ಬಂಟ್ವಾಳ: ದೇವಸ್ಥಾನಕ್ಕೆ ನೀಡಬೇಕಾಗಿದ್ದ ಹಣವನ್ನು ಬಾಕಿಯಿರಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಡೆಸಿದ ಹೋರಾಟಕ್ಕೆ ಮಣಿದು ಹಣ ನೀಡಿದ ಎ.ಎಂ.ಆರ್.ಸಂಸ್ಥೆ.ಗ್ರಾಮಸ್ಥರ ಪರವಾಗಿ ನಿಂತು ದೇವಸ್ಥಾನಕ್ಕೆ ಸಂದಾಯವಾಗಬೇಕಿದ್ದ ಹಣ ಸಿಗುವಂತೆ ಮಾಡಲು ನೇತ್ರತ್ವ ವಹಿಸಿದ ಗ್ರಾಮಪಂಚಾಯತ್ ಅದ್ಯಕ್ಷ ಸಂತೋಷ್ ಕುಮಾರ್ ಇರಂತಬೆಟ್ಟು ಅವರಿಗೆ ಅಭಿನಂದನೆ ಸಲ್ಲಿಸಿದ ಘಟನೆ ನರಿಕೊಂಬು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರ
ಸುಮಾರು 3 ವರ್ಷಗಳಿಂದ ಶಂಭೂರು A.M.R. DAM ನವರಿಂದ ವರ್ಷಕ್ಕೆ ರೂ. 50,000/- ದಂತೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವಕ್ಕೆ ನೀಡಬೇಕಾದ ಸುಮಾರು ರೂ. 1,50,000/- ವನ್ನು ನೀಡದೆ ಬಾಕಿಯಿರಿಸಿದ್ದು. ಇದನ್ನು ದೇವಸ್ಥಾನದ ಪರವಾಗಿ ದೇವಸ್ಥಾನದ ಭಕ್ತರು ಹಲವು ಬಾರಿ ಸಂಸ್ಥೆಯ ವ್ಯವಸ್ಥಾಪಕರಲ್ಲಿ ನೀಡುವಂತೆ ಮನವಿ ಮಾಡಿದರೂ ಅದಕ್ಕೆ ಯಾವುದೇ ರೀತಿಯಾದ ಸ್ಪಂದನೆ ದೊರೆಯದ ಕಾರಣ ದೇವಸ್ಥಾನದ ಭಕ್ತರೆಲ್ಲರೂ ಒಟ್ಟು ಸೇರಿ ಫೆ. 19ರ ಸೋಮವಾರದಂದು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ದ್ವಾರದ ಬಳಿ ರಸ್ತೆಯನ್ನು ಬಂದ್ ಮಾಡಿ ಡ್ಯಾಮ್ ಗೆ ಹೋಗುವ ವಾಹನ ಹಾಗೂ ಸಿಬ್ಬಂದಿಗಳನ್ನು ತಡೆದು ದೇವಸ್ಥಾನಕ್ಕೆ ನೀಡಲು ಬಾಕಿಯಿರುವ ರೂ. 1,50,000/- ವನ್ನು ತಕ್ಷಣವೇ ನೀಡುವಂತೆ ಆಗ್ರಹಿಸಲಾಗಿತ್ತು.ಜೊತೆಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ದೇವಸ್ಥಾನದ ರಸ್ತೆಯ ರಿಪೇರಿ ಕಾರ್ಯ ಮಾಡಬೇಕು ಎಂದು ಒತ್ತಾಯ ಮಾಡಲಾಗಿತ್ತು. ಈ ಹೋರಾಟಕ್ಕೆ ಮನಿದ ಸಂಸ್ಥೆಯು ದೇವಸ್ಥಾನಕ್ಕೆ ಸಂದಾಯ ಮಾಡಲು ಬಾಕಿಯಿದ್ದ ರೂ. 1,50,000/- ದ ಜೊತೆಗೆ ಹೆಚ್ಚುವರಿಯಾಗಿ ರೂ. 14,000/- ವನ್ನು ನೀಡಿದ್ದಾರೆ. ಒಟ್ಟು 1,64,000/- ವನ್ನು ಪ್ರತಿಭಟನೆ ನಡೆಸಿದ ಮರುದಿನವೇ ಅಂದರೆ ಕೇವಲ ಒಂದೇ ದಿನದಲ್ಲಿ ದೇವಸ್ಥಾನಕ್ಕೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಬಗ್ಗೆ ಮುತುವರ್ಜಿಯಿಂದ ಕೆಲಸ ಮಾಡಿ ದೇವಸ್ಥಾನಕ್ಕೆ ಹಣ ಸಿಗುವಂತೆ ಮಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ಸಾರೆ.
ಇದರ ಜೊತೆಗೆ ರಸ್ತೆ ರಿಪೇರಿ ಮಾಡಿ ಕೊಡುವಂತೆ ನರಿಕೊಂಬು ಗ್ರಾಮಪಂಚಾಯತ್ ನಲ್ಲಿ ನಡೆದ ಸಭೆಯಲ್ಲಿ ಒಂದು ನಿರ್ಣಯ ಮಾಡಲಾಗಿದ್ದು, ಸಂಸ್ಥೆಯ ಎಂ.ಡಿ.ಗೆ ಪತ್ರ ಬರೆಯಲಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷರು ತಿಳಿಸಿದ್ದಾರೆ .
ರಸ್ತೆಯ ರಿಪೇರಿಯನ್ನು ಕೂಡ ಶೀಘ್ರವಾಗಿ ಕಂಪೆನಿಯ ಮುಖಾಂತರ ವೇ ಮಾಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಂಪೆನಿಯ ಘನಗಾತ್ರದ ವಾಹನಗಳು ಈ ರಸ್ತೆಯಲ್ಲಿ ಸಂಚಾರ ಮಾಡಿದ ಪರಿಣಾಮವೇ ರಸ್ತೆ ಹಾಳಾಗಿದ್ದು,ಕಂಪನಿ ಕಣ್ಣು ಮುಚ್ಚಿ ಕುಳಿತರೆ ಮತ್ತೆ ಉಗ್ರ ಹೋರಾಟದ ಹಾದಿ ಹಿಡಿಯುತ್ತೇವೆ ಎಂಬ ಎಚ್ಚರಿಕೆ ಯನ್ನು ನೀಡಿದ್ದಾರೆ.