ಉಜಿರೆ: ಶುಚಿ-ರುಚಿಯಾದ ಪಾಯಸ, ಹಲಸಿನ ಹಣ್ಣಿನ ಮಂಚೂರಿ, ಬಟಾಟೆಚಿಪ್ಸ್, ರಾಗಿ ಮುದ್ದೆ, ಗೋಧಿ ಹಿಟ್ಟಿನ ಲಾಡು- ಇದುಯಾವುದೇ ಪಂಚತಾರಾ ಹೋಟೆಲಿನ ಮೆನು ಅಲ್ಲ!
ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ.ಆಂಗ್ಲಮಾಧ್ಯಮ ಶಾಲೆಯಲ್ಲಿ ಏಪ್ರಿಲ್ ಒಂದರಿಂದ ಮೂರನೆ ತಾರೀಕಿನ ವರೆಗೆ ಮೂರು ದಿನಗಳಲ್ಲಿ ಎಂಟು ಮತ್ತುಒಂಬತ್ತನೆತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಬೇಸಿಗೆ ಶಿಬಿರದಲ್ಲಿ ಶಾಲಾ ವಿದ್ಯಾರ್ಥಿಗಳು ತಯಾರಿಸಿದ ಐಟಂಗಳು.

ತೆಂಗಿನಗರಿ (ತುಳು: ಮಡಲು) ಹೆಣೆಯುವುದು, ಹಳೆಜೀನ್ಸ್ ಬಳಸಿ ಆಕರ್ಷಕ ಕೈ ಚೀಲ ತಯಾರಿ, ಬಟ್ಟೆಯನ್ನು ಬಳಸಿ ಅಲಂಕಾರಿಕ ಹೂಗಳ ತಯಾರಿ, ತೆಂಗಿನಗೆರಟೆ ಬಳಸಿ ಕಲಾತ್ಮಕ ವಸ್ತುಗಳ ತಯಾರಿ, ಬಣ್ಣದ ಮರಗಳನ್ನು ರೂಪಿಸುವುದು, ಬಳಸಿದ ಹಳೆ ತಂತಿಗಳನ್ನು ಬಳಸಿ ಚೀಲ ತಯಾರಿ-ಇತ್ಯಾದಿ ಕಲೆಯನ್ನು ವಿದ್ಯಾರ್ಥಿಗಳು ಮೂರು ದಿನಗಳ ಶಿಬಿರದಲ್ಲಿ ಕರಗತ ಮಾಡಿಕೊಂಡರು. ನೋಡಿ ತಿಳಿದರು, ಮಾಡಿಕಲಿತರು!
ಶಾಲಾ ಮುಖ್ಯ ಶಿಕ್ಷಕಿ ಪರಿಮಳ, ಎಂ. ವಿ. ಹಾಗೂ ಇತರ ಶಿಕ್ಷಕರು, ಶಿಕ್ಷಕಿಯರು ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದರು.
ಅಯ್ಯಯ್ಯ ಎಂಚ ಪೊರ್ಲಾಂಡ್ ಎಂದು ಪ್ರೇಕ್ಷಕರೆಲ್ಲ ಅಚ್ಚರಿಪಟ್ಟರು.