ಬಂಟ್ವಾಳ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಸದಸ್ಯರ ಆರೋಗ್ಯ ತಪಾಸಣಾ ಶಿಬಿರವು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.
ಇದೇ ವೇಳೆ ಸಂಘಕ್ಕೆ ಖ್ಯಾತ ವೈದ್ಯರಾದ ಡಾ.ಪದ್ಮನಾಭ ಕಾಮತ್ ಅವರು ಕೊಡುಗೆಯಾಗಿ ನೀಡಿದ ಇಸಿಜಿ ಯಂತ್ರವನ್ನು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ ಉದ್ಘಾಟಿಸಿದರು.


ಅತ್ಯಂತ ಹೆಚ್ಚು ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರು, ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು, ಈ ನಿಟ್ಟಿನಲ್ಲಿ ಜಿಲ್ಲಾ ಸಂಘವು ಮೀಡಿಯಾ ಹೆಲ್ತ್ ಸೆಂಟರ್ ಅನ್ನು ಆರಂಭಿಸಿ, ಕಾರ್ಯನಿರ್ವಹಿಸುತ್ತಿದೆ ಎಂದರು.
ಬಳಿಕ ಪತ್ರಕರ್ತರ ರಕ್ತದೊತ್ತಡ, ಮಧುಮೇಹ ಹಾಗೂ ಇಸಿಜಿ ಪರೀಕ್ಷೆ ನಡೆಸಲಾಯಿತು. ಲ್ಯಾಬ್ ಟೆಕ್ನೀಶಿಯನ್ ಭೂಷಣ್, ಬಂಟ್ವಾಳ ನಗರ ಆರೋಗ್ಯ ಕೇಂದ್ರದ ಆರೋಗ್ಯ ಶುಶ್ರೂಷಣಾಧಿಕಾರಿ ರಜನಿ ಹಾಗೂ ಸುರಕ್ಷಾಧಿಕಾರಿ ನಮಿತ ತಪಾಸಣೆ ನಡೆಸಿಕೊಟ್ಟರು. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ, ಉಪಾಧ್ಯಕ್ಷ ಯಾದವ ಕುಲಾಲ್, ಕೋಶಾಧಿಕಾರಿ ವೆಂಕಟೇಶ ಬಂಟ್ವಾಳ, ಪ್ರೆಸ್ ಕ್ಲಬ್ ಜತೆಕಾರ್ಯದರ್ಶಿ ಚಂದ್ರಶೇಖರ ಕಲ್ಮಲೆ ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಮೌನೇಶ ವಿಶ್ವಕರ್ಮ ಸ್ವಾಗತಿಸಿ, ವಂದಿಸಿದರು.

