ಮುಂಬಯಿ (ಸುರತ್ಕಲ್): ಬಂಟರ ಸಂಘ (ರಿ.) ಸುರತ್ಕಲ್ ಇದರ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇವರ ಸಹಕಾರದಲ್ಲಿ ನಿರ್ಮಿಸಿದ ಎರಡು ಮನೆಗಳ ಕೀ ಹಸ್ತಾಂತರ ಹಾಗೂ ಅಭಿನಂದನೆ, ಬಡವರಿಗೆ ಸಹಾಯ ಹಸ್ತ ಮತ್ತು ವಿದ್ಯಾಥಿ ವೇತನ ವಿತರಣಾ ಸಮಾರಂಭವೂ ಜೂನ್ 16ರಂದು ಭಾನುವಾರ ಸಂಜೆ 5 ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ಜರಗಲಿದೆ ಎಂದು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ಹೊಸಬೆಟ್ಟು ತಿಳಿಸಿದರು.

ಸುರತ್ಕಲ್ ಬಂಟರ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಳ ಒಟ್ಟೆ ಕಾಯರ್ ನಿವಾಸಿ ವಿಜಯಲಕ್ಷ್ಮೀ ಶೆಟ್ಟಿ ಅವರಿಗೆ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಸುರತ್ಕಲ್ ಬಂಟರ ಸಂಘ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಕಾರದಿಂದ ಮನೆ ನಿರ್ಮಿಸಿ ಕೊಡಲಾಗುತ್ತಿದೆ ಎಂದರು. ಅದೇ ರೀತಿ ಚೇಳಾರ್ ಖಂಡಿಗೆ ನಿವಾಸಿ ಹರೀಶ್ ಶೆಟ್ಟಿ ಅವರಿಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮತ್ತು ಸುರತ್ಕಲ್ ಬಂಟರ ಸಂಘದ ನೆರವಿನಲ್ಲಿ ಮನೆಯನ್ನು ನಿರ್ಮಿಸಿ ಕೊಡಲಾಗುತ್ತಿದೆ. ಸುರತ್ಕಲ್ ಬಂಟರ ಸಂಘವು ಈ ಹಿಂದೆ ಎರಡು ಮನೆಗಳನ್ನು ಸಮಾಜದ ಬಂಧುಗಳಿಗೆ ನಿರ್ಮಿಸಿ ಕೊಟ್ಟಿತ್ತು ಎಂದರು.
ಕಳೆದ ನಾಲ್ಕು ವರ್ಷಗಳಿಂದ ಸುರತ್ಕಲ್ ಬಂಟರ ಸಂಘವು ವಿಧವೆಯರಿಗೆ, ಭಿನ್ನ ಸಾಮರ್ಥ್ಯದವರಿಗೆ ಹಾಗೂ ವಿಕಲಚೇತನರಿಗೆ ಸಹಾಯ ಹಸ್ತವನ್ನು ನೀಡುತ್ತಾ ಬಂದಿರುತ್ತದೆ. ಪ್ರಸ್ತುತ ಒಟ್ಟು 26 ಮಂದಿಗೆ ತಲಾ ಆರು ಸಾವಿರ ರೂ. ನೀಡಲಾಗುತ್ತಿದೆ. ಬಂಟರ ಯಾನೆ ನಾಡವರ ಮಾತೃ ಸಂಘ ಕೂಡಾ ಸುರತ್ಕಲ್ ಬಂಟರ ಸಂಘದ ಸಮಾಜ ಮುಖಿ ಕಾರ್ಯದೊಂದಿಗೆ ಕೈಜೋಡಿಸಿ ವಿಧವೆಯರಿಗೆ, ಭಿನ್ನ ಸಾಮರ್ಥ್ಯದವರಿಗೆ ಹಾಗೂ ವಿಕಲ ಚೇತನರಿಗೆ ಸದ್ರಿ ವರ್ಷದಿಂದ ತಲಾ ಆರು ಸಾವಿರ ರೂಪಾಯಿಯನ್ನು ನೀಡಲಿದ್ದಾರೆ. ಅಂತೆಯೇ ಸುರತ್ಕಲ್ ಬಂಟರ ಸಂಘದ ವ್ಯಾಪ್ತಿಯಲ್ಲಿ ಶೈಕ್ಷಣಿಕ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಅಭಿನಂದನೆ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾಥಿ ವೇತನವನ್ನು ಸಮಾರಂಭದಲ್ಲಿ ವಿತರಿಸಲಾಗುವುದು. ಸುರತ್ಕಲ್ ಬಂಟರ ಸಂಘ ನೀಡುವ ವಿದ್ಯಾಥಿ ವೇತನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಬೆಂಗಳೂರು ಬಂಟರ ಸಂಘ ನೆರವು ನೀಡಿದೆ.
ಸಮಾರಂಭದ ಅಧ್ಯಕ್ಷತೆ ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜಾ ವಹಿಸಲಿದ್ದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಸಂಘದ ಮಾಹಿತಿ ಪುಸ್ತಕವನ್ನು ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಚೇರ್‌ಮೆನ್ ಎ.ಸದಾನಂದ ಶೆಟ್ಟಿ ಬಿಡುಗಡೆ ಗೊಳಿಸಲಿದ್ದಾರೆ. ಮನೆಗಳ ಕೀ ಹಸ್ತಾಂತರವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನೆರವೇರಿಸಲಿದ್ದಾರೆ.
ಅತಿಥಿಗಳಾಗಿ ಮದ್ಯ ಶ್ರೀ ಖಡ್ಗೇಶ್ವರ-ಖಡ್ಗೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕರುಣಾಕರ ಎಂ.ಶೆಟ್ಟಿ ಮದ್ಯಗುತ್ತು, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಮುಂಬಯಿ ಮಲಾಡ್ ಪ್ರಸಾದ್ ಗ್ರೂಪ್ ಆಫ್ ಹೊಟೇಲ್ಸ್‌ನ ಆಡಳಿತ ನಿರ್ದೇಶಕ ಬಾಬು ಶೆಟ್ಟಿ ಪೆರಾರ ಭಾಗವಹಿಸಲಿದ್ದಾರೆ ಎಂದು ಸಂಘದ ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ ತಿಳಿಸಿದರು.
ಅಂದು ಬೆಳಿಗ್ಗೆ 9.30ಕ್ಕೆ ಸುರತ್ಕಲ್ ಬಂಟರ ಸಂಘದ 19ನೇ ವಾರ್ಷಿಕ ಮಹಾಸಭೆ ಸಂಘದ ಸಭಾ ಭವನದಲ್ಲಿ ನಡೆಯಲಿದೆ. ಸಂಘದ ವ್ಯಾಪ್ತಿಯ ಗ್ರಾಮದ ಬಂಟ ಸಮಾಜ ಬಾಂಧವರಿಂದ ಸಾಂಸ್ಕೃತಿಕ ಸ್ಪರ್ಧೆ ಜರಗಲಿದ್ದು, ವಿಜೇತ ತಂಡಕ್ಕೆ 15 ಸಾವಿರ ರೂಪಾಯಿ, ದ್ವಿತೀಯ ತಂಡಕ್ಕೆ 10 ಸಾವಿರ ಹಾಗೂ ತೃತೀಯ ತಂಡಕ್ಕೆ 5 ಸಾವಿರ ಹಾಗೂ ವಿಶೇಷ ಬಹುಮಾನ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ಮುಂಚೂರು , ಉಪಾಧ್ಯಕ್ಷ ನವೀನ್ ಶೆಟ್ಟಿ ಪಡ್ರೆ , ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಕುಡುಂಬೂರು , ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಪೆರ್ಮುದೆ , ಮಹಿಳಾ ವೇದಿಕೆ ಅಧ್ಯಕ್ಷೆ ಬೇಬಿ ಶೆಟ್ಟಿ , ಕಾರ್ಯದರ್ಶಿ ಚಿತ್ರಾ ಜೆ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.