ಉಜಿರೆ: ಅಮರಾವತಿಯಲ್ಲಿ ದೇವೇಂದ್ರನ ಒಡ್ಡೋಲಗದಲ್ಲಿ ಸಿಂಹಾಸನ ಕಂಪಿಸುತ್ತದೆ. ಆದಿನಾಥರಿಗೆ (ವೃಷಭರಾಜ) ತೀರ್ಥಂಕರರಾಗುವ ಕ್ಷಣ ಸಮೀಪಿಸುತ್ತಿದೆ ಎಂದು ತಿಳಿದ ದೇವೇಂದ್ರ ಅಯೋಧ್ಯೆಗೆ ಹೋಗಿ ಆದಿನಾಥರ ಅರಮನೆಯಲ್ಲಿ ನೀಲಾಂಜನೆಯ ನೃತ್ಯವನ್ನು ಏರ್ಪಡಿಸುತ್ತಾನೆ. ಆಯುಷ್ಯ ಮುಗಿದ ನೀಲಾಂಜನೆ ನೃತ್ಯ ಮಧ್ಯದಲ್ಲೇ ಸಾವನ್ನಪ್ಪುತ್ತಾಳೆ. ಆದರೆ ಈ ವಿಚಾರ ಆದಿನಾಥರಿಗೆ ತಿಳಿಯಬಾರದೆಂದು ಅದೇ ರೂಪದ ಇನ್ನೊಬ್ಬಳು ಕಲಾವಿದೆಯಿಂದ ನೃತ್ಯ ಮುಂದುವರಿಯುತ್ತದೆ.


ಆದಿನಾಥರಿಗೆ ಈ ದೃಶ್ಯ ನೋಡಿ ಲೌಕಿಕ ಸುಖ-ಭೋಗಗಳೆಲ್ಲ ಕ್ಷಣಿಕ ಎಂದು ವೈರಾಗ್ಯ ಭಾವನೆ ಮೂಡಿ ಬರುತ್ತದೆ. ಎಲ್ಲವನ್ನೂ ತ್ಯಜಿಸಿ ಕಾಡಿಗೆ ಹೋಗಲು ನಿರ್ಧರಿಸುತ್ತಾರೆ.
ಆದಿನಾಥ ಮಹಾರಾಜರು ಭರತನಿಗೆ ಅಯೋಧ್ಯೆಯ ಅಧಿಕಾರವನ್ನೂ, ಬಾಹುಬಲಿಗೆ ಪೌದನಾಪುರದ ಅಧಿಕಾರವನ್ನೂ ವಹಿಸಿಕೊಟ್ಟು ಹಿತೋಪದೇಶ ನೀಡುತ್ತಾರೆ. ಗುರು-ಹಿರಿಯರರನ್ನು ಗೌರವಿಸಿ. ಪ್ರಜೆಗಳನ್ನು ಪೀಡಿಸಬೇಡಿ. ಧರ್ಮ ಪಾಲನೆಯೊಂದಿಗೆ ಶಾಂತಿ-ಸಾಮರಸ್ಯ ಕಾಪಾಡಿ ಎಂದು ಸಲಹೆ ನೀಡಿ, ಎಲ್ಲವನ್ನೂ ತ್ಯಜಿಸಿ ತಪಸ್ಸಿಗೆ ಹೋಗುತ್ತಾರೆ.
ಕಲಾವಿದರ ಪ್ರೌಢ ಅಭಿನಯ, ಸಂವಹನ ಕಲೆ, ವೇಷ-ಭೂಷಣಗಳು, ಸುಸಜ್ಜಿತ ವೇದಿಕೆ-ಎಲ್ಲದರ ಸಮ್ಮಿಳನದಿಂದ ರೂಪಕ ಪ್ರೇಕ್ಷಕರ ಕಣ್ಮನ ಸೆಳೆಯಿತು.
ಪೂಜ್ಯ ಆಚಾರ್ಯ ವರ್ಧಮಾನ ಸಾಗರ್‌ಜಿ, ಪೂಜ್ಯ ಪುಷ್ಪದಂತ ಸಾಗರ ಮುನಿ ಮಹಾರಾಜ್ ಹಾಗೂ ಮುನಿ ಸಂಘದವರು, ಮಾತಾಜಿಯವರು ರೂಪಕ ವೀಕ್ಷಿಸಿ ಎಲ್ಲ ಕಲಾವಿದರನ್ನು ವಿಶೇಷವಾಗಿ ಆಶೀರ್ವದಿಸಿದರು.
ವಿಶೇಷವಾಗಿ ಪಂಚಮಹಾವೈಭವದ ಹೊಸ ಕಲ್ಪನೆಯನ್ನು ಕಾರ್ಯರೂಪಕ್ಕೆ ತಂದ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಹಾಗೂ ಶ್ರದ್ಧಾ ಅಮಿತ್ ಅವರನ್ನು ಮುನಿಸಂಘದವರು ಅಭಿನಂದಿಸಿ ಆಶೀರ್ವದಿಸಿದರು.