Saturday, February 8, 2025

ಸಿದ್ದಕಟ್ಟೆ: ಆರತಕ್ಷತೆಯಲ್ಲಿ ವಿಶಿಷ್ಠತೆ ನಿತ್ಯರಮ್ಯ ಪಕ್ಷಿಲೋಕ….ಪುಸ್ತಕ ಬಿಡುಗಡೆ, ಸಸಿ ವಿತರಣೆ

ಬಂಟ್ವಾಳ: ಮದುವೆಯ ಆರತಕ್ಷತೆಯ ಸಮಾರಂಭ ಅಂದರೆ ಆಡಂಬರ, ಅದ್ದೂರಿತನ ಇರುತ್ತದೆ. ಆದರೆ ಇಲ್ಲೊಬ್ಬ ಯುವಕ ತಮ್ಮ ವಿವಾಹದ ಆರತಕ್ಷತೆ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಪುಸ್ತಕ ಬಿಡುಗಡೆಗೊಳಿಸಿ ಬಂದಂತಹ ಅತಿಥಿಗಳಿಗೆ ಪುಸ್ತಕ, ಸಸಿ ವಿತರಿಸಿ ಮಾದರಿಯಾಗಿದ್ದಾರೆ.
ಈಗಾಗಲೇ ಪಕ್ಷಿಸಂಕುಲವ ಉಳಿಸಿ ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರದ ಮೂಲಕ ಜಿಲ್ಲೆಯಲ್ಲಿ ಪರಿಚಿತರಾಗಿರುವ ಎಲಿಯ ನಡುಗೋಡು ಗ್ರಾಮದ ಬದ್ಯಾರು ನಿವಾಸಿ, ಪಕ್ಷಿ ಪ್ರೇಮಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನಿಲಯದ ಮೇಲ್ವಿಚಾರಕರಾಗಿರುವ ನಿತ್ಯಾನಂದ ಶೆಟ್ಟಿ ಬದ್ಯಾರು ಮತ್ತು ಸುಳ್ಯ ಹೊನ್ನಡಿ ನಿವಾಸಿ ರಮ್ಯಾ ಅವರ ವಿವಾಹದ ಸಂಪ್ರದಾಯಗಳು ಬೆಳಗ್ಗೆ ಪೂಂಜ ದೇವಸ್ಥಾನದಲ್ಲಿ ಜರಗಿತು. ಬಳಿಕ ನಡೆದ ಆರತಕ್ಷತೆ ಸಮಾರಂಭ ಪರಿಸರ ಸಂರಕ್ಷಣೆಯ ಕಾಳಜಿಯ ಸಂದೇಶ ಸಾರುವುದರೊಂದಿಗೆ ಮಾದರಿಯಾಯಿತು.
ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯಲ್ಲಿ ರವಿವಾರ ನಡೆದ ಆ ಆರತಕ್ಷತೆ ಕಾರ್ಯಕ್ರಮವೇ ವಿಶಿಷ್ಠವಾಗಿತ್ತು. ಸಭಾಂಗಣದಲ್ಲಿ ಗಡಚಿಕ್ಕುವ ಸಂಗೀತವಿರಲಿಲ್ಲ, ಬ್ಯಾಂಡ್ ವಾದ್ಯವಿರಲಿಲ್ಲ. ಬದಲಾಗಿ ಹಕ್ಕಿಗಳ ಚಿಲಿಪಿಲಿ ನಾದ ಪಕ್ಷಿಗಳ ಲೋಕಕ್ಕೆ ಕೊಂಡೊಯ್ಯುವಂತಿತ್ತು. ಸಭಾಂಗಣದ ಸುತ್ತ ಬಾಳೆಗಿಡಗಳು, ತೆಂಗಿನ ಗಿಡಗಳು, ಹಕ್ಕಿಗಳ ಗೂಡುಗಳಿಂದ ಅಲಂಕರಿಸಲ್ಪಟ್ಟಿತ್ತು.
ಬಳಿಕ ನಡೆದ ಸರಳ ಕಾರ್ಯಕ್ರಮದಲ್ಲಿ ನಿತ್ಯಾನಂದ ಅವರದೇ ಪಕ್ಷಿ ಸಂರಕ್ಷಣೆಯ ಲೇಖನ, ಕವಿತೆಗಳ ಕೃತಿ ನಿತ್ಯ ರಮ್ಯ ಪಕ್ಷಿಲೋಕ ಪುಸ್ತಕದ ಬಿಡುಗಡೆಗೊಂಡಿತು.
ಪುಸ್ತಕಕ್ಕೆ ಬೆನ್ನುಡಿ ಬರೆದ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ಅವರು ಮಾತನಾಡಿ, ಸಂಪಾದನೆಯೊಂದೇ ಜೀವನ ಧ್ಯೇಯ ಎಂದು ಯುವಜನತೆ ಸಾಗುತ್ತಿರುವ ಕಾಲಘಟ್ಟದಲ್ಲಿ ಪ್ರಕೃತಿಯ ಬಗ್ಗೆ ಅಪಾರ ಕಾಳಜಿ ಹೊಂದಿ ನಿರಂತರವಾಗಿ ಪಕ್ಷಿ ಸಂರಕ್ಷಣೆಗಾಗಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮಾದರಿಯಾಗಿದ್ದಾರೆ. ಉತ್ತಮ ಕಾರ್ಯಕ್ಕೆ ಟೀಕೆ ಟಿಪ್ಪಣಿಗಳು ಸಹಜವೆಂಬಂತೆ ಪರಿಗಣಿಸಿ ಮುಂದುವರೆಯಲಿ, ಎಲ್ಲರ ಸಹಕಾರ ದೊರಕಲಿ ಎಂದು ಶುಭ ಹಾರೈಸಿದರು.
ಆಗಮಿಸಿದ ಪ್ರತೀ ಅತಿಥಿಗಳಿಗೆ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು. ಚೇರಿ, ಪಪ್ಪಾಯ, ಬಾಳೆ ಮುಂತಾದ ಸಸಿಗಳು ಇದ್ದವು. ಸುಮಾರು ೨೦೦ಕ್ಕೂ ಅಧಿಕ ಸಸಿಗಳನ್ನು ಸಮಾರಂಭದಲ್ಲಿ ವಿತರಿಸಲಾಯಿತು.
ಮದುವೆ ಆಮಂತ್ರಣ ಪತ್ರಿಕೆಯಲ್ಲಿತ್ತು: ಪಕ್ಷಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ವಿನ್ಯಾಸದ ಆಮಂತ್ರಣ ಪತ್ರಿಕೆ ಪ್ರಕಟಣೆ ಮಾಡಿರುವುದನ್ನು ನೋಡಿದ್ದೇವೆ ಹಾಗೂ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಹೆಸರು ಜತೆಗೆ ವಿಳಾಸ, ಪರಿಚಯಗಳು ಇರುವುದು ಕಾಣಬಹುದು. ಆದರೆ ನಿತ್ಯಾನಂದ ಅವರ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಕೃತಿಗೆ ಶರಣಾಗುವ… ಇಲ್ಲದಿದ್ದರೆ ಪ್ರಕೃತಿ ನಮ್ಮನ್ನು ಶರಣಾಗಿಸುತ್ತದೆ ಮತ್ತು ಪಕ್ಷಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಸಾಲುಗಳಿದ್ದವು. ತಮ್ಮ ಓಮ್ನಿ ವಾಹನದಲ್ಲೂ ಇದೇ ರೀತಿಯ ಬರಹಗಳನ್ನು ಅಳವಡಿಸಿದ್ದಾರೆ.

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ನರ್ಸಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಕಡ್ಡಾಯಗೊಳಿಸಿ : ಸಂಸದ ಕ್ಯಾ. ಚೌಟ ಆಗ್ರಹ

ನವದೆಹಲಿ: ಮಂಗಳೂರಿನ ವೆನ್ಲಾಕ್ ಸೇರಿ ದೇಶದೆಲ್ಲೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎದುರಾಗಿರುವ ನರ್ಸ್ ಗಳ ಕೊರತೆ ನೀಗಿಸಲು ಎಂಬಿಬಿಎಸ್ ಮಾದರಿ ನರ್ಸ್ಗಳಿಗೂ ಇಂಟರ್ನ್ ಶಿಪ್ ಕಡ್ಡಾಯಗೊಳಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕಾವಳಮೂಡೂರು : ತೆಂಗಿನ ಗಿಡ ವಿತರಣಾ ಕಾರ್ಯಕ್ರಮ

ಬಂಟ್ವಾಳ : ಕಾವಳಮೂಡೂರು ಗ್ರಾಮ ಪಂಚಾಯತಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಕೃಷಿ ವಿಜ್ಞಾನ ಕೇಂದ್ರ ಎಕ್ಕೂರು ಮಂಗಳೂರು, ಸಿ. ಪಿ. ಸಿ. ಆರ್. ಐ. ಕಾಸರಗೋಡು, ಡೇ- ಎನ್ ಆರ್...