ಬಂಟ್ವಾಳ: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ಫ್ಯೂ ನಿಯಮಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ನಿಯಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.

ಕೊರೊನಾ ನಿಯಂತ್ರಣದ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದ ಅವರು, ಜನರಿಗೆ ಭಯಹುಟ್ಟಿಸುವ ರೀತಿಯ ಅಪಪ್ರಚಾರಗಳಿಗೆ ಕಡಿವಾಣ ಹಾಕಬೇಕು. ಸುಳ್ಳು ಪ್ರಚಾರ ಕುರಿತು ಕಟ್ಟುನಿಟ್ಟಿನ ನಿಗಾ ವಹಿಸಿ. ಈ ಸಂದರ್ಭ ಯಾವುದೇ ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸುವ ಕಾರ್ಯ ಮಾಡಬೇಕು. ಈ ಕುರಿತು ವಿಶೇಷ ತಂಡ ರಚನೆ ಮಾಡಿ
ಎಂದರು.
ಸರಿಯಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರ್ ಮತ್ತು ಪೊಲೀಸರಿಗೆ ಸೂಚಿಸಿದ ಶಾಸಕರು, ವಿನಾಕಾರಣ ಹೊರಗೆ ತಿರುಗುವವರ ಮೇಲೆ ಕೇಸ್ ದಾಖಲಿಸಿ. ಬೀಟ್ ಪೊಲೀಸರು ನಿಗಾ ವಹಿಸಬೇಕು. ಹೈವೇ ಪ್ಯಾಟ್ರೋಲ್ ವಾಹನಗಳ ಗಸ್ತು ಹೆಚ್ಚಿಸಿ ಎಂದು ಅವರು ಪೋಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಕೊರೊನಾ ವಿರುದ್ದದ ಹೋರಾಟದಲ್ಲಿ ಯಾರು ವಿರೋಧ ಮಾಡಿದರೂ ಅಡ್ಡ ಬಂದರೂ ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮಕೈಗೊಳ್ಳಿ. ಅಧಿಕಾರಿಗಳು ಮತ್ತು ಟಾಸ್ಕ್ ಫೋರ್ಸ್ ಸಮಿತಿ ಜೊತೆಯಾಗಿ ಕೆಲಸ ಮಾಡಿದರೆ ಗ್ರಾಮ ಮಟ್ಟದಲ್ಲಿ ಕೊರೊನಾ ನಿಯಂತ್ರಣ ಸಾಧಿಸಲು ಸಾಧ್ಯವಾಗಬಹುದು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಕೊರೊನಾ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳಿ. ಪೋಲೀಸರು ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಿ. ಯಾರಿಗೂ ತಲೆಕೆಡಿಸಿಕೊಳ್ಳಬೇಡಿ. ಕೊರೊನಾ ನಿಯಂತ್ರಣಕ್ಕಾಗಿ ಒಗ್ಗಟ್ಟಿನ ಮೂಲಕ ಹೋರಾಟ ಮಾಡೋಣ. ಜನರ ಸೇವೆ ಮಾಡಲು ಸಿಕ್ಕಿದ ಅವಕಾಶ ಎಂದು ತಿಳಿದು ಸಂಘಟನಾತ್ಮಕವಾಗಿ ಕೆಲಸ ಮಾಡಿ ಎಂದರು.
ಪರ್ಲಿಯಾ, ಫಾದರ್ ಮುಲ್ಲರ್ ಮತ್ತು ಸೋಮಯಾಜಿ ಆಸ್ಪತ್ರೆಗಳಲ್ಲಿ ನೋಡಲ್ ಅಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್. ಹೇಳಿದರು.
ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಜೊತೆಯಲ್ಲಿ ವಾಮದಪದವು ಆಸ್ಪತ್ರೆಯಲ್ಲಿಯೂ ಕೋವಿಡ್ ರೋಗಿಗಳಿಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಲಾಗಿ ಸಂಪೂರ್ಣ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಕಲ್ಲಡ್ಕದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲಾಗುತ್ತದೆ ಜನ ಭಯಬೀತರಾಗುವುದು ಬೇಡ ಎಂದು ಶಾಸಕರು ತಿಳಿಸಿದರು.
ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಕೊರೊನಾ ಸೋಂಕಿತರಿಗೆ 24 ಬೆಡ್ ಇದ್ದು ಅದರಲ್ಲಿ ಇನ್ನು 2 ಬೆಡ್ ವ್ಯವಸ್ಥೆ ಖಾಲಿ ಇದೆ. 1,345 ಮಂದಿ ಸೊಂಕಿತರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಕಡೆ ಕೋವಿಡ್ ಕೇರ್ ಸೆಂಟರ್ ಇದೆ. ವಗ್ಗದಲ್ಲಿ ತೆರೆಯುವ ಅವಕಾಶ ಇದೆ. ವಗ್ಗದಲ್ಲಿ ಭರ್ತಿಯಾದರೆ ವಾಮದಪದವುನಲ್ಲಿ ವ್ಯವಸ್ಥೆ ಮಾಡಲು ಅವಕಾಶ ಇದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ದೀಪಾ ಪ್ರಭು ಹೇಳಿದರು.
ವೇದಿಕೆಯಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿಸೋಜ, ತಹಶೀಲ್ದಾರ್ ರಶ್ಮಿ ಎಸ್.ಆರ್., ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಾಪ್ರಭು ಮತ್ತು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
