ಕಲ್ಲಡ್ಕ: ಅಬ್ದುಲ್ ಕಲಾಂರವರಲ್ಲಿ ಸಂತಸದ ಕ್ಷಣ ಯಾವುದು ಎಂದು ಕೇಳಿದಾಗ ಅಂಗವಿಕಲರ ಶಾಲೆಗೆ ಭೇಟಿನೀಡಿ ಅವರಿಗೆ ಹಗುರವಾದ ಕೃತಕ ಕಾಲುಗಳನ್ನು ನೀಡಿದುದು ತುಂಬಾ ಸಂತೋಷದಾಯಕವಾಗಿತ್ತು ಎಂದು ಕಲಾಂ ಹೇಳಿದರು. ಹಾಗೇಯೇ ನನಗೆ ಸಂತಸದ ಕ್ಷಣ ಯಾವುದೆಂದರೆ ಒಂದು- ತನ್ನ ಶಿಷ್ಯೆ ಮುಖ್ಯೋಪಾದ್ಯಾಯಿನಿ ಆಗಿದ್ದ ಶಾಲೆಗೆ ಭೇಟಿ ನೀಡಿದ್ದು, ಇನ್ನೊಂದು – ಈ ಶಾಲೆಯಲ್ಲಿ ಅಂಕುರ – ಬೇಸಿಗೆ ಶಿಬಿರದ ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅತ್ಯಂತ ಸಂತಸದ ಕ್ಷಣವಾಗಿದೆ. ಎಂದು ಕಾರ್ಯಕ್ರಮದ ಉದ್ಘಾಟಕರಾದ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಸಂಕಪ್ಪ ಶೆಟ್ಟಿ ಹೇಳಿದರು.
ಮಾ.21ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರಲ್ಲಿ ಅಂಕುರ – ವಾರ್ಷಿಕ ಬೇಸಿಗೆ ಶಿಬಿರವನ್ನು ಅಂಕುರ ಎಂಬ ಹೆಸರೇ ಹೇಳುವಂತೆ ಮೊಳಕೆ ಬಂದ ಕಾಳುಗಳಿದ್ದ ದುಂಡನೆಯ ಪಾತ್ರೆಯ ಮುಚ್ಚಳವನ್ನು ತೆರೆಯುವುದರ ಮೂಲಕ ಉದ್ಘಾಟಿಸಲಾಯಿತು.


ಉದ್ಘಾಟನೆಯ ಮಾತನ್ನು ಮುಂದುವರಿಸುತ್ತಾ, ಈ ವಿದ್ಯಾಸಂಸ್ಥೆ ವಿಶ್ವದಲ್ಲಿಯೇ ಶ್ರೇಷ್ಠವಾದ ವಿದ್ಯಾಸಂಸ್ಥೆಯಾಗಿದೆ. ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಹೊಂದಿರುವುದು ಆಶ್ಚರ್‍ಯ ತಂದಿದೆ. ಇದಕ್ಕೆ ಕಾರಣ ಇಲ್ಲಿ ದೊರೆಯುವ ನೈಜ ಶಿಕ್ಷಣ. ಇತರ ಶಾಲೆಯಲ್ಲಿ ಸಿಗುವಂತಹುದು ಕೇವಲ ಔಪಚಾರಿಕ ಶಿಕ್ಷಣವಾಗಿದೆ. ನಿಮ್ಮ ಜೀವನ ಉನ್ನತಕ್ಕೆ ಒಯ್ಯುವ ಶಿಕ್ಷಣ ಇಲ್ಲಿ ದೊರೆಯುತ್ತದೆ. ಉನ್ನತ ಸ್ಥಾನಮಾನ ಅಂದರೆ ಅವನಲ್ಲಿರುವ ಸುಪ್ತ ಪ್ರತಿಭೆ ಹೊರಹೊಮ್ಮುವುದು. ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಇವರ ಔದಾರ್‍ಯ, ಸಂಸ್ಕಾರ , ಒಳ್ಳೆಯ ಸದ್ಗುಣ ಅವರನ್ನು ಉನ್ನತ ಸ್ಥಾನಕ್ಕೆ ತಲುಪಿಸಿದೆ. ಅದಕ್ಕೆ ಇಂತಹ ಬೇಸಿಗೆ ಶಿಬಿರ ಪ್ರೇರಣೆಯಾಗಲಿ, ಒಳ್ಳೆಯ ವಿದ್ಯಾರ್ಥಿಗಳಾಗಿ, ಶಾಲೆಗೆ, ದೇಶಕ್ಕೆ ಕೀರ್ತಿ ತನ್ನಿ ಎಂದು ಹಾರೈಸಿದರು.
ನೀರು ಮತ್ತು ಗಾಳಿಯ ಸ್ಪರ್ಶವಾಗಿ ಮೊಳಕೆಯೊಡೆದ ಬೀಜಕ್ಕೆ ಸೂರ್‍ಯರಶ್ಮಿ ಬಿದ್ದಾಗ ಒಂದೊಳ್ಳೆ ಗಿಡವಾಗಿ ಹೇಗೆ ಪರಿಸರದಲ್ಲಿ ಬೆಳೆಯುತ್ತದೋ ಅದೇ ರೀತಿ ಮಕ್ಕಳಲ್ಲಿರುವ ಸುಪ್ತಪ್ರತಿಭೆ ನಮ್ಮ ಅಂಕುರ ಬೇಸಿಗೆ ಶಿಬಿರದ ಮೂಲಕ ಅನಾವರಣಗೊಳ್ಳಬೇಕೆಂಬುದು ಈ ಬೇಸಿಗೆ ಶಿಬಿರದ ಉದ್ದೇಶ. ಇದು ಸರಿಯಾಗಿ ಸಾಕಾರಗೊಳ್ಳಲಿ ಎಂಬುದು ನನ್ನ ಆಶಯ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಶ್ರೀಮಾನ್ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ತಾಂಬೂಲ ನೀಡಿ ಸಾಂಕೇತಿಕವಾಗಿ ಸ್ವಾಗತಿಸಲಾಯಿತು.೭ನೇ ತರಗತಿಯ ವಿದ್ಯಾರ್ಥಿಯಾದ ಕಾರ್ತಿಕ್ ಪ್ರೇರಣಾಗೀತೆ ಹಾಡಿದನು. ಒಟ್ಟು ಹಿರಿಯ ಮತ್ತು ಕಿರಿಯ ವಿಭಾಗದಿಂದ ೨೪ ತಂಡಗಳಾಗಿ ರಚನೆಮಾಡಿ ಆ ತಂಡಗಳಿಗೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರ ಹೆಸರನ್ನು ನೀಡಿದ್ದು ಆ ಗುಂಪುಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಶಿಕ್ಷಕರಾದ ರೇಷ್ಮಾ ನಿರೂಪಿಸಿ, ರೇಣುಕಾ ಸ್ವಾಗತಿಸಿ ಮತ್ತು ಶೈನಿ ವಂದಿಸಿದರು.