ಬಂಟ್ವಾಳ: ಸಜಿಪನಡು ಗ್ರಾಮ ಪಂಚಾಯತ್ ವತಿಯಿಂದ ಟಿ.ಆರ್. ಗ್ರೌಂಡ್ ಸಜಿಪ ಜಂಕ್ಷನ್ ಬಳಿ ವಾರದ ಸಜಿಪ ಸಂತೆ ಆರಂಭಗೊಳ್ಳಲಿದೆ. ಜ. 6ರಂದು ವಾರದ ಸಂತೆ ಸಹಿತ ವಿವಿಧ ಯೋಜನೆಗಳ ಉದ್ಘಾಟನೆ, ಜ. 7ರಂದು ಉದ್ಯೋಗಮೇಳ ಕಾರ್ಯಕ್ರಮಗಳು ನಡೆಯಲಿವೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸಿರ್ ಸಜೀಪ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಕಳೆದ ೩೨ ವರ್ಷಗಳಿಂದ ನಿಂತ್ತಿದ್ದ ಸಂತೆಯನ್ನು ಮತ್ತೆ ಪ್ರಾರಂಭಿಸಲಾಗುತ್ತಿದೆ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ವಿವಿಧ ಕಾರ್ಯಗಳು:
ಜ. 6ರಂದು ಬೆಳಗ್ಗೆ 8 ಗಂಟೆಗೆ ವಾರದ ಸಂತೆಯನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್. ಉದ್ಘಾಟಿಸುವರು. ತಾಪಂ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಕೆ.ಮುಹಮ್ಮದ್, ಗುತ್ತಿಗೆದಾರ ಟಿ.ಆರ್.ಅಬ್ದುಲ್ ಖಾದರ್, ಎಸ್‌ಡಿಪಿಐ ಸಜಿಪನಡು ಅಧ್ಯಕ್ಷ ನವಾಝ್, ಸಜಿಪ ಕಾಂಗ್ರೆಸ್ ಸಜಿಪ ವಲಯ ಅಧ್ಯಕ್ಷ ಅಬೂಬಕ್ಕರ್. ಎಸ್, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ದೀಪಕ್ ಕೊಂಕಣ್‌ತೋಟ, ಜೆಡಿಎಸ್ ಗ್ರಾಮ ಅಧ್ಯಕ್ಷ ಸತ್ತಾರ್ ಹಾಜಿ, ಆಟೊ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ಎಸ್.ಕೆ.ಬಶೀರ್ ಮತ್ತು ಸಜಿಪನಡು ಹಾಗೂ ಇಸ್ಮಾಯಿಲ್ ಗೋಳಿಪಡ್ಪು ಇವರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಅಂದು ಬೆಳಗ್ಗೆ 9.30ಕ್ಕೆ ಪಂಚಾಯತ್ ಆವರಣದಲ್ಲಿ ಸಂಜೀವಿನಿ ಕಟ್ಟಡವನ್ನು ಸಚಿವ ಯು.ಟಿ.ಖಾದರ್ ಶಂಕುಸ್ಥಾಪನೆ ನೆರವೇರಿಸುವರು. ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಆಯುಷ್ಮಾನ್ ಭಾರತ್ ಕಾರ್ಡ್ ವಿತರಿಸುವರು. ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸಿರ್ ಅಧ್ಯಕ್ಷತೆ ವಹಿಸುವರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಘನತ್ಯಾಜ್ಯ ವಿಲೇವಾರಿ ವಾಹನ ಉದ್ಘಾಟಿಸುವರು. ಜನರೆಡೆಗೆ ಪಂಚಾಯತ್ ಯೋಜನೆಯನ್ನು ಮಂಗಳೂರಿನ ಕಾರ್ಪೊರೇಟರ್ ಆಯಾಜ್ ಕೃಷ್ಣಾಪುರ ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ಎಸ್.ಎನ್ ಅಬ್ದುಲ್ ರಹಿಮಾನ್, ಅಬ್ದುಲ್ ರಶೀದ್ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೀರಪ್ಪ ಗೌಡ ಎಸ್. ಉಪಸ್ಥಿತರಿದ್ದರು.
ಜ. 7ರಂದು ಉದ್ಯೋಗ ಮೇಳ:
ಜ.7ರಂದು ಬೆಳಿಗ್ಗೆ 9ಗಂಟೆಗೆ ಗ್ರಾಮ ಪಂಚಾಯತ್ ಕಛೇರಿ ಆವರಣದಲ್ಲಿ ಉದ್ಯೋಗ ಮೇಳ ಆರಂಭಗೊಳ್ಳಲಿದ್ದು, 10 ಗಂಟೆವರೆಗೆ ನೋಂದಣಿ ನಡೆಯಲಿದೆ. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸಿರ್ ವಹಿಸಲಿದ್ದು, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಉದ್ಘಾಟಿಸುವರು ಎಂದು ಅವರು ಮಾಹಿತಿ ನೀಡಿದರು.

