ಬಂಟ್ವಾಳ, ಮಾ.23: ಬ್ರಹ್ಮರಕೊಟ್ಲು ಟೋಲ್ ಗೇಟ್ ನ ಸರ್ವೀಸ್ ರಸ್ತೆಯಲ್ಲಿ ಕಬ್ಬಿಣದ ಬೇಲಿ ನಿರ್ಮಿಸಿ ಸಣ್ಣ ಸರಕು ಸಾಗಣೆ ವಾಹನಗಳನ್ನು ನಿರ್ಬಂಧಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಸರ್ವೀಸ್ ರಸ್ತೆಯ ಮಧ್ಯ ಭಾಗದಲ್ಲಿ ಆರು ಅಡಿಗಿಂತ ಎತ್ತರದ ವಾಹನಗಳು ಸಂಚರಿಸದಂತೆ ಕಬ್ಬಿಣದ ಬೇಲಿಯೊಂದನ್ನು ನಿರ್ಮಿಸಲಾಗಿದೆ. ಇಂದು ಬೆಳಗ್ಗೆಯಿಂದ ಈ ರಸ್ತೆಯಲ್ಲಿ ಪಿಕ್ ಅಪ್ ವಾಹನ ಸಹಿತ ಸಣ್ಣ ಸರಕು ಸಾಗಣೆಗಳ ವಾಹನಗಳಿಗೆ ಸಂಚರಿಸಲು ಸಾಧ್ಯವಾಗಿಲ್ಲ.


ಬೆಳಗ್ಗೆ ಸ್ಥಳೀಯ ವಾಹನಗಳ ಚಾಲಕರು ಸ್ಥಳದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಟೋಲ್ ಗೇಟ್ ನ ಉಸ್ತುವಾರಿಗಳ ಮಧ್ಯ ಮಾತಿನ ಚಕಮಕಿ ನಡೆಯಿತು. ಜಿಲ್ಲಾಧಿಕಾರಿಯ ಆದೇಶದಂತೆ ನಾವು ಬೇಲಿ ನಿರ್ಮಿಸಿದ್ದೇವೆ ಎಂದು ಟೋಲ್ ಉಸ್ತುವಾರಿಗಳು ಸಮಜಾಯಿಷಿ ನೀಡಿದರು.
ಮೊದಲೇ ನಿಧಾನಗತಿಯ ಟೋಲ್ ಸಂಗ್ರಹ, ಟೋಲ್ ಪ್ಲಾಝಾದಲ್ಲಿ ಇರಬೇಕಾರ ಸಮರ್ಪಕ ವ್ಯವಸ್ಥೆಯ ಕೊರತೆ ಮೊದಲಾದ ಸಮಸ್ಯೆಗಳಿಂದ ಒಂದಿಲ್ಲೊಂದು ವಿವಾದದಲ್ಲಿ ಕುಖ್ಯಾತಿ ಪಡೆದಿರುವ ಈ ಟೋಲ್ ಗೇಟ್ ನಲ್ಲಿ ಮತ್ತೊಂದು ಹೊಸ ವಿವಾದ ಶುರುವಾಗಿದೆ.
“ಲಕ್ಷಾಂತರ ರೂಪಾಯಿಯ ಕಾರಿನವರು ಈ ರಸ್ತೆಯಲ್ಲಿ ಟೋಲ್ ಪಾವತಿಸದೇ ಹೋಗುತ್ತಿದ್ದಾರೆ. ಪಿಕಪ್ ನಲ್ಲಿ ಕಟ್ಟಿಗೆ ಮೊದಲಾದ ಸರಕು ಸಾಗಣೆ ಮಾಡಿ ಬದುಕುವ ನಮ್ಮಂತ ಸ್ಥಳೀಯರನ್ನು ಲೂಟಿ ಮಾಡುತ್ತಿದ್ದಾರೆ. ಸಿಗುವ 300 ರೂ. ಬಾಡಿಗೆಯಲ್ಲಿ 120 ರೂ. ಟೋಲ್ ಕಟ್ಟಿದರೆ ನಮಗೆ ಉಳಿಯುವುದು ಏನು?” ಎಂದು ಸ್ಥಳೀಯ ಪಿಕಪ್ ಚಾಲಕರೊಬ್ಬರು ತನ್ನ ಅಳಲು ತೋಡಿಕೊಂಡಿದ್ದಾರೆ.
“ಟೋಲ್ ತಪ್ಪಿಸಿ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚರಿಸುವುದಾದರೆ ಅದಕ್ಕೆ ವೈಜ್ಞಾನಿಕ ರೀತಿಯಲ್ಲಿ ಟೋಲ್ ಸಂಗ್ರಹಕ್ಕೆ ವ್ಯವಸ್ಥೆ ಮಾಡಬೇಕು. ಇಡೀ ರಸ್ತೆಯಲ್ಲಿ ಆರು ಅಡಿಗಿಂತ ಎತ್ತರದ ವಾಹನಗಳ ಸಂಚಾರವನ್ನೇ ನಿರ್ಬಂಧಿಸುವುದು ಎಂದರೆ ಏನು ಅರ್ಥ? ನಾಳೆ ಏನಾದರೂ ಅವಘಡ ಸಂಭವಿಸಿದರೆ ತುರ್ತು ವಾಹನಗಳು ಸಂಚರಿಸುವುದು ಹೇಗೆ?” ಸ್ಥಳೀಯ ಇನ್ನೋರ್ವ ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಿದರು.
ಬ್ರಹ್ಮರಕೊಟ್ಲು ಟೋಲ್ ಗೇಟ್ ಅದೊಂದು ಹಗಲು ದರೋಡೆಯ ಕೇಂದ್ರ. ರಸ್ತೆ ಕಾಮಗಾರಿಯೇ ಪೂರ್ಣ ಆಗದಿದ್ದರೆ ಟೋಲ್ ಸಂಗ್ರಹ ಮಾಡುವುದು ನಿಯಮದ ಉಲ್ಲಂಘನೆ. ಅದನ್ನು ಟೋಲ್ ಗೇಟ್ ಎನ್ನುವುದಕ್ಕಿಂದ ಹಗಲು ದರೋಡೆಯ ಟಿಕೆಟ್ ಕೌಂಟರ್ ಎನ್ನಬಹುದು. ಸರ್ವೀಸ್ ರಸ್ತೆಯನ್ನೇ ಬಂದ್ ಮಾಡುವ ಮೂಲಕ ಸರ್ವಾಧಿಕಾರ ಮಾಡುತ್ತಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಬೆಲೆಯೇ ಇಲ್ಲವಾಗಿದೆ. ಇದರ ವಿರುದ್ಧ ಶೀಘ್ರವೇ ಕಾನೂನು ಹೋರಾಟ ಆರಂಭಿಸಲಾಗುವುದು.
– ಪ್ರಭಾಕರ್ ದೈವಗುಡ್ಡೆ,
ಹೋರಾಟಗಾರ
ನಿಯಮದ ಪ್ರಕಾರ ಟೋಲ್ ತಪ್ಪಿಸಿ ಪರ್ಯಾಯ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹಿಸಲು ಅವಕಾಶ ಇದೆ. ಆದರೆ ಅದಕ್ಕೂ ನಿಯಮಗಳಿವೆ. ಯಾವುದೇ ಅಧಿಕಾರಿಗಳಿಗೆ ಮಾಹಿತಿ ನೀಡದೆ ಬ್ರಹ್ಮರಕೊಟ್ಲು ಸರ್ವೀಸ್ ರಸ್ತೆಯಲ್ಲಿ ಬೇಲಿ ನಿರ್ಮಾಣದ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಅವೈಜ್ಞಾನಿಕವಾಗಿದ್ದರೆ ಬೇಲಿ ತೆರವುಗೊಳಿಸಿ ವೈಜ್ಞಾನಿಕವಾಗಿ ಟೋಲ್ ಸಂಗ್ರಹಕ್ಕೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.
– ಡಾ. ರಾಜೇಂದ್ರ ಕೆ.ವಿ.,
ದ.ಕ. ಜಿಲ್ಲಾಧಿಕಾರಿ

