ಬಂಟ್ವಾಳ: ವ್ಯಕ್ತಿಯು ಆರೋಗ್ಯವಂತನಾಗಬೇಕಾದರೆ ಆತನ ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಅತ್ಯಂತ ಪ್ರಮುಖವಾಗಿದೆ. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಧನಾತ್ಮಕ ಚಿಂತನೆಯೊಂದಿಗೆ ಸದಾ ಕ್ರಿಯಾಶೀಲನಾಗಿ ಇರಬೇಕಾದುದು ಅತ್ಯಂತ ಅವಶ್ಯವೆಂದು ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವಿಶ್ವೇಶ್ವರ ಯು.ಕೆ. ತಿಳಿಸಿದರು.
ಅವರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿ ಜೇಸಿಐ ಜೋಡುಮಾರ್ಗ ನೇತ್ರಾವತಿ ಹಾಗೂ ಶಾಲಾ ಆರೋಗ್ಯ ಕೂಟದ ಸಹಯೋಗದಲ್ಲಿ ನಡೆದ ಮಾನಸಿಕ ಆರೋಗ್ಯ ಮಾಹಿತಿ ಶಿಬಿರದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಕಮಲಾಕ್ಷ ಕಲ್ಲಡ್ಕ ವಹಿಸಿದ್ದರು. ವೇದಿಕೆಯಲ್ಲಿ ಎಸ್‌ಡಿಎಂಸಿ ಸದಸ್ಯರಾದ ಪ್ರತಿಭಾ ಸುಬ್ರಹ್ಮಣ್ಯ ಭಟ್, ಕಿರಿಯ ಆರೋಗ್ಯ ಸಹಾಯಕ ವೀರೇಶ್, ಶಿಕ್ಷಕ ಹಾಗು ಜೇಸಿಐ ಜೋಡುಮಾರ್ಗ ನೇತ್ರಾವತಿಯ ಉಪಾಧ್ಯಕ್ಷ ಜೇಸಿ ಹರಿಪ್ರಸಾದ್ ಕುಲಾಲ್ ಉಪಸ್ಥಿತರಿದ್ದರು. ಆರೋಗ್ಯ ಕೂಟದ ಉಪಾಧ್ಯಕ್ಷ ಚಿನ್ನಪ್ಪ ಜಾಲ್ಸೂರು ಸ್ವಾಗತಿಸಿ, ಅಧ್ಯಕ್ಷೆ ಭಾರತಿ ಹರೀಶ್ ವಂದಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ 9ನೇ ತರಗತಿಯ ಪ್ರತಿಕ್ಷಾ ಪ್ರಥಮ, 10ನೇ ತರಗತಿಯ ಜಯಗೋವಿಂದ ದ್ವಿತೀಯ ಬಹುಮಾನ ಹಾಗೂ 9ನೇ ತರಗತಿಯ ದೀಕ್ಷಿತಾ ತೃತೀಯ ಬಹುಮಾನ ಗಳಿಸಿದರು.

