ಉಜಿರೆ: ಪಂಚಮಹಾವೈಭವ ಮಂಟಪದಲ್ಲಿ ಗುರುವಾರ ಬಾಹುಬಲಿ ಆಸ್ಥಾನ ವೈಭವದ ವಿಶ್ವರೂಪ ದರ್ಶನ ನಡೆಯಿತು.
ಭರತ ಚಕ್ರವರ್ತಿಯ ಆದೇಶದಂತೆ ದಕ್ಷಿಣಾಂಕ ಆತನ ಓಲೆಯನ್ನು ತೆಗೆದುಕೊಂಡು ಪೌದನಾಪುರಕ್ಕೆ ಬರುತ್ತಾನೆ. ಬರುವಾಗ ಪೌದನಾಪುರದಲ್ಲಿ ಹತ್ತು ವೇದಿಕೆಗಳಲ್ಲಿ ಆಯೋಜಿಸಿದ ಕಲೆ, ಸಂಗೀತ, ನೃತ್ಯ, ಯಕ್ಷಗಾನ ಜಾನಪದ ಕಲೆಗಳನ್ನು ವೀಕ್ಷಿಸಿ ಸಂತೋಷ ಪಡುತ್ತಾನೆ.
ಬಳಿಕ ಪೌದನಾಪುರದ ಅರಮನೆಗೆ ಬಂದು ಬಾಹುಬಲಿಯನ್ನು ಭೇಟಿಯಾಗಿ ಲೋಕಾಭಿರಾಮವಾಗಿ ಯೋಗಕ್ಷೇಮ ವಿಚಾರಿಸಿ ಬಳಿಕ ತಾನು ಬಂದ ಉದ್ದೇಶವನ್ನು ತಿಳಿಸಿ ಭರತ ಕೊಟ್ಟ ಓಲೆಯನ್ನು ಕೊಡುತ್ತಾನೆ.

ಆದರೆ ಬಾಹುಬಲಿ ತಂದೆ ಕೊಟ್ಟ ರಾಜ್ಯವನ್ನು ಭರತನಿಗೆ ಒಪ್ಪಿಸಿ ಶರಣಾಗತನಾಗಲು ಒಪ್ಪುವುದಿಲ್ಲ. ಯುದ್ಧಕ್ಕೆ ಇಬ್ಬರೂ ಸನ್ನದ್ದರಾಗುತ್ತಾರೆ. ಆದರೆ ಯುದ್ಧ ನಡೆದಲ್ಲಿ ಉಭಯ ಕಡೆಗಳ ಸೈನಿಕರಿಗೆ ಸಾವು-ನೋವು ಉಂಟಾಗಬಹುದು. ಆದುದರಿಂದ ಅಹಿಂಸಾತ್ಮಕವಾಗಿ ತಾವು ಇಬ್ಬರು ಮಾತ್ರ ಯುದ್ಧ ಮಾಡುವುದಾಗಿ ನಿರ್ಧರಿಸುತ್ತಾರೆ.
ದೃಷ್ಠಿ ಯುದ್ಧ, ಜಲಯುದ್ಧ ಮತ್ತು ಮಲ್ಲ ಯುದ್ಧದ ಮೂಲಕ ಸೋಲು-ಗೆಲುವು ನಿರ್ಧರಿಸುವುದಾಗಿ ಹೇಳಿದರು.
ಆದರೂ ಮೂರೂ ರೀತಿಯ ಯುದ್ಧದಲ್ಲಿ ಬಾಹುಬಲಿಯೇ ಗೆಲ್ಲುತ್ತಾನೆ. ಕೊನೆಯ ಮಲ್ಲಯುದ್ಧದಲ್ಲಿ ಗೆದ್ದರೂ ಮೇಲೆತ್ತಿ ಭರತನನ್ನು ಕೆಳಗೆ ಹಾಕಬೇಕು ಎನ್ನುವಷ್ಟರಲ್ಲಿ ಮನದಲ್ಲಿ ಅಣ್ಣನೆಂಬ ಮಮತೆ ಮೂಡಿ ಬರುತ್ತದೆ. ಭೂಮಿಗಾಗಿ, ಪ್ರತಿಷ್ಠೆಗಾಗಿ ಅಣ್ಣನನ್ನು ಸೋಲಿಸುವುದು ಉಚಿತವಲ್ಲ ಎಂದು ಹೇಳಿ ಬಾಹುಬಲಿ ಯುದ್ಧ ನಿಲ್ಲಿಸುತ್ತಾನೆ. ವೈರಾಗ್ಯ ಭಾವನೆ ಬಂದು ಕಾಡಿಗೆ ತೆರಳಿ ತಪಸ್ಸು ಮಾಡುತ್ತಾನೆ.
ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ನಾಳೆ
ಉಜಿರೆ: ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ವಿರಾಜಮಾನರಾಗಿರುವ 39 ಅಡಿ ಎತ್ತರದ ಭಗವಾನ್ ಬಾಹುಬಲಿ ಮೂರ್ತಿಗೆ ಶನಿವಾರ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯುತ್ತದೆ.
ಶನಿವಾರ ಬೆಳಿಗ್ಗೆ ಗಂಟೆ 6.30ಕ್ಕೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ಭವ್ಯ ಅಗ್ರೋದಕ ಮೆರವಣಿಗೆ ರತ್ನಗಿರಿಗೆ ಹೋಗಿ ಬಳಿಕ ಬೆಳಿಗ್ಗೆ ಗಂಟೆ 8.45ರ ಮೀನ ಲಗ್ನದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ಪ್ರತಿಷ್ಠಾಪಕರಾದ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರಿಂದ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯುತ್ತದೆ.
ನಾಂದಿನಿ ಮಠದ ಜಿನ ಸೇನ ಭಟ್ಟಾರಕರಿಗೆ ಅಭಿನಂದನೆ
ಉಜಿರೆ: ಕೊಲ್ಲಾಪುರದ ನಾಂದಿನಿ ಜೈನ ಮಠದ ಭಟ್ಟಾರಕರಾಗಿ ಪಟ್ಟಾಭಿಷಿಕ್ತರಾದ ಬಳಿಕ ಧರ್ಮಸ್ಥಳಕ್ಕೆ ಗುರುವಾರ ಪ್ರಥಮ ಬಾರಿ ಆಗಮಿಸಿದ ಜಿನಸೇನ ಭಟ್ಟಾರಕರನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಭಿನಂದಿಸಿ ಗೌರವಿಸಿದರು.
ಸಮಾಜದ ಸಂಘಟನೆಯೊಂದಿಗೆ ಧರ್ಮ ಪ್ರಭಾವನೆ ಮಾಡಿ ಶ್ರಾವಕ-ಶ್ರಾವಕಿಯರಿಗೆ ಭಟ್ಟಾರಕರು ಮಾರ್ಗದರ್ಶನ ನೀಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಮಠದ ಪ್ರಗತಿಗೆ ತಾವು ಪೂರ್ಣ ಬೆಂಬಲ ನೀಡುವುದಾಗಿ ಹೆಗ್ಗಡೆಯವರು ಭರವಸೆ ನೀಡಿದರು.
ನಾಂದಿನಿ ಮಠದ ಭಟ್ಟಾರಕರು ಹೆಗ್ಗಡೆಯವರನ್ನು ನಾಂದಿನಿಗೆ ಆಮಂತ್ರಿಸಿದರು.
ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಅರಹಂತಗಿರಿಯ ಧವಳಕೀರ್ತಿ ಸ್ವಾಮೀಜಿ, ಕನಕಗಿರಿಯ ಭುವನಕೀರ್ತಿ ಸ್ವಾಮೀಜಿ, ಕಂಬದ ಹಳ್ಳಿಯ ಭಾನುಕೀರ್ತಿ ಭಟ್ಟಾರಕರು ಉಪಸ್ಥಿತರಿದ್ದರು.