ವಿಟ್ಲ: ಪಿಯುಸಿಯಲ್ಲಿ ತುಳು ಭಾಷೆಯನ್ನು ಒಂದು ವಿಷಯವನ್ನಾಗಿ ಬೋಧಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ. ಮುಂದಿನ ವರ್ಷದಿಂದಲೇ ಪಿಯುಸಿಯಲ್ಲಿ ತುಳು ಪಠ್ಯ ಸೇರ್ಪಡೆಯಾಗುವ ನಿರೀಕ್ಷೆ ಇದೆ ಎಂದು ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ. ಸಿ. ಭಂಡಾರಿ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸಾಹಿತ್ಯ ಸಂಘ ಜನತಾ ವಿದ್ಯಾಸಂಸ್ಥೆಗಳು ಅಡ್ಯನಡ್ಕ, ತುಳುವೆರೆ ಬೊಲ್ಪು ಕೂಟ ಇಟ್ಟೆಲ್ ಹಾಗೂ ಅಭಿಮತ ಟಿವಿ ಸಹಯೋಗದೊಂದಿಗೆ ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ’ನಮ್ಮ ತುಳುವೆರ್’ ಸಮ್ಮೇಳನ ಹಾಗೂ ಆಟಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಬರಹ, ಓದು ಹಾಗೂ ವ್ಯವಹಾರದ ಮೂಲಕ ತುಳು ಭಾಷೆಯನ್ನು ಬೆಳೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಅವರು ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಬೇಕೆಂದು ಆಗ್ರಹ ಈಡೇರಿದರೆ ಭಾಷೆಯ ಉನ್ನತಿಗೆ ಲಾಭವಾಗಲಿದೆ ಎಂದರು.
ಆಟಿ ಉತ್ಸವದ ಪ್ರಯುಕ್ತ ತುಳು ಸಾಹಿತಿ ಕೆ. ಮಹೇಂದ್ರನಾಥ್ ಸಾಲೆತ್ತೂರು ಅವರು ಆಟಿ ಆಚರಣೆಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಅಡ್ಯನಡ್ಕ ಎಜುಕೇಷನಲ್ ಸೊಸೈಟಿ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿದ್ದರು. ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ, ಸಂಸ್ಥೆಯ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರ್, ಅಭಿಮತ ಟಿವಿ ವಾಹಿನಿಯ ಆಡಳಿತ ನಿರ್ದೇಶಕಿ ಮಮತಾ ಪ್ರವೀಣ್ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕಿ ವಿಜಯ ಶೆಟ್ಟಿ ಸಾಲೆತ್ತೂರು, ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೊಪ್ಪಳ, ಜನತಾ ಪ. ಪೂ. ಕಾಲೇಜು ಪ್ರಿನ್ಸಿಪಾಲ್ ಡಿ. ಶ್ರೀನಿವಾಸ್, ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ. ಆರ್. ನಾಯ್ಕ್, ತುಳುವೆರೆ ಬೊಲ್ಪು ಕೂಟ ಇಟ್ಟೆಲ್ ಇದರ ಅಧ್ಯಕ್ಷ ಪ್ರವೀಣ್ ಜಯ ವಿಟ್ಲ ಹಾಗೂ ಸಾಹಿತ್ಯ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎ. ಸಿ. ಭಂಡಾರಿ ಹಾಗೂ ಬಾಬು ಕೊಪ್ಪಳ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಜಯಶ್ರೀ ಕೆ. ಆರ್. ಸ್ವಾಗತಿಸಿದರು. ಬೋಧಕ ವೃಂದದ ಶಿವಕುಮಾರ ಸಾಯ, ಸೋಮಶೇಖರ್ ಎಚ್., ರವಿಕುಮಾರ್ ಎಸ್., ವಸಂತ ಕೆ. ಹಾಗೂ ಸುರೇಶ್ ಪರಿಚಯ ಭಾಷಣ ಮಾಡಿದರು. ಗಣೇಶ್ ಕೆ. ಆರ್. ವಂದಿಸಿದರು. ಶೀನಪ್ಪ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
ಆಟಿಯಲ್ಲಿ ತಯಾರಿಸುವ ಖಾದ್ಯ ಪದಾರ್ಥ ಮತ್ತು ಆಹಾರ ತಿನಿಸುಗಳಿಂದ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಪರಾಹ್ನ ಸಮ್ಮೇಳನದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿಗಳಿಗೆ ಸ್ಪರ್ಧಾಕೂಟ ಜರುಗಿತು. ರಸಪ್ರಶ್ನೆ, ನೃತ್ಯ, ಹಾಡುಗಾರಿಕೆ, ಗ್ರಾಮೀಣ ಆಟೋಟಗಳು ಮತ್ತು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ, ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

