ವಿಟ್ಲ: ಪುಣಚ ಗ್ರಾಮದ ತೋರಣಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪೂರ್ವ ತರಗತಿಗಳ ಉದ್ಘಾಟನೆ ಗುರುವಾರ ನಡೆಯಿತು.
ತರಗತಿಯನ್ನು ಪುಣಚ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಉದ್ಘಾಟಿಸಿ ಗ್ರಾಮದ ಶಾಲೆ ಪ್ರಗತಿಪಥದಲ್ಲಿ ಸಾಗಲು ಪೋಷಕರ, ವಿದ್ಯಾಭಿಮಾನಿಗಳ ನಿರಂತರ ಸಹಕಾರ ಅವಶ್ಯಕವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ತೋರಣಕಟ್ಟೆ ವಿದ್ಯಾಭಿಮಾನಿ ಸಮಿತಿ ಅಧ್ಯಕ್ಷ ವಿಶ್ವನಾಥ ಭಟ್ ಮಾತನಾಡಿ ಮುಚ್ಚಿ ಹೋಗಲಿರುವ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಈ ಶೈಕ್ಷಣಿಕ ಸಾಲಿನಿಂದ ಶಿಕ್ಷಣಪ್ರೇಮಿಗಳ ಸಹಕಾರದಿಂದ ಉಚಿತವಾಗಿ ಆಂಗ್ಲ ಮಾಧ್ಯಮ ನರ್ಸರಿ ಸ್ಕೂಲ್ ಆರಂಭಿಸಲಾಗಿದೆ ಎಂದರು.
ಪುಣಚ ಗ್ರಾಮ ಪಂಚಾಯಿತಿ ಸದಸ್ಯರಾದ ಪವಿತ್ರ ನಾಯಕ್, ಜಯರಾಮ ಕಾನ, ವಿದ್ಯಾಭಿಮಾನಿ ಸಮಿತಿ ಗೌರವಾಧ್ಯಕ್ಷ ಆಲ್ಬರ್ಟ್ ಡಿಸೋಜ, ಕಾರ್‍ಯದರ್ಶಿ ಟಿ.ಲೋಕೇಶ್ ನಾಯ್ಕ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಕವಿತ ಎಸ್. ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿಯರಾದ ಲಕ್ಷ್ಮೀ ಪ್ರಭಾ, ವಿಜಯಲಕ್ಷ್ಮೀ ಸಹಕರಿಸಿದರು.
