ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆಯ ಕ್ರೀಡಾ ವಿಭಾಗದ ವತಿಯಿಂದ 2018-19ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಜಯ ನಾಯಕ್ ಕರ್ಪೆ ರಾಷ್ಟ್ರೀಯ ಕ್ರೀಡಾಪಟು ಇವರು ಕ್ರೀಡಾಧ್ವಜವನ್ನು ಆರೋಹಣ ಮಾಡುವುದರ ಮೂಲಕ ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಕ್ರೀಡೆಯು ದಿನಾಚರಣೆಗೆ ಸೀಮಿತವಾಗದೆ ಜೀವನೋತ್ಸಾಹವಾಗಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಕೆಲಸ ಸಿಗಬೇಕಾದರೆ ತುಂಬಾ ಕಷ್ಟಪಡಬೇಕಾಗುತ್ತದೆ. ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಅಥವಾ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡರೆ ಸರ್ಕಾರಿ ನೌಕರಿ ಪಡೆಯುವುದರಲ್ಲಿ ಅನುಮಾನವೇ ಇಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸತ್ಯನಾರಾಯಣ ಭಟ್ ಇವರು ಕ್ರೀಡೆಯ ಮೂಲಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಗೆಲುವು ಒಬ್ಬರದೇ ಹೊರತು ಎಲ್ಲರದಲ್ಲ. ಸೋಲು ಗೆಲುವನ್ನು ಕ್ರೀಡಾ ಸ್ಪೂರ್ತಿಯಿಂದ ಸ್ವೀಕರಿಸಬೇಕು ಎಂದು ಕರೆ ನೀಡಿದರು.
ಕ್ರೀಡಾ ವಿಭಾಗದ ಸಂಚಾಲಕರಾದ ಶ್ರೀನಿವಾಸ ಗ್ರಂಥಪಾಲಕರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಸೈಂಟ್ ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕರಾದ ಸೃಜನ್‌ರವರು ಕ್ರೀಡೆಗಳನ್ನು ನಡೆಸಿಕೊಟ್ಟರು. ಸುಂದ್ರೇಶ ಎನ್ ಸಹಾಯಕ ಪ್ರಾಧ್ಯಾಪಕರು ಇವರು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಭಾವೈಕ್ಯತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನಸೀಮಾ ಬೇಗಂ ಎಸ್, ಪಾವನಿ ಪಿ, ಹನುಮಂತಯ್ಯ, ಅತಿಥಿ ಉಪನ್ಯಾಸಕರಾದ ಲತಾ, ಸವಿತ ಮತ್ತು ರಂಗನಾಥ್‌ರವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಮನೀಶ್ ಮತ್ತು ದೀಪಕ್ ಪ್ರಾರ್ಥಿಸಿ, ವಿದ್ಯಾರ್ಥಿ ಕ್ರೀಡಾ ಕಾರ್ಯದರ್ಶಿಯಾದ ದಿವಾಕರ ಸ್ವಾಗತಿಸಿ, ವಿದ್ಯಾರ್ಥಿ ಕ್ರೀಡಾ ಕಾರ್ಯದರ್ಶಿಯಾದ ರಕ್ಷಿತಾ ವಂದಿಸಿದ ಕಾರ್ಯಕ್ರಮವನ್ನು ದೀಕ್ಷಿತಾ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

