ಲಿ ಆಶೀರ್ವಚನ ನೀಡಿದರು. ಪರಿಶುದ್ಧ ಮನಸ್ಸು ಇದ್ದಾಗ ಭಗವಂತನ ಅನುಗ್ರಹ ಲಭಿಸುತ್ತದೆ. ಸಂಪತ್ತಿನ ಜತೆಗೆ ಪಾರಮಾರ್ತಿಕ ಚಿಂತನೆ ಇದ್ದಾಗ ಉತ್ತಮ ವ್ಯಕ್ತಿತ್ವ ನಿರ್‍ಮಾಣವಾಗುತ್ತದೆ. ಮಾತೆ ಸಮಾಜದ ಭದ್ರ ಬುನಾದಿಯಾಗಿದ್ದು, ದೇಶದ ಉನ್ನತಿ ಕುಟುಂಬದಿಂದ ಸಾಧ್ಯವಾಗುತ್ತದೆ. ಸಾತ್ವಿಕತೆಯ ಮೂಲಕ ಕುಟುಂಬ ವ್ಯವಸ್ಥೆಯಲ್ಲಿ ಸಂಸ್ಕಾರವನ್ನು ನೀಡುವ ಕಾರ್‍ಯ ಮಾತೃಶಕ್ತಿಗೆ ಇದೆ. ಮಕ್ಕಳಲ್ಲಿ ಮಮತೆ ಇರಬೇಕು ಹೊರತು ವಾಸ್ತಲ್ಯವಲ್ಲ ಎಂದು ತಿಳಿಸಿದರು.


ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ ಮಹಿಳೆಯರಿಗೆ ಸರಿಯಾದ ಜೀವನ ಹಾದಿ ತೋರಿಸಿದವ ಶ್ರೀಕೃಷ್ಣ. ಶ್ರೀಕೃಷ್ಣನ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಸಮಾಜದಲ್ಲಿ ಬದಲಾವಣೆ ಸಾಧ್ಯ. ನಾವು ಬದಲಾಗಿದ್ದೇವೆ ಹೊರತು ಕಾಲ ಬದಲಾಗಿಲ್ಲ. ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂಥ ಕಾರ್‍ಯಕ್ರಮಗಳು ಅಗತ್ಯ. ವಿದ್ಯೆ ಹಾಗೂ ಹುದ್ದೆಗಳು ವ್ಯಕ್ತಿಯನ್ನು ಬದಲಾವಣೆ ಮಾಡುವಂತಾಗಬಾರದು.
ಸವಿತಾ ಅಡ್ವಾಯಿ ಅವರ ಗಾದೆ ಗೊಂಚಲು ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮೊಕ್ತೇಸರರಾದ ಪದ್ಮಿನಿ ರಾಮಭಟ್ ಆಲಂಗಾರು ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶೈಲಜಾ ಕೆ. ಟಿ. ಭಟ್, ಮಾಣಿಲ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮೀರಾ ಆಳ್ವ, ಕೇಪು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶಸ್ವಿನಿ ಭಟ್ ನೆಕ್ಕರೆ, ವಿಶ್ವ ಹಿಂದೂ ಪರಿಷತ್ ಮಾತೃಮಂಡಳಿ ಪೈವಳಿಕೆ ವಲಯ ಖಂಡ ಸಮಿತಿ ಅಧ್ಯಕ್ಷೆ ಕಮಲ ಟೀಚರ್, ಸವಿತಾ ಎಸ್. ಭಟ್ ಅಡ್ವಾಯಿ ಉಪಸ್ಥಿತರಿದ್ದರು.
ಕೃತಿಕಾ ಪ್ರಾರ್ಥಿಸಿದರು. ರೇವತಿ ನಾರಾಯಣ ಕಡೆಂಬಿಲ ಸ್ವಾಗತಿಸಿದರು. ಸೂರ್‍ಯ ಪ್ರಭಾ ಶೆಟ್ಟಿ ಎ.ಕೆ ನಿಲಯ ವಂದಿಸಿದರು. ಮಲ್ಲಿಕಾ ಜಯರಾಮ ರೈ, ಅಶ್ವಿನಿ ಮುಂಚಿರಬೆಟ್ಟು ಕಾರ್‍ಯಕ್ರಮ ನಿರೂಪಿಸಿದರು.