ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ವತಿಯಿಂದ ಪ್ರತಿವರ್ಷ ನೀಡಲಾಗುವ ಪ್ರತಿಷ್ಠಿತ ವಿಶುಕುಮಾರ್ ಸಾಹಿತ್ಯ ಪ್ರಶಸ್ತಿಗೆ ಈ ವರ್ಷ ಖ್ಯಾತ ವಿಮರ್ಶಕ ಹಾಗೂ ಸಾಹಿತಿ ಡಾ.ಬಿ.ಜನಾರ್ದನ ಭಟ್ ಆಯ್ಕೆಯಾಗಿದ್ದಾರೆ.
ದಿನಾಂಕ 04-04-1959 ರಂದು ಬೆಳ್ಮಣ್ಣುವಿನಲ್ಲಿ ಜನಿಸಿದ ಡಾ.ಬಿ.ಜನಾರ್ದನ ಭಟ್ ರವರು ಕನ್ನಡ ಸಾಹಿತ್ಯ ಲೋಕದ ಓರ್ವ ಪ್ರಸಿದ್ಧ ವಿಮರ್ಶಕ ಹಾಗೂ ಬರಹಗಾರರು. ಇದುವರೆಗೆ ಸುಮಾರು 90 ಕ್ಕಿಂತಲೂ ಹೆಚ್ಚು ಕೃತಿಗಳನ್ನು ರಚಿಸಿದ ಹಿರಿಮೆ ಇವರದು.
ಏಳು ಕಾದಂಬರಿಗಳು, ಆರು ಕಥಾ ಸಂಕಲನಗಳು ಜೊತೆಗೆ ಮೂವತ್ತಕ್ಕಿಂತಲೂ ಅಧಿಕ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಇಪ್ಪತ್ತೆರಡು ಅನುವಾದಿತ ಕೃತಿಗಳು ಹಾಗೂ ಇಪ್ಪತ್ತೊಂದು ಸಂಪಾದಿತ ಕೃತಿಗಳನ್ನು ಸಾಹಿತ್ಯ ಪ್ರಪಂಚಕ್ಕೆ ನೀಡಿದವರು ಡಾ.ಬಿ.ಜನಾರ್ದನ ಭಟ್.
ಕನ್ನಡ ಸಾಹಿತ್ಯ ಪ್ರಪಂಚದ ಓರ್ವ ಪ್ರಬುದ್ಧ ಬರಹಗಾರರಾದ ಡಾ.ಬಿ.ಜನಾರ್ದನ ಭಟ್ ರವರನ್ನು ಅವರ ಸಮಗ್ರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯು ಈ ಬಾರಿಯ ವಿಶುಕುಮಾರ್ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ದಿನಾಂಕ 02-10-2022 ರಂದು ಮಾಣಿಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.














