ವಿಟ್ಲ: ಕಳೆದ 5 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ವಿಟ್ಲ ಸಮೀಪದ ವೀರಕಂಬದಿಂದ ಬೋಳಂತೂರು ಸಂಪರ್ಕಿಸುವ ರಸ್ತೆ ಬದಿಯ ತೋಡಿನ ತಡೆಗೋಡೆ ಕುಸಿದು ಬಿದ್ದು ಸಂಪರ್ಕ ಕಳೆದುಕೊಳ್ಳುವ ಭೀತಿಯಲ್ಲಿ ಜನರು ದಿನದೂಡುವಂತಾಗಿದೆ.
ವೀರಕಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಕಂಬದಿಂದ ಬೋಳಂತೂರು, ಎನ್.ಸಿ ರೋಡ್, ಮಂಚಿ ಸಂಪರ್ಕಿಸುವ ರಸ್ತೆಯ ಒದು ಬದಿಯಲ್ಲಿ ತೋಡಿನಲ್ಲಿ ನೀರು ಹರಿಯುತ್ತಿದ್ದು, ತೋಡಿಗೆ ಕಟ್ಟಲಾದ ತಡೆಗೋಡೆ ಸಂಪೂರ್ಣವಾಗಿ ಹದಗೆಟ್ಟಿದ್ದು,ಇದೀಗ ನೀರಿನ ತೀವ್ರತೆಗೆ ಕುಸಿದು ಬಿದ್ದಿದೆ. ಇದರಿಂದ ಸಂಚಾರ ದುಸ್ಸಾಹವಾಗಿದೆ.
ಇಲ್ಲಿನ ಒಳ ರಸ್ತೆ ಅಸಮರ್ಪಕ ಕಾಮಗಾರಿಯಿಂದ ರಸ್ತೆ ಇದೀಗ ಸಂಪೂರ್ಣವಾಗಿ ಹೊಂಡಗಳಿಂದ ಹಾಳಾಗಿ ಪ್ರಯಾಣಿಕರು ಹೊಂಡಗಳ ನಡುವೆ ರಸ್ತೆಯನ್ನು ಹುಡುಕುವ ಪರಿಸ್ಥಿತಿ ಎದುರಾಗಿದೆ.
ತಡೆಗೋಡೆ ಕುಸಿದ ಪರಿಣಾಮ ರಸ್ತೆ ಬದಿಯು ಕುಸಿಯುವ ಭೀತಿ ಎದುರಾಗಿದೆ. ಪಾದಚಾರಿಗಳಿಗೆ ನಡೆಯುವುದು ನರಕ ಸಂಕಟವಾಗಿದೆ. ಮಕ್ಕಳು, ಹಿರಿಯರು, ಮಹಿಳೆಯರು ಜೀವಭಯದಲ್ಲಿ ಸಂಚರಿಸುವ ಸನ್ನಿವೇಶ ಸೃಷ್ಟಿಯಾಗಿದೆ.
ಸುತ್ತಮುತ್ತಲೂ ನೂರಕ್ಕಿಂತಲೂ ಅಧಿಕ ಮನೆ ಇದೆ. ಈ ಬಗ್ಗೆ ವೀರಕಂಬ ಅಧ್ಯಕ್ಷರು, ಪಿಡಿಒ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುವ ಸಾಧ್ಯತೆಯಿದ್ದು, ಅಧಿಕಾರಿಗಳು ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
