ಉಜಿರೆ: ವ್ಯವಹಾರಕ್ಕಾಗಿ ಪ್ರಾರಂಭಗೊಂಡ ವಿಮಾ ಸಂಸ್ಥೆಗಳು ಆರೋಗ್ಯ ವಿಮೆಯನ್ನೂ ಮಾಡಿ ಆರೋಗ್ಯ ಭಾಗ್ಯ ಕಾಪಾಡಲು ನೆರವು ಹಾಗೂ ಭರವಸೆ ನೀಡುತ್ತಿರುವುದು ಆಶಾದಾಯಕವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಬುಧವಾರ ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ಯೋಜನೆಯಂತೆ ಅರುವತ್ತೂವರೆ ಕೋಟಿ ರೂ. ಪ್ರೀಮಿಯಂ ಮೊತ್ತವನ್ನು ವಿಮಾ ಕಂಪೆನಿಗಳಿಗೆ ಹಸ್ತಾಂತರಿಸಿ ಮಾತನಾಡಿದರು.
ಹಿಂದೆ ಆರೋಗ್ಯ ಭಾಗ್ಯ ಕಾಪಾಡಲು ದೇವರಿಗೆ ಹರಕೆ ಹೇಳುತ್ತಿದ್ದೆವು. ಪ್ರಾರ್ಥನೆ ಸಲ್ಲಿಸುತ್ತಿದ್ದೆವು. ಆದರೆ ಇಂದು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆಗಳು ಹಾಗೂ ಸಂಶೋಧನೆಗಳು ಆಗಿದ್ದು ಯಾವುದೇ ರೋಗವನ್ನು ಕೂಡಾ ಶಮನಗೊಳಿಸುವ ಸಾಧ್ಯತೆ ಇದೆ. ಆದರೆ ಅಪಾರ ಹಣದ ಅಗತ್ಯವಿದೆ. ಆದುದರಿಂದ ಪ್ರತಿಯೊಬ್ಬರು ಆರೋಗ್ಯವಿಮೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
2004 ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರು ಮತ್ತು ಅವರಕುಟುಂಬದವರ ಆರೋಗ್ಯ ರಕ್ಷಣೆಗಾಗಿ ಸಂಪೂರ್ಣ ಸುರಕ್ಷಾ ಆರೋಗ್ಯ ಆರೋಗ್ಯ ವಿಮೆಯನ್ನು ಪ್ರಾರಂಭಿಸಲಾಗಿದೆ. ಕಳೆದ 15 ವರ್ಷಗಳಲ್ಲಿ ಹತ್ತು ಲಕ್ಷ ಮಂದಿ ಸದಸ್ಯರು 467 ಕೋಟಿ ರೂ. ಮೊತ್ತದ ವಿವಿಧ ಸೌಲಭ್ಯಗಳನ್ನು ಆರೋಗ್ಯ ವಿಮೆಯಿಂದ ಪಡೆದಿರುತ್ತಾರೆ ಎಂದು ಹೆಗ್ಗಡೆಯವರು ತಿಳಿಸಿದರು.
ಪ್ರೀಮಿಯಂ ಸ್ವಲ್ಪ ಹೆಚ್ಚಾದರೂ, ಫಲಾನುಭವಿಗಳಿಗೆ ಹೆಚ್ಚಿನ ಸವಲತ್ತು ನೀಡಲಾಗುತ್ತಿದೆ.
ಈಗಾಗಲೆ ನಾಲ್ಕು ಪ್ರತಿಷ್ಠಿತ ವಿಮಾ ಕಂಪೆನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ವಿಮಾ ಸೌಲಭ್ಯ ನೀಡಲಾಗುತ್ತಿದೆ.
ಮುಂದಿನ ವರ್ಷಕ್ಕೆ ನೇಶನಲ್ ಇನ್ಸೂರೆನ್ಸ್, ನ್ಯೂ ಇಂಡಿಯಾ ಆಶ್ಯೂರೆನ್ಸ್ ಮತ್ತು ಓರಿಯಂಟಲ್ ಇನ್ಸೂರೆನ್ಸ್ ಕಂಪೆನಿಯ ಮಂಗಳೂರು ವಿಭಾಗವು ಆರೋಗ್ಯ ವಿಮಾ ಸೇವೆ ನೀಡಲು ಒಪ್ಪಿಕೊಂಡಿವೆ ಎಂದು ಅವರು ತಿಳಿಸಿದರು.
ಎಲ್ಲರಿಗೂ ದೀರ್ಘಾಯುಷ್ಯದೊಂದಿಗೆ ಆರೋಗ್ಯ ಭಾಗ್ಯ ಸಿಗಲಿ. ಮಳೆ-ಬೆಳೆ ಚೆನ್ನಾಗಿ ಆಗಿ ಲೋಕ ಕಲ್ಯಾಣವಾಗಲಿ ಎಂದು ಹೆಗ್ಗಡೆಯವರು ಶುಭ ಹಾರೈಸಿದರು.
ನೇಶನಲ್ ಇನ್ಸೂರೆನ್ಸ್ ಕಮಪೆನಿಯ ವಿಭಾಗೀಯ ಪ್ರಬಂಧಕಿ ಪ್ರತಿಭಾ ಶೆಟ್ಟಿ, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿಯ ಬೆಂಗಳೂರು ಪ್ರಾದೇಶಿಕ ಪ್ರಬಂಧಕಿ ಕೆ.ಎಸ್. ಜ್ಯೋತಿ ಮತ್ತು ಮನೋಹರ್ ರೈ, ಓರಿಯಂಟಲ್ ವಿಮಾ ಕಂಪೆನಿಯ ಹಿರಿಯ ವಿಭಾಗೀಯ ಪ್ರಬಂಧಕಿ ಕೆ. ಉಷಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಣಕಾಸು ಅಧಿಕಾರಿ ಶಾಂತಾರಾಮ ಪೈ ಮತ್ತು ಒಕ್ಕೂಟದ ಅಧ್ಯಕ್ಷ ಪ್ರಭಾಕರ್ ಉಪಸ್ಥಿತರಿದ್ದರು.
ಸಂಪೂರ್ಣ ಸುರಕ್ಷಾ ವಿಭಾಗದ ಹಿರಿಯ ಅಧಿಕಾರಿ ಅಬ್ರಹಾಂ ಸ್ವಾಗತಿಸಿದರು. ಗಣೇಶ ಭಟ್ ಧನ್ಯವಾದವಿತ್ತರು. ಜಿನರಾಜ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

