ಸುಬ್ರಹ್ಮಣ್ಯ: ದಕ್ಷಿಣ ಕನ್ನಡ- ಕೊಡಗು ಗಡಿ ಭಾಗದ ಕೂಜಿಮಲೆಯ ಎಸ್ಟೇಟ್ ಅಂಗಡಿಗೆ ನಕ್ಸಲರು ಭೇಟಿ ನೀಡಿದ ಬೆನ್ನಲ್ಲೇ ಮಾ.23ರಂದು ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಸಣ್ಣದಾಗಿ ಮಳೆಯಾಗುತ್ತಿದ್ದ ಸಂದರ್ಭ ದಲ್ಲಿ ಶಂಕಿತರ ತಂಡ ಐನೆಕಿದು ಗ್ರಾಮದ ಅರಣ್ಯದಂಚಿನ ತೋಟದ ಮೂಲಕ ಆಗಮಿಸಿತ್ತು. ತೋಟದಲ್ಲಿದ್ದ ಕೆಲಸದವರ ಶೆಡ್‌ಗೆ ಭೇಟಿ ನೀಡಿದ ವೇಳೆ ಕೆಲಸದಾಳು ಶೆಡ್‌ನ ಬಾಗಿಲು ಹಾಕಿದ್ದು, ಬಳಿಕ ಶಂಕಿತರ ತಂಡ ಅಲ್ಲೇ ಪಕ್ಕದಲ್ಲಿರುವ ತೋಟದ ಮಾಲಕರ ಮನೆಗೆ ತೆರಳಿ ಒಳಹೊಕ್ಕಿತ್ತು. ಮನೆಯವರ ಜತೆ ಸುಮಾರು ಒಂದು ತಾಸಿಗೂ ಅಧಿಕ ಕಾಲ ಮಾತುಕತೆ ನಡೆಸಿತ್ತು.