ಬಂಟ್ವಾಳ: ಸಾಮಾಜಿಕ ಜಾಲತಾಣಗಳ ಸಾಧಕಗಳಿಗಿಂತ ಬಾಧಕಗಳ ಬಗ್ಗೆ ತಿಳಿವಳಿಕೆ ಅಗತ್ಯ. ಸಾಮಾಜಿಕ ಜಾಲತಾಣ ಅತಿಯಾಗಿ ಬಳಸಿದರೆ ಜೀವ ಹಾಗೂ ಜೀವನಕ್ಕೆ ಮಾರಕವಾಗಲಿದೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಟಿ.ಡಿ. ನಾಗರಾಜ್ ಹೇಳಿದರು.


ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ, ಪ್ರೆಸ್ ಕ್ಲಬ್ ಬಿ.ಸಿ.ರೋಡ್ ಹಾಗೂ ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಮಾಜಿಕ ಜಾಲತಾಣ- ಸಾಧಕ-ಬಾಧಕಗಳು ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.
ಸಾಮಾಜಿಕ ಜಾಲತಾಣ ಸಮೂಹಕ್ಕೆ ಮಾಹಿತಿ ನೀಡುವ ವೇದಿಕೆಯಾಗಿದೆ. ಸಾಮಾಜಿಕ ಜಾಲತಾಣ ಸಂವಹನಕ್ಕೆ ಸಂಬಂಧವನ್ನು ವೃದ್ಧಿಸುತ್ತದೆ. ಶಿಕ್ಷಣದ ಜ್ಞಾನಕ್ಕೆ ಅನುಕೂಲಕರವಾಗಿದ್ದು, ಸಾವಿರಾರು ಮಂದಿಗೆ ಉದ್ಯೋಗ ನೀಡುತ್ತಿದೆ. ಇಂತಹ ವ್ಯವಸ್ಥೆ ದುರುದ್ದೇಶಗಳಿಗೆ ಬಳಕೆಯಾಗದಂತೆ ಜಾಗೃತರಾಗುವಂತೆ ಕಿವಿಮಾತು ಹೇಳಿದರು.
ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸಂದೇಶ ಶೆಟ್ಟಿ ಪೊಡುಂಬ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ, ಸಾಮಾಜಿಕ ಜಾಲತಾಣಗಳ ಕುರಿತಂತೆ ವಿದ್ಯಾರ್ಥಿಗಳು ಎಚ್ಚರವಹಿಸಬೇಕು, ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಸೌಮ್ಯಾ ಎಚ್.ಕೆ.ಅವರು ಮಾತನಾಡಿ,ಆಧುನಿಕ ಶಿಕ್ಷಣಕ್ಕೆ ಸಾಮಾಜಿಕ ಜಾಲತಾಣ ಪೂರಕವಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಕೊಳ್ಳಬೇಕು, ಇದರ ಬಳಕೆಯಲ್ಲಿ ದುಡುಕಿನ ವರ್ತನೆ ಸರಿಯಲ್ಲ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮಾಂಬಾಡಿ, ಬಂಟ್ವಾಳ ತಾ.ಪಂ.ನ ನಿಕಟಪೂರ್ವ ಸದಸ್ಯ ಪ್ರಭಾಕರ ಪ್ರಭು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯ ಬಹುಮಾನಗಳನ್ನು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ವಿತರಿಸಿದರು.
ಉಪನ್ಯಾಸಕ ವಿನಯ್ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ ಪ್ರಸ್ತಾವಿಸಿದರು. ಗ್ರಂಥಪಾಲಕ ಡಾ. ಶ್ರೀನಿವಾಸ್ ವಂದಿಸಿದರು. ಪತ್ರಕರ್ತ ರತ್ನದೇವ್ ಬಹುಮಾನಿತರ ಪಟ್ಟಿ ವಾಚಿಸಿದರು. ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು.

