ವಿಟ್ಲ: ಸ್ವಾರ್ಥ ಬಿಟ್ಟು ದೇವರಿಗೋಸ್ಕರ ಕೆಲಸ ಮಾಡಿದಾಗ ಜೀವನ ಪಾವನವಾಗುತ್ತದೆ. ನಂಬಿದ ದೇವರ ಸನ್ನಿಧಿಯನ್ನು ಕಾಪಾಡುವ ದೊಡ್ಡ ಜವಾಬ್ದಾರಿ ನಮಗಿದೆ. ಗ್ರಾಮದ ಜನರೇ ಸೇರಿಕೊಂಡು ಮಾಡಿದ ದೇವಾಲಯ ಎಲ್ಲರಿಗೂ ಆದರ್ಶವಾಗಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಅವರು ಶನಿವಾರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಾಡ ಶಿಬರಿಕಲ್ಲ ಶ್ರೀ ಮಲರಾಯ – ಮೂವರ್ ದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಧರ್ಮ ಚೌಕಟ್ಟಿನಲ್ಲಿರುವ ಧರ್ಮದ ಸಂವಿಧಾನ ಮುಖ್ಯ. ಹಿಂದು ಎನ್ನುವುದು ಶ್ರೇಷ್ಟ ಸಂಸ್ಕೃತಿ. ಆಚಾರ ವಿಚಾರ ಜೀವನದಲ್ಲಿ ಮುಖ್ಯವಾಗುವುದು. ಭಗವಂತನ ಅನುಸಂದಾನ ನಡೆಯಬೇಕು. ಧರ್ಮ ಸಂಸ್ಕೃತಿಯ ಬಗ್ಗೆ ಸಮಾಜ ಸುಧಾರಣೆ ಆಗಿದ್ದರೆ ಕುಂಡಡ್ಕದಲ್ಲಿ ಮಾತ್ರ ಎಂದು ತಿಳಿಸಿದರು.
ಡಾ. ಮಧುಸೂಧನ ಅಡಿಗ ಅವರು ದೇವರು ಮತ್ತು ವೇದದ ಬಗ್ಗೆ ಪ್ರವಚನ ನೀಡಿದರು. ಸೇವೆಯಲ್ಲಿ ಸೇವೆ ಸಲ್ಲಿಸಿದ ಭಾಸ್ಕರ ಶೆಟ್ಟಿ ಸೆನೆರೆಮಜಲು, ಮಹಾಬಲ ಶೆಟ್ಟಿ ಸೆನೆರೆಮಜಲು, ಭೂತಾರಾಧನೆಯ ಕುಜಂಬ ನಲಿಕೆ, ಕ್ರೀಡಾ ಕ್ಷೇತ್ರದಲ್ಲಿ ಶರತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಂಡಿಗ ಶ್ರೀ ಕೈಲಾಸೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸ್ವರ ರವೀಶ್ ಕೆ. ಎನ್. ಖಂಡಿಗ ವಹಿಸಿದ್ದರು.
ಕೊಂಡೆವೂರು ಸೋಮಯಾಗ ಸ್ವಾಗತ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಉದ್ಯಮಿ ರಾಜಾರಾಮ ಭಟ್ ಬಲಿಪ್ಪಗುಳಿ, ಸಹಾಯಕ ಕಾರ್ಯನಿರ್ವಾಹಕ ಸುಂದರ ಪೂಜಾರಿ, ಪುತ್ತೂರು ಶಿವಳ್ಳಿ ಸಂಪದ ಅಧ್ಯಕ್ಷ ಹರೀಶ್ ಪುತ್ತೂರಾಯ, ಪುಚ್ಚಪ್ಪಾಡಿ ಗೌರಿ ಗಣೇಶ ಸೇವಾ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ಜೈನ್, ಯೋಗೀಶ್ ಕುಡ್ವ ಉಪಸ್ಥಿತರಿದ್ದರು.
ಜತ್ತಪ್ಪ ಅಡ್ಯಾಲು ಸ್ವಾಗತಿಸಿದರು. ಚಂದ್ರಹಾಸ ಶೆಟ್ಟಿ ಪ್ರಸ್ತಾಪನೆಗೈದರು. ಶ್ರೀಪತಿ ನಾಯಕ್ ಡಿ., ಶ್ರದ್ಧಾ ಮರುವಾಳ ಪ್ರತಿಭಾ ಪುರಸ್ಕಾರ ನಡೆಸಿದರು. ಸುಮಂತ್ ಆಳ್ವ ಮರುವಾಳ, ಶ್ರೀಲತಾ ಪೆಲತ್ತಿಂಜ ಗೌರವಾರ್ಪಣೆ ನಡೆಸಿದರು. ನಳಿನಿ ನಾರಾಯಣ ಪೂಜಾರಿ ಪಿಲಿಂಜ ವಂದಿಸಿದರು. ನಾರಾಯಣ ಪೂಜಾರಿ ಎಸ್. ಕೆ. ಕಾರ್ಯಕ್ರಮ ನಿರೂಪಿದರು.

