Tuesday, January 27, 2026

ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು-ಹೇಮಾವತಿ ವಿ. ಹೆಗ್ಗಡೆ

ಉಜಿರೆ: ಪ್ರಾಚೀನ ಮತ್ತು ಆಧುನಿಕತೆಯ ಸಂಗಮ ಕಾಲದಲ್ಲಿರುವ ನಾವು ಭವ್ಯ ಇತಿಹಾಸ, ಪರಂಪರೆ ಮತ್ತು ವೈವಿಧ್ಯಮಯ ಹಿನ್ನೆಲೆ ಹೊಂದಿರುವ ತುಳು ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕೇಳರಿಮೆ ಹೊಂದದೆ ಅಭಿಮಾನ, ಗೌರವದೊಂದಿಗೆ ಉಳಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಎಸ್.ಡಿ.ಎಂ. ತುಳುಪೀಠ ಮತ್ತು ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ತುಳು ಸಂಘದ ಜಂಟಿ ಆಶ್ರಯದಲ್ಲಿ ಉಜಿರೆಯಲ್ಲಿ ಎಸ್.ಡಿ.ಎಂ.ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ ತುಳುವೆರೆ ಪಾರಂಪರಿಕ ಜ್ಞಾನ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತುಳುನಾಡಿನ ನಂಬಿಕೆ-ನಡವಳಿಕೆಗಳು, ಆಚಾರ-ವಿಚಾರಗಳು, ಸಂದಿ-ಪಾಡ್ದನಗಳು, ತಾಳ ಮದ್ದಳೆ, ಯಕ್ಷಗಾನ, ಜಾನಪದ ಕಲೆಗಳು, ಬಲೀಂದ್ರ ಪೂಜೆ, ಭೂತಾರಾಧನೆ, ನಾಗಾರಾಧನೆ, ಕೃಷಿ ಸಂಸ್ಕೃತಿ ನಮ್ಮ ಸಾರ್ಥಕ ಬದುಕಿಗೆ ಪ್ರೇರಕವಾಗಿವೆ. ಸರ್ವಧರ್ಮೀಯರೊಂದಿಗೆ ಸಾಮರಸ್ಯದ ಸಾರ್ಥಕ ಬದುಕಿಗೆ ಮಾರ್ಗದರ್ಶಕವಾಗಿದೆ. ತನ್ನ ಬಾಲ್ಯದಲ್ಲಿ ಪೆರಾಡಿ ಬೀಡಿನಲ್ಲಿ ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಸವಿದ ಮಧುರ ಕ್ಷಣಗಳನ್ನು ಧನ್ಯತೆಯಿಂದ ಸ್ಮರಿಸಿದ ಅವರು, ಕಂಬಳ, ಒನಕೆಯಿಂದ ಭತ್ತಕುಟ್ಟುವುದು, ದೀಪಾವಳಿ ಸಂದರ್ಭದಲ್ಲಿ ಗೋ ಪೂಜೆ, ಬಲೀಂದ್ರ ಪೂಜೆ, ನೊಗ-ನೇಗಿಲು, ಹಾರೆ-ಪಿಕ್ಕಸು ಮೊದಲಾದ ಕೃಷಿ ಪರಿಕರಗಳಿಗೆ ಪೂಜೆ, ನೇಜಿ ನೆಡುವುದು, ಕೃಷಿಯಲ್ಲಿ ಮಹಿಳೆಯರು ರಾಗದಿಂದ ಸರಾಗವಾಗಿ ಹಾಡುತ್ತಿದ್ದ ಸಂದಿ-ಪಾಡ್ದನಗಳ ಸೊಬಗನ್ನು ಅವರು ವಿವರಿಸಿದರು.


ಧಣಿ-ಒಕ್ಕಲು ಸಂಬಂಧ, ಅಜ್ಜನ ಬಿಸಿ ನೀರಿನ ಸ್ನಾನ, ಕಾಟು ಮಾವಿನ ಮಿಡಿ ತಿಂದ ಅನುಭವ, ಉಪ್ಪಿನಕಾಯಿ, ಪತ್ರೊಡೆಯ ಔಷಧಿಯ ಗುಣ ಹಾಗೂ ರೋಗ ನಿರೋಧಕ ಶಕ್ತಿಯ ಮಹತ್ವವನ್ನುಅವರು ವಿವರಿಸಿದರು. ತನ್ನ ಅಮ್ಮನ ಕಾವ್ಯ ವಾಚನಕ್ಕೆ ಮನೆಯ ಕೂಲಿ ಕೆಲಸದವರೇ ಶ್ರೋತೃಗಳು ಆಗಿದ್ದರು.
ತುಳು ಭಾಷೆ ನಮ್ಮ ಮನೆಯ ಮಾತಾಗಬೇಕು.ನಿತ್ಯವೂ ಆಡು ಭಾಷೆಯಾಗಬೇಕು.ನಾಗಾರಾಧನೆ, ಭೂತಾರಾಧನೆಯೊಂದಿಗೆ ವನಸಿರಿ ಹಾಗೂ ಜಲ ಸಂಪತ್ತು ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದರು.


ಎಸ್.ಡಿ.ಎಂ.ಕಾಲೇಜಿನ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ರಚಿಸಿದ ಅರಿವು ಡಿಜಿಟಲ್ ಪತ್ರಿಕೆಯನ್ನು ಡಾ. ಬಿ. ಯಶೋವರ್ಮ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಯುವಜನತೆ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಮಂಗಳೂರು ವಿ.ವಿ. ಕುಲಪತಿ ಡಾ. ಪಿ. ಸುಬ್ರಹ್ಮಣ್ಯಯಡಪಡಿತ್ತಾಯ ಮಾತನಾಡಿ, ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ವೈವಿದ್ಯಮಯ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಮರೆತರೂ, ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ನಮ್ಮ ನಂಬಿಕೆ-ನಡವಳಿಕೆಗಳು, ಆಚಾರ-ವಿಚಾರಗಳು ವೈಜ್ಞಾನಿಕ ಹಿನ್ನಲೆ ಹೊಂದಿದ್ದು ಗೊಡ್ಡು ಸಂಪ್ರಾಯಗಳಲ್ಲ. ತುಳುನಾಡಿನ ನಂಬಿಕೆಗಳು ಮೂಡ ನಂಬಿಕೆಗಳಲ್ಲ, ಮೂಲ ನಂಬಿಕೆಗಳು ಎಂದು ಅವರು ಸ್ಪಷ್ಟಪಡಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಸರ್ಕಾರದ ಸಹಯೋಗದೊಂದಿಗೆ ತುಳುವನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಉಜಿರೆಯಲ್ಲಿ ನಡೆದ ವಿಶ್ವ ತುಳ ಸಮ್ಮೇಳನದ ಸವಿ ನೆನಪನ್ನು ಅವರು ಸ್ಮರಿಸಿದರು.ತುಳು ಭಾಷೆ, ಸಂಸ್ಕೃತಿ ಸಂರಕ್ಷಣೆಗೆ ಯುವಜನತೆ ಕಟಿಬದ್ಧರಾಗಬೇಕು ಎಂದು ಅವರು ಸಲಹೆ ನೀಡಿದರು.
ಮಂಗಳೂರು ವಿ.ವಿ. ತುಳು ಪೀಠದ ಸಂಯೋಜಕ ಡಾ.ಮಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಡಿ.ಎಂ.ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಸತೀಶ್ಚಂದ್ರ ಸ್ವಾಗತಿಸಿದರು. ಡಾ. ಸನ್ಮತಿ ಕುಮಾರ್‌ ವಂದಿಸಿದರು. ಡಾ. ದಿವಾಕರ ಕೆ. ಕಾರ್ಯಕ್ರಮ ನಿರೂಪಿಸಿದರು.

More from the blog

ಉಸ್ತುವಾರಿ ಸಚಿವರು ಗಣರಾಜ್ಯೋತ್ಸವ ವೇದಿಕೆಯನ್ನು ಸುಳ್ಳು ಹರಡಲು ಬಳಸಿಕೊಂಡಿರುವುದು ಖೇದಕರ : ಸಂಸದ ಕ್ಯಾ.ಚೌಟ

ಮಂಗಳೂರು: ಸಂವಿಧಾನಿಕ ಹುದ್ದೆಯನ್ನು ದುರುಪಯೋಗಪಡಿಸಿ ಸುಳ್ಳಿನ ಕಾರ್ಖಾನೆಯನ್ನೇ ಸೃಷ್ಟಿಸುವ ಕಾಂಗ್ರೆಸ್‌ ಸರ್ಕಾರದ ಪ್ರಯತ್ನ ಸಂಪೂರ್ಣ ವಿಫಲಗೊಂಡಿರುವ ಕಾರಣ ಇದೀಗ ಸಚಿವ ದಿನೇಶ್‌ ಗುಂಡೂರಾವ್‌ ಅವರು ಘನವೆತ್ತ ರಾಜ್ಯಪಾಲರ ನಡೆಯನ್ನು ಟೀಕಿಸುತ್ತಿದ್ದಾರೆ ಎಂದು ದಕ್ಷಿಣ...

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ವೈಭವದಿಂದ ಜರುಗಿದ ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಮಡಂತ್ಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ, ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮವು ಜ. 25 ಭಾನುವಾರದಂದು ಮಡಂತ್ಯಾರಿನಲ್ಲಿ ಅತ್ಯಂತ ವೈಭವ ಮತ್ತು ಶಿಸ್ತಿನೊಂದಿಗೆ ನಡೆಯಿತು. ಸಂಜೆ ನಾಲ್ಕು ಗಂಟೆಗೆ...

ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ, ಉಗ್ರಾಣ ಮುಹೂರ್ತ

ವಿಟ್ಲ: ಜ.27 ಮತ್ತು 28 ರಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಡೆಯಲಿರುವ ತುಳುನಾಡ ಜಾತ್ರೆ -ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ, ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಸಿರುವಾಣಿ...