ಉಜಿರೆ: ಧರ್ಮದ ಮರ್ಮವನ್ನು ಅರಿತು ಅನುಷ್ಠಾನಗೊಳಿಸುವುದರಿಂದ ಜೀವನ ಪಾವನವಾಗುತ್ತದೆ ಎಂದು ಪೂಜ್ಯ ಆಚಾರ್ಯ ಶ್ರೀ ೧೦೮ ವರ್ಧಮಾನ ಸಾಗರ್‌ಜಿ ಮುನಿ ಮಹಾರಾಜ್ ಹೇಳಿದರು.
ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಾನುವಾರ ಅವರ ಮುನಿ ದೀಕ್ಷೆಯ ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರು ಪಾದಪೂಜೆಯೊಂದಿಗೆ ವಿನಯಾಂಜಲಿ ಸಮರ್ಪಿಸಿದ ಸಂದರ್ಭ ಆಶೀರ್ವಚನ ನೀಡಿ ಅವರು ಮಾತನಾಡಿದರು.
ದೇವರು, ಗುರುಗಳು ಮತ್ತು ಶಾಸ್ತ್ರದಲ್ಲಿ ಶ್ರದ್ಧಾ-ಭಕ್ತಿ ಇದ್ದಾಗ ಸಮ್ಯಕ್ ದರ್ಶನ ಪ್ರಾಪ್ತಿಯಾಗುತ್ತದೆ. ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯ ಎಂಬ ರತ್ನತ್ರಯ ಧರ್ಮ ಪಾಲನೆಯಿಂದ ವಿಶೇಷ ಆನಂದದ ಅನುಭೂತಿಯಾಗುತ್ತದೆ. ಶ್ರದ್ಧೆ-ಭಕ್ತಿ ಜಾಗೃತವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಮುನಿಗಳು ಮುನಿಧರ್ಮ ಮತ್ತು ಪರಂಪರೆಯ ರಕ್ಷಣೆಯೊಂದಿಗೆ ಪೂರ್ವಾಚಾರ್ಯರ ಮಾರ್ಗದರ್ಶನದಂತೆ ಶ್ರಾವಕರು-ಶ್ರಾವಕಿಯರಿಗೆ ಧರ್ಮ ಜಾಗೃತಿ ಮೂಡಿಸಿ ತಾವು ಧರ್ಮ ಪ್ರಭಾವನಾ ಕಾರ್ಯದಲ್ಲಿ ನಿರತರಾಗಿರುವುದಾಗಿ ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಸಬಲೀಕರಣ, ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ವಿಶ್ವಮಾನ್ಯವಾಗಿದ್ದು ಸಾರ್ವಕಾಲಿಕ ಮೌಲ್ಯ ಹೊಂದಿದೆ ಎಂದು ಹೇಳಿ ಅಭಿನಂದಿಸಿದರು.

ವಿನಯಾಂಜಲಿ ಸಮರ್ಪಣೆ: ಮುನಿದೀಕ್ಷೆಯ ಸುವರ್ಣ ಮಹೋತ್ಸವ ಆಚರಣೆ ಸಂದರ್ಭ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರು ಚರ್ಯಾ ಶಿರೋಮಣಿ ಎಂಬ ಬಿರುದನ್ನು ವಿನಯಾಂಜಲಿಯಾಗಿ ಅರ್ಪಿಸಿ ಬಳಿಕ ಮುನಿಗಳ ಪಾದಪೂಜೆ ನಡೆಸಿದರು.
೫೦ ಬಗೆಯ ಅಷ್ಟದ್ರವ್ಯಗಳನ್ನು ಬಳಸಿ ಅಷ್ಟವಿಧಾರ್ಚನೆ ಮೂಲಕ ಪಾದಪೂಜೆ ನಡೆಸಿದರು.
ಯಕ್ಷಗಾನ ಶೈಲಿಯ ನೃತ್ಯ ಹಾಗೂ ಜಯಶ್ರೀ ಹೊರನಾಡು ಬಳಗದವರ ಸುಶ್ರಾವ್ಯ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.
ಹೊಂಬುಜದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮುನಿಗಳ ಪರಿಚಯ ನೀಡಿದರು.
ವಿವಿಧ ಸಮಿತಿಗಳ ಸಂಚಾಲಕರಿಗೆ ಸನ್ಮಾನ:
ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಸ್ವಯಂ ಸೇವಕರು, ವಿವಿಧ ಸಮಿತಿಗಳ ಸಂಚಾಲಕರು ಹಾಗೂ ಮಾಧ್ಯಮದವರ ಸೇವೆಯನ್ನು ಡಿ. ವೀರೇಂದ್ರ ಹೆಗ್ಗಡೆಯವರು ವಿಶೇಷವಾಗಿ ಶ್ಲಾಘಿಸಿ ಅಭಿನಂದಿಸಿದರು.
ವಿವಿಧ ಸಮಿತಿಗಳ ಸಂಚಾಲಕರನ್ನು ಅವರು ಸ್ಮರಣಿಕೆ ನೀಡಿ ಗೌರವಿಸಿದರು. ಸರ್ವರ ಸಕ್ರಿಯ ಸಹಕಾರದಿಂದ ಮಸ್ತಕಾಭಿಷೇಕ ಅತ್ಯಂತ ಯಶಸ್ವಿಯಾಗಿ ನಡೆದ ಬಗ್ಯೆ ತಮಗೆಲ್ಲ ಅತೀವ ಸಂತೋಷವಾಗಿದೆ ಎಂದರು. ವ್ಯಕ್ತಿತ್ವ ನಿರ್ಮಾಣಕ್ಕೆ ಧರ್ಮದ ಹಿನ್ನೆಲೆ ಅಗತ್ಯ. ಮಸ್ತಕಾಭಿಷೇಕವು ಆದರ್ಶ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರೇರಕವಾಗಿ ವಿಶ್ವಶಾಂತಿಯೊಂದಿಗೆ ಲೋಕ ಕಲ್ಯಾಣವಾಗಲಿ ಎಂದು ಅವರು ಹಾರೈಸಿದರು.
ಮಸ್ತಕಾಭಿಷೇಕ: ಮಾಜಿ ಸಚಿವ ಚಳ್ಳಕೆರೆಯ ಡಿ. ಸುಧಾಕರ್ ಮತ್ತು ಕುಟುಂಬಸ್ಥರು ಭಾನುವಾರ ಭಗವಾನ್ ಬಾಹುಬಲಿ ಸ್ವಾಮಿಗೆ ೧೦೦೮ ಕಲಶಗಳಿಂದ ಮಹಾಮಸ್ತಕಾಭಿಷೇಕ ಸೇವೆ ಮಾಡಿದರು.
ಸೇವಾಕರ್ತೃಗಳನ್ನು ಹೆಗ್ಗಡೆಯವರು ಗೌರವಿಸಿದರು.
ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು.
ಮುಖ್ಯಾಂಶಗಳು:
ಮಸ್ತಕಾಭಿಷೇಕದ ನೇತೃತ್ವ ವಹಿಸಿ ಮಾರ್ಗದರ್ಶನ ನೀಡಿದ ಪೂಜ್ಯ ವರ್ಧಮಾನ ಸಾಗರ ಮುನಿಮಹಾರಾಜರಿಗೆ ಹೆಗ್ಗಡೆಯವರಿಂದ ಚರ್ಯಾ ಶಿರೋಮಣಿ ಬಿರುದಿನಂದಿಗೆ ವಿನಯಾಂಜಲಿ ಸಮರ್ಪಣೆ.
ಯಕ್ಷಗಾನ ಶೈಲಿಯ ನೃತ್ಯದೊಂದಿಗೆ ಮುನಿಗಳ ಪಾದಪೂಜೆ ಪಾದಪೂಜೆ
ಪಾದಪೂಜೆ ಸಂದರ್ಭ ಕವಿ ರತ್ನಾಕರವರ್ಣಿಯ ಪರಮಂಜ್ಯೋತಿ ಕೋಟಿ ಚಂದ್ರಾದಿತ್ಯ… ಪದ್ಯವನ್ನು ಹೇಮಾವತಿ ಹೆಗ್ಗಡೆಯವರು ಸುಶ್ರಾವ್ಯವಾಗಿ ಹಾಡಿದರು.
ಧರ್ಮಸ್ಥಳದ ಶಿಶಿರ್ ಇಂದ್ರ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿದರು.
ಹೊರನಾಡು ಜಯಶ್ರೀ ಮತ್ತು ಬಳಗದವರು ಸುಶ್ರಾವ್ಯ ಜನ ಭಕ್ತಿಗೀತೆಗಳ ಗಾಯನ ಸಮಾರಂಭಕ್ಕೆ ಹೊಸ ಮೆರುಗನ್ನು ನೀಡಿತು.
ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆಯ ಪ್ರೇರಕ ಶಕ್ತಿ ಮಾತೃಶ್ರೀ ರತ್ನಮ್ಮನವರ ಜನ್ಮದಿನವೂ ಫೆಬ್ರವರಿ 24.