ದೈಹಿಕ ಆರೋಗ್ಯ ಕಾಪಾಡಲು ಕ್ರೀಡೆ ಸಹಾಯಕಾರಿ ಎಂದು ನ್ಯಾಯವಾದಿ ಹಾಗೂ ಬಂಟ್ವಾಳ ಸರಕಾರಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್ ಕುಮಾರ್ ರೈ ಹೇಳಿದರು. ಸರಕಾರಿ ಪ್ರಥಮ ದರ್ಜೆಕಾಲೇಜಿನ ವಾರ್ಷಿಕ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೈಹಿಕ ಹಾಗೂ ಮಾನಸಿಕವಾಗಿ ದೈನಂದಿನ ಜೀವನದಲ್ಲಿ ಸಧೃಡರಾಗಿ ಕೆಲಸ ಕಾರ್ಯಗಳನ್ನು ಮಾಡಬೇಕಾದರೆ ವ್ಯಾಯಾಮ ಅತೀಅಗತ್ಯ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಕ್ತಿವಂತರಾದ ಯುವಜನತೆಯನ್ನು ನಾವು ಪಡೆಯಬಹುದೆಂದು ಅವರು ಹೇಳಿದರು.

ಸಭಾಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರಿನ ರೋಶನಿ ನಿಲಯ ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ಸಂದೀಪ್ ಸಾಲ್ಯಾನ್ ಮಾತನಾಡಿ ಯುವಕರು ನಮ್ಮದೇಶದ ಸಂಪತ್ತು. ಮಾದಕ ವ್ಯಸನಗಳಿಂದಾಗಿ ಯುವಕರು ಶಕ್ತಿಹೀನರಾಗುತ್ತಿದ್ದಾರೆ, ಕ್ರೀಡೆಯ ಶಿಸ್ತನ್ನು ರೂಢಿಸಿಕೊಳ್ಳುವುದರಿಂದ ಯುವಜನತೆ ದೇಶದ ಸಂಪನ್ಮೂಲವಾಗಿ ರೂಪುಗೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಗಿರೀಶ್ ಭಟ್‌ಕ್ರೀಡಾ ಸ್ಪೂರ್ತಿಯಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳಾದ ರಂಜಿತ್ ಮತ್ತು ಜಗನ್ನಾಥ್ ಇವರನ್ನುಗೌರವಿಸಲಾಯಿತು. ದೈಹಿಕ ಶಿಕ್ಷಣ ಬೋಧಕರಾದ ಅಪರ್ಣ ಆಳ್ವ ಸ್ವಾಗತಿಸಿದರು. ಮಮತಾ ಕಾರ್ಯಕ್ರಮ ನಿರೂಪಿಸಿದರು.