ಬಂಟ್ವಾಳ: ತುಂಬೆ ಅಣೆಕಟ್ಡು ಮೇಲ್ಬಾಗದಲ್ಲಿ ಕೃಷಿಗೆ ನದಿನೀರು ಬಳಕೆಗೆ ನಿರ್ಬಂಧಿಸುವ ನಿಟ್ಟಿನಲ್ಲಿ ಪಂಪ್ ಸೆಟ್ ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಜಿಲ್ಲಾಧಿಕಾರಿಯವರು ಮೆಸ್ಕಾಂಗೆ ಸೂಚನೆ ನೀಡಿರುವುದನ್ನು ರೈತಸಂಘ ಹಸಿರುಸೇನೆ ಬಂಟ್ವಾಳ ಘಟಕ ಮತ್ತು ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ಥ ರೈತರ ಹೋರಾಟ ಸಮಿತಿ ಖಂಡಿಸಿದೆ. ಜಿಲ್ಲಾಧಿಕಾರಿಯವರ ಈ ಆದೇಶ ರೈತವಿರೋಧಿ ನೀತಿಯಾಗಿದ್ದು, ನಗರದ ನಾಗರಿಕರನ್ನು ಬದುಕಿಸಲು ನದಿ ತೀರದ ರೈತರ ಜೀವನದಲ್ಲಿ ಚೆಲ್ಲಾವಾಡುವುದು ಯಾವ ನ್ಯಾಯ ಎಂದು ತುಂಬೆ ಡ್ಯಾಂ ಸಂತ್ರಸ್ಥ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ಪ್ರಶ್ನಿಸಿದ್ದಾರೆ. ಕೃಷಿಯನ್ನೇ ನಂಬಿ ಜೀವನ ನಡೆಸುವ ರೈತರು ತಾವು ಬೆಳಸಿದ ಅಡಕೆ, ತೆಂಗುಕೃಷಿ, ನೀರಿನ ಆಸರೆಯಿಂದ ಫಸಲು ನೀಡುತ್ತದೆ. ಕೃಷಿಗೆ ನೀರುಣಿಸದೆ ಇದ್ದರೆ ಮರವೇ ಸತ್ತು ಹೋಗಲಿದೆ. ಮತ್ತೆ ಗಿಡ ನೆಟ್ಡು ಫಸಲು ಬರಲು 7 ವರ್ಷಗಳು ಕಾಯಬೇಕು ಈ 7 ವರ್ಷದಲ್ಲಾಗುವ ನಷ್ಟವನ್ನು ಭರಿಸಿ ಬಳಿಕ ಈ ರೈತವಿರೋಧಿ ನೀತಿ ಜಾರಿಗೊಳಿಸಲಿ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಈಗಾಗಲೇ ಡ್ಯಾಂನ ನೀರು ರೈತರ ಹೊಲಗಳಲ್ಲಿ ತುಂಬಿದ್ದು, ಪ್ರಸ್ತುತ ವರ್ಷ ನೆಲಬಾಡಿಗೆ, ಶಾಶ್ವತ ಪರಿಹಾರವನ್ನು ನೀಡದೆ ರೈತರನ್ನು ನಿರ್ಲಕ್ಷಿಸಲಾಗಿದೆ. ಇದೀಗ ಪಂಪ್ ಸೆಟ್ ಗಳ ವಿದ್ಯುತ್ ಕಡಿತಗೊಳಿಸಲು ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿರುವುದು ಅಕ್ಷಮ್ಯವಾಗಿದೆ. ರೈತರ ಹಿತಾಸಕ್ತಿಗೆ ಮಾರಕವಾದ ಈ ಆದೇಶವನ್ನು ಹಿಂಪಡೆಯದಿದ್ದರೆ ಜಿಲ್ಲಾಡಳಿದ ವಿರುದ್ದ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಬಹುದು ಎಂದು ಸುಬ್ರಹ್ಮಣ್ಯಭಟ್ ಎಚ್ಚರಿಸಿದ್ದಾರೆ.
