Wednesday, February 12, 2025

ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸಾನಿಧ್ಯ ಕ್ಷೇತ್ರ

ಭಾರತ-ಸನಾತನ ಹಿಂದು ಧರ್ಮದ ನೆಲೆವೀಡು.ಧರ್ಮ ಪ್ರಾಣ ಭಾರತದ ಆತ್ಮ ಆಧ್ಯಾತ್ಮ, ಮಾತೃಪ್ರಧಾನ ಹಿಂದು ಸಂಸ್ಕೃತಿ ಜಗತ್ತಿನ ಆಧ್ಯಾತ್ಮ ಮಂದಿರ-ಧರ್ಮ ಸಾಮ್ರಾಜ್ಯ ಭಾರತ.ಸಾವಿರಾರು ದೇವ ಮಂದಿರಗಳು-ತೀರ್ಥಕ್ಷೇತ್ರಗಳು, ಪುಣ್ಯ ನದಿಗಳು-ಶಕ್ತಿ ಪೀಠಗಳು-ಮುಕ್ತಿ ಧಾಮಗಳು ಅವುಗಳ ಮೇಲಿನ ನಂಬಿಕೆ, ಶ್ರದ್ಧೆ, ಭಾವನೆ, ವ್ರತಾಚರಣೆಗಳು, ಅನುಷ್ಠಾನಗಳು ಹಿಂದು ಸಮಾಜದ ವೈಶಿಷ್ಯತೆಗಳು ಮತ್ತು ಆಧಾರ ಸ್ತಂಭಗಳು.
ಭಗವಂತ ಅವತಾರ ಎತ್ತುವುದಕ್ಕಾಗಿಯೇ ಸೃಷ್ಠಿಯಾದ ದೇವಭೂಮಿ ಭಾರತದಲ್ಲಿ ಭಾರ್ಗವ ಕ್ಷೇತ್ರ-ದೇವರನಾಡು ಎಂಬುದಾಗಿ ಕರೆಸಲ್ಪಟ್ಟ ಪ್ರದೇಶವೇ ಕೇರಳ.ಇಲ್ಲಿ ಪರಶುರಾಮರಿಂದ ನಿರ್ಮಿತ 18 ಶಾಸ್ತಾರ ಕ್ಷೇತ್ರಗಳಲ್ಲಿ ಶಬರಿಮಲೆ ಒಂದು. ಇಂದು ಕೇರಳದೆಲ್ಲೆಡೆ, ಅಷ್ಟೇ ಏಕೆ ಭಾರತದಾದ್ಯಂತ ಮಾತ್ರವಲ್ಲ ವಿದೇಶಗಳಿಂದಲ್ಲೂ ಕೋಟ್ಯಂತರ ಭಕ್ತರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ ಒಂದು ಪವಿತ್ರ ಕ್ಷೇತ್ರವೇ ಶ್ರೀ ಅಯ್ಯಪ್ಪ ಸ್ವಾಮಿಯ ಸನ್ನಿಧಾನ ಶಬರಿಮಲೆ.
ಇದು ಪೌರಾಣಿಕ-ಐತಿಹಾಸಿಕ ಹಿನ್ನೆಲೆಯುಳ್ಳ ಬಹು ಪುರಾತನ ದೇವಾಲಯ.ದೇವಸ್ಥಾನಗಳ ಸ್ಥಳ ಪುರಾಣ, ದೇವಮಹಿಮೆ, ಕಟ್ಟುಪಾಡುಗಳು, ಸಂಪ್ರದಾಯಗಳು, ವಿಧಿವಿಧಾನಗಳು ಆಯಾ ಕ್ಷೇತ್ರಗಳ ಸಾನ್ನಿಧ್ಯವನ್ನು ಹೆಚ್ಚಿಸುತ್ತವೆ.
ಮೋಹಿನಿ ರೂಪದ ಹರಿಯೊಂದಿಗೆ ಹರನ ಸಮಾಗಮದಿಂದ ಜನಿಸಿದ ಅಯೋನಿಜ ನಾದ ಬಾಲಕನಿಗೆ ಹರಿಹರನೆಂದು ಹೆಸರಿಟ್ಟು ಕಾಡಿನಲ್ಲಿ ಬಿಟ್ಟು ಹೋಗಲ್ಪಟ್ಟ ಮಗು ಯುಗ ಯುಗಾಂತರಗಳ ಕಾಲ ಬೆಳವಣಿಗೆ ಹಾಗೂ ತೊಂದರೆಗೊಳಗಾಗದೆ ಬದುಕಿ ಉಳಿಯುವಂತಹದ್ದೇ ಭಗವಂತನ ಲೀಲೆ ಎಂಬುದಕ್ಕೆ ಸಾಕ್ಷಿ ಕಲಿಯುಗದಲ್ಲಿ ಬೇಟೆಗಾಗಿ ಹೋದ ಪಂದಳದ ರಾಜನಿಗೆ ಆ ಮಗು ಕಾಡಿನಲ್ಲಿ ದೊರೆಯುತ್ತದೆ. ಶಿವ ಯೋಗಿಯೊಬ್ಬರ ಆದೇಶದಂತೆ ಮಕ್ಕಳಿಲ್ಲದ ಆ ರಾಜ ಆ ಮಗುವನ್ನು ಸಾಕುತ್ತಾನೆ. ರಾಜ-ರಾಣಿಯರ ಲಾಲನೆ ಪಾಲನೆಯಲ್ಲಿ ಆ ಬಾಲಕ ಪ್ರವರ್ದಮಾನವಾಗಿ ಬೆಳೆಯುತ್ತಾನೆ.
ರಾಜ್ಯದಾಸೆಯಿಂದ ದುಷ್ಟಮಂತ್ರಿ ಮಗುವನ್ನು ಕೊಲ್ಲುವ ಪ್ರಯತ್ನ ಮಾಡುತ್ತಾನೆ. ಅಲ್ಲೂ ಶಿವಾನುಗ್ರಹದಿಂದ ಬದುಕಿ ಉಳಿಯುತ್ತಾನೆ. ಮಣಿಯನ್ನು ಧಾರಣೆ ಮಾಡಿಕೊಂಡು ಮಣಿಕಂಠನಾಗುತ್ತಾನೆ. ಮಂತ್ರಿಯ ಮೋಸದ ಬಲೆಗೆ ಬಿದ್ದು ಮಹಾರಾಣಿ ಮಣಿಕಂಠನನ್ನು ಕೊಲ್ಲುವ ಸಂಚಿಗೆ ಸಹಕರಿಸುತ್ತಾಳೆ. ಹೊಟ್ಟೆ ನೋವಿನ ನಾಟಕವಾಡುತ್ತಾಳೆ. ಹುಲಿಯ ಹಾಲಿನಲ್ಲಿ ಮಾತ್ರೆಯನ್ನು ಸೇವಿಸಿದರೆ ಉದರ ಬೇನೆ ಮಾಯವಾಗಬಹುದೆಂಬ ಮಾಂತ್ರಿಕ ವೈದ್ಯನ ಮಾತನ್ನು ಮಹಾರಾಜ ನಂಬುತ್ತಾನೆ. ಹುಲಿಯ ಹಾಲನ್ನು ತರುವವರು ಯಾರೂ ಇಲ್ಲದೆ ರಾಜ ಚಿಂತಾಕ್ರಾಂತನಾದಾಗ ಬಾಲಕ ಮಣಿಕಂಠ ತಂದೆಯ ಆಶೀರ್ವಾದ ಪಡೆದು ಹುಲಿಯನ್ನು ತರಲು ಕಾಡಿಗೆ ಹೋಗುತ್ತಾನೆ.
ಭಯಂಕರ ಕಾಡಿನಲ್ಲಿ ತನ್ನನ್ನು ಎದುರಿಸಿದ ಮಹಿಷಿಯೆಂಬ ರಕ್ಕಸಿಯನ್ನು ಸಂಹರಿಸುತ್ತಾನೆ. ಶಾಪಗ್ರಸ್ತಳಾಗಿ ರಾಕ್ಷಸಿಯಾಗಿ ಹುಟ್ಟಿದ ಮಹಿಷಿಯ ದೇಹದಿಂದ ಸುಂದರ ಕನ್ಯೆ ಎದ್ದು ಬರುತ್ತಾಳೆ.ತನ್ನನ್ನು ಮದುವೆಯಾಗುವಂತೆ ಮಣಿಕಂಠನಲ್ಲಿ ಬೇಡಿಕೊಳ್ಳುತ್ತಾಳೆ. ಆಗ ಮುಂದೆ ಶಬರಿಮಲೆಯಲ್ಲಿ ತಾನು ಒಂದು ಶರತ್ತಿನಂತೆ ಆಕೆಯನ್ನು ಮದುವೆಯಾಗುವ ಭರವಸೆ ಕೊಡುತ್ತಾನೆ. ಮಹಿಷಿ ಸಂಹಾರದಿಂದ ಸಂತಸಗೊಂಡ ದೇವತೆಗಳು ಹುಲಿಯ ರೂಪದಲ್ಲಿ ಪ್ರತ್ಯಕ್ಷರಾಗುತ್ತಾರೆ.ಹೆಣ್ಣುಹುಲಿಯೇರಿ ಮಣಿಕಂಠ ಅರಮನೆಗೆ ಬರುತ್ತಾನೆ. ಉಳಿದ ಹುಲಿಗಳು ಹಿಂಬಾಲಿಸುತ್ತವೆ. ಅರಮನೆಗೆ ಹತ್ತಿರ ಬಂದಾಗ ನೋಡಿದ ಪುರಜನರು ಅಯ್ಯಾ ಅಯ್ಯ ಅಯ್ಯ ಅಯ್ಯಪ್ಪಾ ಎಂದು ಹೆದರಿ ಬೊಬ್ಬಿಡುತ್ತಾರೆ, ಮಹಾರಾಣಿಯ ಉದರಬೇನೆ ಮಾಯಾವಾಗುತ್ತದೆ.ಮುಂದೆ ಮಣಿಕಂಠ, ಅಯ್ಯಪ್ಪನಾಗುತ್ತಾನೆ. ಮಂತ್ರಿ, ಮಹಾರಾಣಿಯವರ ಮೋಸವರಿತು ವೈರಾಗ್ಯ ತಾಳಿದ ಅಯ್ಯಪ್ಪ ತಂದೆಯ ಆಶೀರ್ವಾದ ಪಡೆದು ತಪಸ್ಸಿಗಾಗಿ ಕಾಡಿಗೆ ಹೋಗುತ್ತಾನೆ.
ಎರುಮೇಲಿಯಲ್ಲಿ ವಾಸವಾಗಿದ್ದ ಕಡಲ್ಗಳ್ಳ ವಾವರ, ಪಂದಳದ ಮಂತ್ರಿಯ ಸಹಾಯ ಪಡೆದು ರಾಜ್ಯಕ್ಕೆ ದಾಳಿಮಾಡಿ, ರಾಜನನ್ನು ಸೋಲಿಸಿ ಸೆರೆಯಲ್ಲಿಡುತ್ತಾನೆ. ಮಹಾರಾಣಿ ಮತ್ತು ಆಕೆಯ ಪುತ್ರ ತಪ್ಪಿಸಿಕೊಂಡು ಅಯ್ಯಪ್ಪನನ್ನು ಹುಡುಕುತ್ತಾ ಕಾಡುಮೇಡುಗಳಲ್ಲಿ ಅಲೆದಾಡುತ್ತಾರೆ.ಕೊನೆಗೆ ಅಯ್ಯಪ್ಪ ಧ್ಯಾನ ಮಗ್ನನಾಗಿ ಕುಳಿತಲ್ಲಿಗೆ ಬಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ. ಮನಕರಗಿದ ಅಯ್ಯಪ್ಪ ಸಾಕುತಾಯಿಯೊಂದಿಗೆ ಅರಮನೆಗೆ ಹಿಂತಿರುಗಿ ವಾವರನನ್ನು ಎದುರಿಸಿ ಸೋಲಿಸುತ್ತಾನೆ. ವಾವರ ಅಯ್ಯಪ್ಪನಿಗೆ ಶರಣಾಗುತ್ತಾನೆ. ತಂದೆಯನ್ನು ಸೆರೆಯಿಂದ ಬಿಡಿಸಿ ಸಂತೈಸಿ ಮತ್ತೆ ಕಾಡಿಗೆ ತೆರಳಲುದ್ಯುಕ್ತನಾಗುತ್ತಾನೆ. ಆಗ ಪಂದಳರಾಜನು ಶಬರಿಮಲೆಯಲ್ಲಿದ್ದ ತನ್ನ ಕುಲದೇವರಾದ ಶಾಸ್ತಾರನ ದೇವಸ್ಥಾನ, ಕರಿಮಲೆ ಕಾಡಿನಲ್ಲಿ ವಾಸವಾಗಿದ್ದ ದರೋಡೆ ಕೋರನಿಂದ ಧ್ವಂಸಗೊಂಡು ಅಜೀರ್ಣಾವಸ್ಥೆಯಲ್ಲಿದ್ದು ಅದರ ಜೀರ್ಣೋದ್ದಾರ ಕಾರ್‍ಯ ಆಗಬೇಕೆಂದು ಹೇಳಿ ದುಃಖಿಸುತ್ತಾನೆ.ಮಹಾರಾಜರನ್ನು ಸಂತೈಸಿದ ಅಯ್ಯಪ್ಪನು ವಾವರ ಮತ್ತಿತರ ಪರಿವಾರದವರೊಂದಿಗೆ ಮಾತುಕತೆ ನಡೆಸಿ ಶಬರಿಮಲೆಗೆ ಕಾಡು ದಾರಿಯಾಗಿ ಹೋಗುವ ನಿರ್ಧಾರ ಕೈಗೊಳ್ಳುತ್ತಾರೆ. ಕರಿಮಲೆಯಲ್ಲಿರುವ ದರೋಡೆಕೋರ ಉದಯನ್‌ನನ್ನು ಕೊಲ್ಲುವ ಮತ್ತು ಆ ಮೇಲೆ ಶಬರಿಮಲೆ ಶಾಸ್ತಾರಕ್ಷೇತ್ರದ ಜೀರ್ಣೋದ್ಧಾರದ ಕಾರ್‍ಯ ಹೀಗೆ ಎರಡೂ ನಡೆಯಬೇಕಾದುದರಿಂದ ಮತ್ತು ತಾವು ಕಾಡು ದಾರಿಯಾಗಿ ಹೋಗುವಾಗ ಆ ದರೋಡೆಕೋರನಿಗೆ ಯಾವುದೇ ಸುಳಿವು ದೊರೆಯದಂತೆ ಯೋಜನೆ ಹಾಕಿಕೊಳ್ಳುತ್ತಾರೆ.ಕುತ್ತಿಗೆಯಲ್ಲಿ ಶಾಸ್ತಾರನ ಮುದ್ರೆಯುಳ್ಳಾ ಮಾಲೆ ಧರಿಸಿ ಕಪ್ಪು ವಸ್ತ್ರವನ್ನುಟ್ಟು, ತಲೆಯಲ್ಲಿ ಇರುಮುಡಿ (ಎರಡು ಕಟ್ಟು) ಕಟ್ಟನ್ನು ಹೊತ್ತು (ಮುಂಭಾಗದಲ್ಲಿ ದೇವರ ನೈವೇಧ್ಯಕ್ಕೆ ಬೇಕಾದ ಸುವಸ್ತುಗಳು, ಹಿಂಭಾಗದಲ್ಲಿ ದಾರಿಯ ಖರ್ಚಿಗಾಗಿ) ಶಾಸ್ತಾರನ ನಾಮಸ್ಮರಣೆ ಮಾಡುತ್ತಾ ಸಾಗುತ್ತಾರೆ. ಕರಿಮಲೆ (ದಟ್ಟವಾದ ಅರಣ್ಯ)ಯಲ್ಲಿ ಎದುರಾದ ಕಾಡುಗಳ್ಳನನ್ನ ಸಂಹರಿಸಿ, ಪಂಪಾನದಿ ತೀರಕ್ಕೆ ಬರುತ್ತಾರೆ. ಅಷ್ಟು ಹೊತ್ತಿಗೆ ಪಂದಳದಿಂದ ನೇರದಾರಿಯಾಗಿ ರಾಜ ತನ್ನ ಪರಿವಾರದೊಂದಿಗೆ ಸೇರಿಕೊಳ್ಳುತ್ತಾರೆ.ಅಲ್ಲಿ ಶುಚಿರ್ಭೂತರಾಗಿ ಅಡುಗೆ ಮಾಡಿ ಭೂರಿಭೋಜನ ಮಾಡಿ ಮುಂದಕ್ಕೆ ಸಾಗುತ್ತಾರೆ.
ಶ್ರೀರಾಮಾಯಣ ಕಾಲದ ಶಬರಿಯ ಪೀಠಕ್ಕೆ ನಮಸ್ಕರಿಸಿ ಮುಂದಕ್ಕೆ ಸಾಗಿ ಒಂದು ವಿಶಾಲ ಆಲದ ಮರದಡಿಯಲ್ಲಿ ವಿಶ್ರಮೀಸಿಕೊಳ್ಳುತ್ತಾರೆ. ಇನ್ನು ತಮಗೆ ಶಸ್ತ್ರದ ಆವಶ್ಯಕತೆ ಇಲ್ಲದ ಕಾರಣ ತಮ್ಮಲ್ಲಿರುವ ಶಸ್ತ್ರಗಳೆಲ್ಲವನ್ನೂ ಆ ಮರದ ಬುಡದಲ್ಲಿಡುವಂತೆ ಅಯ್ಯಪ್ಪ ಸೂಚಿಸುತ್ತಾನೆ. ಸಂಹಾರ ಮೂರ್ತಿಯಾಗಿದ್ದ ಅಯ್ಯಪ್ಪ ಶಾಂತಮೂರ್ತಿಯಾಗುತ್ತಾನೆ. ಸೇರಿದ ಸಮಸ್ತ ಜನಸಮೂಹಕ್ಕೆ ಧರ್ಮೋಪದೇಶ ಮಾಡುತ್ತಾನೆ. ಮುಂದೆ ಈ ಕ್ಷೇತ್ರಕ್ಕೆ ಯಾವರೀತಿ ವತ್ರಧಾರಿಗಳಾಗಿ ಬರಬೇಕು ಎಂಬ ಬಗ್ಗೆ ಕಟ್ಟುಪಾಡು, ರೀತಿ-ನೀತಿ, ವ್ರತಾನುಷ್ಠಾನ, ಬ್ರಹ್ಮಚರ್ಯದ ಪಾಲನೆ ಎಲ್ಲವನ್ನು ಸವಿವರವಾಗಿ ತಿಳಿಯಪಡುಸುತ್ತಾನೆ. ಕಾಡುದಾರಿಯಾಗಿ ಬರಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡುವಂತೆ ಮಹಾರಾಜರಿಗೆ ತಿಳಿಸುತ್ತಾನೆ. ಆವಾಗಲೇ ಅಲ್ಲಿಗೆ ಬಂದು ಸೇರಿದ್ದ ಶಿವಯೋಗಿಗಳ ಮಾರ್ಗದರ್ಶನದಲ್ಲಿ ಶಾಸ್ತಾರ ದೇವಸ್ಥಾನದ ಜೀರ್ಣೋದ್ಧಾರದ ಸಕಲ ಕಾರ್‍ಯಗಳು ವಿಧಿವತ್ತಾಗಿ ನಡೆಯುತ್ತವೆ. ಸಕಲರಿಗೂ ಧರ್ಮದ ಮರ್ಮವನ್ನು ವಿಶದವಾಗಿ ತಿಳಿಯಪಡಿಸುತ್ತಾನೆ. ಅಷ್ಟು ಹೊತ್ತಿಗೆ ಮಹಿಷಿಯ ಸಂಹಾರದ ಸಂದರ್ಭ ಎದ್ದು ಬಂದ ಕನ್ಯೆ ಅಲ್ಲಿಗೆ ಬಂದು ತನ್ನನ್ನು ಮದುವೆಯಾಗುವಂತೆ ಬೇಡಿಕೊಳ್ಳತ್ತಾಳೆ. ಆಗ ಅಯ್ಯಪ್ಪನು ಮುಂದಿನ ವರ್ಷದಿಂದ ಇಲ್ಲಿಗೆ ವ್ರತಧಾರಿಗಳಾಗಿ ಭಕ್ತರು ಬರುತ್ತಾರೆ. ಮೊದಲನೇ ಬಾರಿ ಮಾಲೆಧರಿಸಿ ವ್ರತದಾರಿಗಳಾಗಿ ಬರುವ (ಮೊದಲನೇ ಕನ್ನಿ ಸ್ವಾಮಿ) ಸ್ವಾಮಿ ಯಾವ ವರ್ಷ ಒಬ್ಬರೂ ಇರುವುದಿಲ್ಲವೋ ಆಗ ಆಕೆಯನ್ನು ಮದುವೆಯಾಗುವ ಭರವಸೆ ಕೊಡುತ್ತಾನೆ. ಅಲ್ಲದೆ ಆಕೆಗೆ ದೇವಸ್ಥಾನದ ಬಳಿಯಲ್ಲೇ ಗುಡಿಯನ್ನು ಕಟ್ಟಿ ಅಲ್ಲಿ ನೆಲೆಯಾಗುವಂತೆ ತಿಳಿಸುತ್ತಾನೆ (ಮಾಳಿಗ ಪುರತ್ತಮೆ)
ವರ್ಷಕ್ಕೊಂದು ಬಾರಿ ಮಕರ ಸಂಕ್ರಾತಿಯ ದಿನ ತಾನು ಜ್ಯೋತಿರೂಪದಲ್ಲಿ ದರ್ಶನ ನೀಡುವುದಾಗಿ ತಿಳಿಸುತ್ತಾನೆ.
ಅಯ್ಯಪ್ಪ ಧ್ಯಾನಮಗ್ನನಾಗಿ ಕುಳಿತುಕೊಳ್ಳುತ್ತಾನೆ ಸುಮಾರು ಹೊತ್ತಿನ ನಂತರ ಅಯ್ಯಪ್ಪನ ದೇಹ ಬಂಗಾರದಂತೆ ಹೊಳೆಯಲಾರಂಭಿಸುತ್ತದೆ.ನೋಡ ಮೋಡುತ್ತಿದ್ದಂತೆ ಅಯ್ಯಪ್ಪನ ದೇಹದಿಂದ ಪ್ರಕಾಶಮಾನವಾದ ಬೆಳಕೊಂದು ಹೋಗಿ ಶಾಸ್ತಾರನ ಮೂರ್ತಿಯಲ್ಲಿ ಲೀನಗೊಳ್ಳುತ್ತದೆ.ಅಯ್ಯಪ್ಪನ ಮಾನವ ಶರೀರ ಮಾಯಾವಾಗುತ್ತದೆ.ಸೇರಿದ ಜನರೆಲ್ಲರ ಭಕ್ತಿಭಾವದಿಂದ ಮೊಳಗಿದ ಸ್ವಾಮಿಯೇ ಶರಣಂ ಅಯ್ಯಪ್ಪಾ ಎಂಬ ಉದ್ವೋಷ ಮುಗಿಲು ಮುಟ್ಟುತ್ತದೆ.ಅಯ್ಯಪ್ಪನು ವಾವರ ಮತ್ತಿತರ ಪರಿವಾರದೊಂದಿಗೆ ಎರುಮೇಲಿಯಂದ ವ್ರತಧಾರಿಗಳಾಗಿ, ಇರುಮುಡಿ ಹೊತ್ತು ಕಾಡುದಾರಿಯಾಗಿ ಶಬರಿಮಲೆ ಕ್ಷೇತ್ರಕ್ಕೆ ಹೋದ ರೀತಿಯಲ್ಲೇ ಶ್ರದ್ಧಾ-ಭಕ್ತಿಯಿಂದ ಕ್ಷೇತ್ರಕ್ಕೆ ಬಂದು ಅಯ್ಯಪ್ಪ ದರ್ಶನ ಮಾಡುವ ಸಂಪ್ರದಾಯ ಅಂದಿನಿಂದ ಇಂದಿನವರೆಗೂ ನಡೆದು ಬರುತ್ತಿದೆ. ೪೮ ದಿವಸಗಳ ಬ್ರಹ್ಮಚರ್ಯದ ಕಠಿಣವ್ರತವನ್ನಾಚರಿಸಿ, ಕಾಯಾ-ವಾಚಾ-ಮನಸಾ ಪರಿಶುದ್ಧನಾಗಿ ಪವಿತ್ರವಾದ ಇರುಮುಡಿಯನ್ನು ತಲೆಯಲ್ಲಿ ಹೊತ್ತು ಕ್ಷೇತ್ರಯಾತ್ರೆ ಮಾಡುವ ಜಗತ್ತಿನ ಒಂದೇ ಒಂದು ಧಾರ್ಮಿಕ ವ್ರತಾನುಷ್ಠಾನ ಇರುವ ಕ್ಷೇತ್ರ ಶಬರಿಮಲೆ. ಬಡವ-ಬಲ್ಲಿದ, ಉಚ್ಚ-ನೀಚ, ಜ್ಞಾನಿ-ಅಜ್ಞಾನಿ, ಪಂಡಿತ-ಪಾಮರ ಎಂಬ ಯಾವುದೇ ತಾರತಮ್ಯವಿಲ್ಲದ ಎಲ್ಲರಲ್ಲೂ ಅಯ್ಯಪ್ಪನನ್ನು ಕಾಣತಕ್ಕ ಒಂದು ವಿಶಿಷ್ಟ ಆರಾಧನಾ ಪದ್ಧತಿ ಇರುವ ಕ್ಷೇತ್ರ ಶಬರಿಮಲೆ. ಪೂಜ್ಯ ನಾರಾಯಣ ಗುರುಗಳ ಹೇಳಿದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ನುಡಿಮುತ್ತಿಗೆ ಪ್ರೇರಣೆ ನೀಡಿದ ಕ್ಷೇತ್ರ ಶಬರಿಮಲೆ (ಒರುಜಾತಿ, ಒರುಮತಂ, ಒರುದೈವಂ).
ಎಲ್ಲರಲ್ಲೂ ದೇವರನ್ನು ಕಾಣತಕ್ಕಂತಹ ಅಹಂಬ್ರಹ್ಮಾಸ್ಮಿ ಸರ್ವಂ ಕಲ್ವಿದಂ ಬ್ರಹ್ಮ ಎಂಬ ವಾಣಿಗೆ ಮುದ್ರಯೊತ್ತಿದ, ಹಿಂದುತ್ವದ ಮೂಲ ಚಿಂತನೆ ಸಾಕಾರಗೊಳಿಸಿದ ಆಚರಣೆ ಅಯ್ಯಪ್ಪ ವ್ರತಾಚರಣೆ. ವಿಶ್ವಮಾನವತೆಯ ಸಂದೇಶ ಇಲ್ಲಿದೆ.
ಶಾರೀರಿಕ ಸಂಸ್ಕಾರ, ಮಾನಸಿಕ ಸಂಸ್ಕಾರ, ಬೌದ್ಧಿಕ ಸಂಸ್ಕಾರದೊಂದಿಗೆ ನೈತಿಕ, ಧಾರ್ಮಿಕ, ಆಧ್ಯಾತ್ಮಿಕ ಚಿಂತನೆ, ಏಕಾಗ್ರತೆ, ಸಂಯಮ, ಇಂದ್ರಿಯ ನಿಗ್ರಹದ ಮೂಲಕ ವ್ಯಕ್ತಿಯನ್ನು ಶಕ್ತಿಯಾಗಿಸುವ ಮಾನವನನ್ನು ಮಾಧವನನ್ನಾಗಿಸುವ ಯೋಗ ಪಥ ಈ ವ್ರತಾಚರಣೆಯಲ್ಲಿದೆ.
ಶರಣಾಗತ ಭಾವದ ಭಕ್ತಿಗೆ ಭಗವಂತನ ಒಲಿಯುತ್ತಾನೆ, ಎಂಬ ಸಂದೇಶದ ಈ ವ್ರತಾಚರಣೆ, ಶ್ರದ್ಧಾಭಕ್ತಿಯಿಂದ ಮಾಡಿದ ಭಕ್ತರ ಸಂಕಷ್ಟ ಪರಿಹಾರ ಮತ್ತು ಇಷ್ಟಾರ್ಥ ಸಿದ್ಧಿಯ ನೂರಾರು ನಿದರ್ಶನಗಳಿವೆ. ದುಶ್ಚಟಗಳಿಂದ ದೂರವಾದ ಅಂಗವೈಕಲ್ಯದಿಂದ ಮುಕ್ತರಾದ, ಮಾರಕ ರೋಗಗಳಿಂದ ಗುಣಮುಖರಾದ ಅನೇಕ ನಿದರ್ಶನಗಳಿವೆ.
೧೦ರಿಂದ ೫೦ ವರ್ಷದೊಳಗಿನ ಸ್ತ್ರೀಗೆ ಪ್ರವೇಶ ನಿಷಿದ್ಧ ಯಾಕೆ ? 48 ದಿವಸಗಳ ವ್ರತಾಚರಣೆ ನಿರಂತರ ಮಾಡುವುದಕ್ಕೆ ರಜಸ್ವಲೆ ಆಗುವ ಸ್ತ್ರೀಗೆ ಅಸಾಧ್ಯವಾಗಿರುತ್ತದೆ.ಯೋಗಮುದ್ರೆಯಲ್ಲಿರುವ ಬ್ರಹ್ಮಚಾರಿ ಅಯ್ಯಪ್ಪನಿರುವ ಶಬರಿಮಲೆಯಲ್ಲಿ ಇರುವ ವಿಶಿಷ್ಟ ಸಂಕರ್ಷಣ ಶಕ್ತಿಯಿಂದ ಆಕೆಯ ಗರ್ಭಕೋಶದ ಮೇಲೆ, ಆರೋಗ್ಯರ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
ಪ್ರವಾಹೋಪಾದಿಯಲ್ಲಿ ಭಾರೀ ಸಂಖ್ಯೆಯಲ್ಲಿ ವ್ರತಧಾರಿಗಳು ಬರುವ ಈ ಕ್ಷೇತ್ರಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಬರುವ ಮೂಲಕ ಪುರುಷ ಮತ್ತು ಮಹಿಳಾ ವ್ರತಧಾರಿಗಳಿಗೂ ಕಠಿಣ ಬ್ರಹ್ಮಚರ್ಯ ವ್ರತಾಚರಣೆಯಲ್ಲಿ ಲೋಪವುಂಟಾಗಬಹುದು.ಪರಿಣಾಮವಾಗಿ ಪುಣ್ಯಸಂಪಾದನೆಗಾಗಿ, ಕಷ್ಟಪರಿಹಾರಕ್ಕಾಗಿ ಮಾಡುವ ಈ ವ್ರತಯಾತ್ರೆ ಪಾಪಸಂಚಯ ಮತ್ತು ಕಷ್ಟಸಂಕಟಗಳಿಗೆ ಕಾರಣವಾಗಬಹುದು.
ನೂರಾರು ವರ್ಷಗಳಿಂದ ಅನೂಚಾನವಾಗಿ ಭಕ್ತಿ ಶ್ರದ್ಧೆಯಿಂದ ನಡೆದುಕೊಂಡು ಬರುತ್ತಿರುವ ಶಬರಿಮಲೆಯ ಪವಿತ್ರ ವ್ರತಯಾತ್ರೆಯನ್ನು, ಸಂಪ್ರದಾಯವನ್ನು, ವ್ರತಾನುಷ್ಠಾನವನ್ನು ಮಣ್ಣು ಪಾಲು ಮಾಡುವ, ಕ್ಷೇತ್ರದ ಪಾವಿತ್ರ್ಯತೆಯನ್ನು-ಕಾರಣಿಕವನ್ನು ನಾಶಮಾಡುವ ನೀಚಕೃತ್ಯ ದೇವರಲ್ಲಿ ವಿಶ್ವಾಸವಿಲ್ಲದ ದೈವವಿರೋಧೀ, ಹಿಂದು ವಿರೋಧಿ ಕಮ್ಯುನಿಷ್ಟರಿಂದ ನಡೆಯುತ್ತಿದೆ.
ಸುಪ್ರೀಂ ಕೋರ್ಟಿನ ಆದೇಶವನ್ನು ನೆಪವಾಗಿಸಿಕೊಂಡು ೧೦ರಿಂದ ೫೦ವರ್ಷದೊಳಗಿನ ಮಹಿಳೆಯರನ್ನು ಬಲಾತ್ಕಾರವಾಗಿ ಕ್ಷೇತ್ರಕ್ಕೆ ನುಗ್ಗಿಸುವ ಕೇರಳದ ಪಿಣರಾಯಿ ವಿಜಯನ್‌ನ ಕಮ್ಯುನಿಷ್ಟ್ ಸರಕಾರ ಆಸ್ತಿಕ ಜನರ ಧಾರ್ಮಿP, ಆಧ್ಯಾತ್ಮಿP, ಭಕ್ತಿಯ ಭಾವನೆಗಳ ಮೇಲೆ ಮರ್ಮಾಘಾತ ನೀಡಿದೆ.
ಕೋಟ್ಯಂತರ ಅಯ್ಯಪ್ಪ ವ್ರತಧಾರಿಗಳನ್ನು ಭಕ್ತಿಶ್ರದ್ಧೆಯಿಂದ ಶಬರಿಮಲೆಗೆ ಕಳುಹಿಸಿಕೊಡುವ ಮಿಲಿಯಾಂತರ ಸ್ತ್ರೀಯರ ಭಾವನೆಗಳ ಮೇಲೆ ಧಾಳಿನಡೆಸಿದೆ.ಮಹಿಳಾ ಸಮಾನತೆಯ ಹೋರಾಟದ ನೆಪದಲ್ಲಿ ಭಕ್ತಿಯಿಂದ ಯಾವ ದೇವಸ್ಥಾನಕ್ಕೂ ದರ್ಶನ ಮಾಡದ ನಾಸ್ತಿಕವಾದಿ ಮಹಿಳೆಯರನ್ನು ಬಲಾತ್ಕಾರವಾಗಿ ಶಬರಿಮಲೆ ಪಡಿಏರಿಸುವ ನೀಚಕೃತ್ಯಕ್ಕೆ ಕೈಯಿಕ್ಕಿ ಆಸ್ತಿಕ ಸ್ತ್ರೀ ಸಮಾಜಕ್ಕೆ ಅಪಚಾರವೆಸಗಿದೆ.ಕ್ಷೇತ್ರದ ಪಾವಿತ್ರ್ಯತೆ, ಸಂಪ್ರದಾಯ, ಕಟ್ಟಳೆಗಳನ್ನು ಧ್ವಂಸಗೈಯುವ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸಲು ಕೇರಳದ ಅಧವಿ ಸರಕಾರ ಪಣತೊಟ್ಟಿದೆ.ದೇಶ-ಧರ್ಮ-ಸಂಸ್ಕೃತಿ-ಮೌಲ್ಯ-ಪರಂಪರೆ ಬಗ್ಗೆ ಕಮ್ಮಿ ನಿಷ್ಠೆ ಉಳ್ಳ ಅಥವಾ ನಿಷ್ಠೆಯೇ ಇಲ್ಲದ ರಷ್ಯಾ ಚೈನಾದಲ್ಲಿ ಮಳೆ ಬಂದಾಗ ಇಲ್ಲಿ ಕೊಡೆ ಬಿಡಿಸುವ ಮಾನಸಿಕತೆ (ಮೌಢ್ಯದ)ಯ ಈ ನಾಸ್ತಿಕ ಕಾಮ್ರೆಡ್-ನಕ್ಸಲೇಟ್‌ಗಳ್ಯಾರೂ ಬಹಿರಂಗವಾಗಿ ದೇವಸ್ಥಾನಕ್ಕೆ ಹೋಗುವುದಿಲ್ಲ, ಆದರೆ ಗುಟ್ಟಾಗಿ ದೇವಸ್ಥಾನಕ್ಕೆ ಹೋಗುತ್ತಾರೆ.
ಮುಸ್ಲಿಂ ಸಮುದಾಯದಿಂದ ಉಚ್ಘಾಟನೆಗೊಂಡ ರೆಹನಾ ಫಾತಿಮಾ ಕಮ್ಯುನಿಷ್ಟ್ ಪ್ರಾಯೀಜಿತ ದಲಿತ ಮೋರ್ಚಾನಾಯಕಿ ಎಸ್.ಪಿ.ಮಂಜು ಎಸ್.ಎಫ್.ಐ ಮಹಿಳಾ ಮುಖಂಡರು, ಹಿಂದು ವಿರೋಧಿಗಳು, ಧರ್ಮವಿರೊಧಿಗಳು ಕ್ರೈಸ್ತಮಿಶನರಿಗಳೊಂದಿಗೆ ಶಾಮಿಲಾಗಿರುವ ಕಮ್ಯುನಿಷ್ಟ ಕುಪ್ರಚೋದನೆಯಿಂದ ವ್ರತಧಾರಿಯಾಗಿ ಪವಿತ್ರವಾದ ಇರುಮುಡಿ ಹೊತ್ತು ಹೋಗುವ ಕ್ಷೇತ್ರಕ್ಕೆ ಅಪವಿತ್ರಗೊಳಿಸಲೆಂದೇ ಬೇಡದ್ದೆಲ್ಲವನ್ನೂ ಹೊತ್ತುಕೊಂಡು ಹೋಗುವ ಪಾಪಕೃತ್ಯಕ್ಕೆ ಕೈಯಕ್ಕಿದ್ದಾರೆ. ಕಮ್ಯುನಿಷ್ಟರ ಕರಾಳಮುಖ : 1950ರಲ್ಲಿ ಇದೇ ಶಬರಿಮಲೆಗೆ ಬೆಂಕಿಇಟ್ಟ ಪಾತಕಿಗಳ ಕೃತ್ಯದಿಂದ ಹಿಂದು ಭಕ್ತ ಸಮುದಾಯ ಆಘಾತಗೊಂಡಾಗ ಕೇರಳದ ಆಗಿನ ಕಾಮ್ರೆಡ್ ಮುಖ್ಯಮಂತ್ರಿ ಏನೂ ಅನಾಹುತನಡೆದಿಲ್ಲ ಒಂದಷ್ಟು ಮೂಡನಂಬಿಕೆ ನಾಶ ಆಯ್ತು ಅಂದರು. ಕಮ್ಯುನಿಷ್ಠರು ಮಕರ ಜ್ಯೋತಿ ಸುಳ್ಳು ಎಂಬ ಪುಸ್ತಕ ಬರೆದಿದ್ದಾರೆ.ಹಿಂದೆ ಒಬ್ಬ ಕಮ್ಯುನಿಷ್ಟ್ ನಾಯಕ ದೇವಸ್ಥಾನಗಳನ್ನು ಶೌಚಾಲಯ ಮಾಡಬೇಕು ಎಂದಿದ್ದರು.ಇತ್ತೀಚಿಗೆ ಅಲ್ಲಿ ಮೇಲ್‌ಶಾಂತಿಯವರು’ ಜ್ಯೋತಿ ಕಾಣುವುದಲ್ಲ, ನಾವು ಕಾಣಿಸುವುದು’ ಅಂದಿದ್ದಾರೆ. ಶಬರಿಮಲೆಗೆ ಹೋಗುವ ದಾರಿಯಲ್ಲಿ ನಿಲಕ್ಕಲ್ ಎಂಬಲ್ಲಿ ಹಿಂದೆ ಕ್ರೈಸ್ತ ಮಿಶನರಿಗಳಿಂದ ಅಕ್ರಮ ಚರ್ಚ್‌ಕಟ್ಟುವ ಹುನ್ನಾರ ನಡೆದಾಗ ಕೇರಳದಾದ್ಯಂತ ಭಾರೀ ಪ್ರತಿಭಟನೆ ನಡೆಸಿ ಅದನ್ನು ತಡೆಯಲಾಯಿತು. ಈಗಿನ ಮುಖ್ಯಮಂತ್ರಿ ಕೋರ್ಟು ಆದೇಶ ಪಾಲನೆ ಹೆಸರಿನಲ್ಲಿ ಬಲಾತ್ಕಾರವಾಗಿ ನಾಸ್ತಿಕ, ನೀತಿಗೆಟ್ಟ, ಎಲ್ಲಾಬಿಟ್ಟ ಮಹಿಳೆಯರನ್ನು ಶಬರಿಮಲೆಗೆ ಕೊಂಡೊಯ್ಯುವ ವಿಫಲ ಯತ್ನ ನಡೆಸುತ್ತಿದೆ.ಅಪ್ಪ, ಅರವಣಪ್ರಸಾದ ತಯಾರಿ ಕೆಲಸವನ್ನು ಮುಸ್ಲಿಂ-ಕ್ರೈಸ್ತರಿಗೆ ಕೊಟ್ಟಿದೆ ಸರಕಾರ.
ಪಿಣರಾಯಿಯಿಂದ ಸನ್ನಿಧಾನದಲ್ಲಿ ಕಳೆದ 2 ತಿಂಗಳಿಂದ ಹೊಸ ಸುಧಾರಣಾ ಕ್ರಮ :
1. ಸೆಕ್ಸನ್ 144 ಜಾರಿ
2. ಸಾವಿರಾರು ಪೋಲಿಸರ ನೇಮಕ
3. 2 ಬೆಟಾಲಿಯನ್ ಆರ್.ಎ.ಎಫ್‌ಗಳ ನೇಮಕ
4. ಮಹಿಳಾ ಪೋಲಿಸರ ತಂಡ ೫೦ ಮೀರಿದ 30 ಮಹಿಳಾ ಪೋಲಿಸರು ಸನ್ನಿಧಾನದಲ್ಲಿ
5. ಕಮಾಂಡೋಗಳು
ಪೋಲಿಸರಿಗೆ ವಿಶೇಷ ಸೂಚನೆ
1. ಪೋಲಿಸರು ಚರ್ಮದ ಬೆಲ್ಟ್, ಶೂ, ಮತ್ತು ಟೋಪಿ ಧರಿಸಲೇಬೇಕು (ಮೊದಲು ಅಲ್ಲಿ ಪೋಲಿಸರು ಇದ್ಯಾವುದನ್ನು ಧರಿಸುತ್ತಿರಲ್ಲಿಲ್ಲ)
2. ಪರಸ್ಪರ ಅಥವಾ ಭಕ್ತರನ್ನು ಸ್ವಾಮಿ ಮತ್ತು ಮಾಳಿಗಪುರಂ ಎಂದು ಕರೆಯಬಾರದು.
3. ಎಲ್ಲಾ ಪೋಲಿಸರು ಲಾಟಿ ಮತ್ತು ಕವಚ ಹೊಂದಿರಬೇಕು.
4. ರಾತ್ರಿ ಸನ್ನಿಧಿಯಲ್ಲಿ ಭಕ್ತರು ತಂಗಲು ಅವಕಾಶವಿಲ್ಲ (ಇರುಮುಡಿಯಲ್ಲಿ ತಂದ ತುಪ್ಪದ ತೆಂಗಿನ ಕಾಯಿಯನ್ನು ಏನು ಮಾಡಬೇಕು?)
5. ರಾತ್ರಿ ಗರ್ಭಗುಡಿ ಬಾಗಿಲು ಹಾಕಿದ ನಂತರ ಭಕ್ತರಿಗೆ ಆಹಾರ ನೀಡಬಾರದೆಂದು ಹೋಟೆಲ್‌ನವರೆಗೆ ಸೂಚನೆ
6. ಜನಂ ಮತ್ತು ಜನ್ಮಭೂಮಿ ಬಿಟ್ಟು ಉಳಿದೆಲ್ಲಾ ಮಾಧ್ಯಮ ಪಿಣರಾಯ್ ಕೈವಶ. ಪವಿತ್ರ ಕ್ಷೇತ್ರವೊಂದನ್ನು ರಣರಂಗವನ್ನಾಗಿರುವ ಷಡ್ಯಂತ್ರ ಸರಕಾರದಿಂದ ಪಡೆದಿದೆ
ಏನೇನಿಲ್ಲ
1. ಯಾತ್ರಿಕರು ರಾತ್ರಿ ಸನ್ನಿಧಾನ (ಶವರಿಮಲೆ)ದಲ್ಲಿ ತಂಗುವಂತಿಲ್ಲ.
2. ಕುಡಿಯಲು ನೀರಿಲ್ಲ.
3. ಆಹಾರ ಇಲ್ಲ.
4. ಅಪ್ಪ, ಅರವಣಪ್ರಸಾದ ಕೊರತೆ ಇದೆ.
5. ಮಧ್ಯಾಹ್ನ ನಂತರ ಬರುವ ಭಕ್ತರಿಗೆ ತುಪ್ಪದ ಅಭಿಷೇಕಕ್ಕೆ ಅವಕಾಶವಿಲ್ಲ.
6. ಶೌಚಾಲಯಗಳಲ್ಲಿ ಹಣಕೊಟ್ಟು ಉಪಯೋಗಿಸುವುದು ಮಾತ್ರ ಇದೆ.
ಕಳೆದ ಅನೇಕ ದಿವಸಗಳ ಭಾರೀ ಪ್ರತಿಭಟನೆ, ಕೇಂದ್ರದ ಸತ್ಯ ಪರಿಶೋಧನಾ ತಂಡ, ಮಾನವನ ಹಕ್ಕುಗಳ ತಂಡ ವರದಿ ನಂತರ ಅಲ್ಲಿ ವ್ಯವಸ್ಥೆಗಲ್ಲಿ ಬದಲಾಣೆ ಮಾಡಿದರೂ, ಇನ್ನೂ ನಿರಾತಂಕವಾಗಿ ಕ್ಷೇತ್ರ ಸಂದರ್ಶನಕ್ಕೆ ಅವಕಾಶ ಇಲ್ಲ.
ಉದ್ದೇಶ
1. ಗರಿಷ್ಠ ತೊಂದರೆ ಕೊಟ್ಟು ದೂರದಿಂದ ಬರುವ ಭಕ್ತರನ್ನು ಶಬರಿಮಲೆಗೆ ವಿಮುಖರಾಗುವಂತೆ ಮಾಡುವುದು.
2. ಮೂಲ ಸೌಕರ್ಯಗಳನ್ನು ನೀಡದೇ ದೊಡ್ಡ ಸಂಖ್ಯೆಯಲ್ಲಿ ಬರುವಂತಹ ಭಕ್ತ ಸಮೂಹವನ್ನು ದೂರ ಇಡುವುದು, ಈ ಮೂಲಕ ಮಂಡಲಕಾಲವನ್ನು ನರಕಸದೃಶವಾಗಿಸುವುದು.
3. ಹೀಗೆ ಸಂಖ್ಯೆ ಕಡಿಮೆಯಾದಾಗ ಅಲ್ಲಿಯ ನಿಯಂತ್ರಣ ತೆಗೆದುಕೊಂಡು ಯುವತಿಯರನ್ನು ಕರೆದುಕೊಂಡು ಹೋಗಿ ಶಬರಿಮಲೆಯ ಪಾವಿತ್ರ್ಯತೆಯನ್ನು ನಾಶಮಾಡುವುದು.
4. ಈ ಎಲ್ಲಾ ಉದ್ದೇಶಗಳನ್ನು ಮುಂದಿಟ್ಟುಕೊಂಡು ತಾವು ಕುದುರಿಸಿಕೊಂಡಿರುವ ಅಂತರಾಷ್ಟ್ರೀಯ ಮಟ್ಟದ ಕೋಟ್ಯಂತರ ರೂಪಾಯಿಗಳ ಡೀಲುಗಳನ್ನು ಜಾರಿಗೊಳಿಸುವುಸು.
5. ಮತಾಂತರ ಶಕ್ತಿಗಳಿಗೆ, ಅಂತರಾಷ್ಟ್ರೀಯ ವ್ಯಾಪಾರೀ ಶಕ್ತಿಗಳ ಕೈಗೆ ಶಬರಿಮಲೆಯನ್ನು ಮಾರಿ ಹೊಟ್ಟೆ ತುಂಬಿಸಿಕೊಳ್ಳುವುದು, ಕೋಟ್ಯಾಂತರ ಹಿಂದುಗಳ ಶ್ರದ್ಧಾಕೇಂದ್ರವನ್ನು ನಾಶ ಮಾಡುವುದು.ಆ ಮೇಲೆ ಉಳಿದ ಶ್ರದ್ದಾಕೇಂದ್ರಗಳನ್ನು.ಈಗಾಗಲೇ ಕಮ್ಯುನಿಷ್ಟ್ ಗೂಂಡಾಗಳಿಗೆ ಪೋಲಿಸ್ ಡ್ರೆಸ್ ಕೊಟ್ಟು ಶವರಿಮಲೆಗೆ ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಶಬರಿಮಲೆ ರಕ್ಷಿಸಿ ಹೋರಾಟಕ್ಕಿಳಿದಿರುವ ಸಾವಿರಾರು ಮಂದಿಯ ಬಂಧನ ಮೊಕ್ಕದ್ದಮೆ ಹಾಕಲಾಗಿದೆ.ವ್ರತಧಾರಿಯಾಗಿ ಪವಿತ್ರ ಇರುಮುಡಿ ಹೊತ್ತು ಶಬರಿಮಲೆ ಯಾತ್ರೆ ಹೊರಟ ಹಿಂದು ಐಕ್ತವೇದಿಯ ಶಶಿಕಲಾ ಟೀಚರ್‌ರನ್ನು ತಡೆದು ಬಂಧಿಸಿ, ಅವರ ಸಂವಿಧಾನದತ್ತವಾದ ಧಾರ್ಮಿಕ ಹಕ್ಕನ್ನು ಹತ್ತಿಕ್ಕಲಾಗಿದೆ.ಅವರು ನ್ಯಾಯಾಲಯದ ಮೊರೆಹೋಗಿ ದರ್ಶನಕ್ಕೆ ಅವಕಾಶ ಸಿಕ್ಕಿದೆ. ಕೇರಳದಲ್ಲಿ ಅಯ್ಯಪ್ಪ ಭಕ್ತರು ಸಂಘ ಪರಿವಾರ ಬೀದಿಗಿಳಿದು ಹೋರಾಟಕ್ಕಿಳಿದರೆ, ಕಾಂಗ್ರೆಸ್ ಕೂಡಾ ಕೇರಳದ ಸರಕಾರದ ನೀತಿ ವಿರೋಧಿಸಿದೆ.ಕೇರಳದ ಭಕ್ತ ಸಮೂಹವಂತೂ ರೊಚ್ಚಿಗೆದ್ದಿದೆ.ಆದರೂ ಶಾಂತಿಯುತವಾಗಿ ಅಯ್ಯಪ್ಪ ಭಕ್ತ ನಾಮಜಪದೊಂದಿಗೆ ಪ್ರತಿಭಟನೆ ನಡೆಸುತ್ತಿದೆ.ಶಬರಿಮಲೆಯ ವ್ಯಾಪಾರಿಗಳು ದೇವಸ್ವಂಬೋರ್ಡಿನಲ್ಲಿ ನಷ್ಟ ಪರಿಹಾರ ಕೇಳುತ್ತಿದ್ದಾರೆ. ಆದರೆ ಕೇರಳ ಕಮ್ಯುನಿಷ್ಟ್ ಮುಖ್ಯಮಂತ್ರಿ ಆಧುನಿಕ ಟಿಪ್ಪು ಸುಲ್ತಾನ್ ಆಗಲು ಹೊರಟಿದ್ದಾರೆ. ಕೇರಳದ ಮಾಜಿ ಮುಖ್ಯ ಮಂತ್ರಿ ಕಮ್ಯುನಿಷ್ಟ್‌ನ ಅಚ್ಯುತಾನಂದನ್ ಹೇಳುತ್ತಾರೆ ನಾನು ನನ್ನ ಜೀವಮಾನದಲ್ಲಿ ಕೇರಳದ ಮೊದಲ ಕಮ್ಯುನಿಷ್ಟ್ ಸರಕಾರವನ್ನು ಕಂಡಿದ್ದೇನೆ, ಕೊನೆಯ ಕಮ್ಯುನಿಷ್ಟ್ ಸರಕಾರವನ್ನೂ ನೋಡುವ ಹಾಗಾಗುತ್ತದೋಎಂದು ಹೇಳಿದ್ದಾರೆ.ಅಲ್ಲಿ ವಾಕ್‌ದೋಷ ಪರಿಹಾರಕ್ಕಾಗಿ ಪೋಲಿಸರು ಹೋಮ ನಡೆಸಿದ್ದಾರೆ.ಆಸ್ತಿಕರ ನಂಬಿಕೆ, ದೇವರ ಶಕ್ತಿ, ವೈಜ್ಞಾನಿಕತೆ ನಾಸ್ತಿಕವಾದಿ ಕಮ್ಯುನಿಷ್ಠರಿಗೆ ಅರಿವಾಗದು ತಂತ್ರ ಅರಿಯದ ಕಮ್ಯುನಿಷ್ಠರಿಗೆ ಕುತಂತ್ರ ಮಾತ್ರ ತಿಳಿದಿದೆ.
ಕಳೆದ ತಿಂಗಳು ಪೋಲಿಸ್ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದನ್ನು ಕಂಡಿದ್ದೇವೆ. ಇಡೀ ಪೋಲಿಸ್ ಇಲಾಖೆಯೊಳಗೆ ನೋವು ಹೆಪ್ಪುಗಟ್ಟಿದೆ. ಯಾವ ಹೊತ್ತಿನಲ್ಲಿ ಆಸ್ಪೋಟವಾದರೂ ಆಶ್ಚರ್ಯವಿಲ್ಲ. ಕರ್ತವ್ಯದ ಸಮವಸ್ತ್ರ ಧರಿಸಿದ ಆಸ್ತಿಕ ಪೋಲಿಸರ ಒಳಗಿರುವ ಅಯ್ಯಪ್ಪ ಭಕ್ತಿ ಜಾಗೃತವಾಗಿಯೇ ಇದೆ. ಇತ್ತೀಚೆಗೆ ಅಲ್ಲಿಗೆ ಬೂಟ್ ಧರಿಸಿ ಬಂದ ಪೋಲಿಸರ ವಿರುದ್ಧ ಪ್ರತಿಭಟನೆ ನಡೆದಾಗ ಅಲ್ಲಿ ಅಧಿಕಾರಿ ಕ್ಷಮೆಯಾಚಿಸಿದ್ದಾರೆ. ವಿಚಾರವಾದಿಗಳು.ಕಮ್ಯುನಿಷ್ಟರು, ಹಿಂದು ವಿರೋಧಿಗಳು ಮಹಿಳಾ ಸಮಾನತೆ, ಕೋರ್ಟು ತೀರ್ಪು ಅನುಷ್ಟಾನದ ಹೆಸರಲ್ಲಿ ಹಿಂದುಗಳನ್ನು ವಿಚಲಿತಗೊಳಿಸುತ್ತಿದ್ದಾರೆ.
ಮಾತೃಪ್ರಧಾನ ಸಂಸ್ಕೃತಿಯ ಆರಾಧಕರು ಹಿಂದುಗಳು. ತಾಯಿ ಮೊದಲ ದೇವರು ತಾಯಿಯ ನಂತರ ಸಾಯುವವರೆಗೆ ಹಾಲು ಕೊಡುವ ಗೋಮಾತಾ ದೇವರು, ಗಂಗಾಮಾತಾ ದೇವರು, ಚಿಕಿತ್ಸಾಕಗುಣವುಳ್ಳ ತುಳಸಿಮಾತಾ ದೇವರು, ಪ್ರಕೃತಿ ಮಾತಾ ದೇವರು, ಮನೆಗೊಬ್ಬಳು ದೇವತೆ ಗೃಹಿಣಿ, ಗ್ರಾಮಕ್ಕೆ ಗ್ರಾಮ ದೇವತೆ, ರಾಷ್ಟ್ರಕ್ಕೆ ರಾಷ್ಟ್ರಮಾತೆ, ವಿದ್ಯೆಯ ಅಧಿದೇವತೆ ಶಾರದೆ, ಸಂಪತ್ತಿನ ಅಧಿದೇವತೆ ಲಕ್ಷ್ಮೀ, ಶಕ್ತಿಯ ಅಧಿದೇವತೆ ದುರ್ಗೆ, ತ್ರಿಮೂರ್ತುಗಳಿಗೆ ಕೆಲಸಕೊಟ್ಟವಳು ಆದಿಮಾಯೆ ದೇವಿ, ಅನೇಕ ರಕ್ಕಸರನ್ನು ಸಂಹರಿಸಿದವಳು ದೇವಿ. ಒಬ್ಬಳು ಸ್ತ್ರೀಗಾದ(ದ್ರೌಪದಿ) ಅಪಮಾನಕ್ಕೆ ಮಹಾಭಾರತ ನಡೆಯಿತು. ಒಬ್ಬಳು ಸ್ತ್ರೀಗಾದ (ಸೀತೆ) ಅನ್ಯಾಯಕ್ಕೆ ರಾಮಾಯಣ (ರಾವಣಸಂಹಾರ) ನಡೆಯಿತು
ಸ್ತ್ರೀಗೆ ಸಮಾನತೆ ಅಲ್ಲ, ಅತ್ಯುನ್ನತ ಗೌರವದ ಸ್ಥಾನಕೊಟ್ಟ ಸಂಸ್ಕೃತಿ ಧರ್ಮ ಹಿಂದು.ಋತುಮತಿಗೆ ದೇವಸ್ಥಾನ ಪ್ರವೇಶ ನಿಷಿದ್ಧ ಶತಮಾನಗಳ ನಿಯಮ.ಅದಕ್ಕೆ ವ್ಯಾವಹಾರಿಕ, ವೈಜ್ಞಾನಿಕ, ಶಾರೀರಿಕ ಕಾರಣಗಳಿವೆ. ಒಂದು ಕೈಯಲ್ಲಿ ಅಮಲು ಪದಾರ್ಥವಿರುವ ಬಾಟ್ಲಿಹಿಡಿದು, ಇನ್ನೊಂದು ಕೈಯಲ್ಲಿ ಸಿಗರೇಟು ಘಾಟಿನೊಂದಿಗೆ ಅರೆಬೆತ್ತಲೆ ಬಟ್ಟೆ ಉಟ್ಟು ಪಬ್‌ಗೆ ಹೋಗುವ ನಾಸ್ತಿಕ ಮಜಾವಾಲಾಗಳಿಗೆ ಅದು ಅರ್ಥವಾಗುವುದಾದರೂ ಹೇಗೆ? ಸಮಾನತೆ ಹೆಸರಲ್ಲಿ ಸಂಪ್ರದಾಯ ಹತ್ತಕ್ಕುವುದು ಯಾವ ನ್ಯಾಯ ? ಈ ದೇಶದಲ್ಲಿ ಪ್ರದೇಶದಿಂದ ಪ್ರದೆಶಕ್ಕೆ ದೇವಸ್ಥಾನಗಳ ಆಚಾರ-ವಿಚಾರ ಸಂಪ್ರದಾಯಗಲಲ್ಲಿ ವ್ಯತ್ಯಾಸ ಇದೆ ಕೇರಳದ ಚಕ್ಕುಲತುಕಾವು ಭಗವತಿ ದೇವಾಲಯ, ಅಟ್ಚುಕಲ್ ಭಗವತಿ ಮಂದಿರ, ಕೊಟ್ವಂ ಕುಲಂದೇವಿ, ಕನ್ಯಾಕುಮಾರಿಯ ಭಗವತಿ ಮಹಾಮಂದಿರ, ರಾಸ್ತಾನದ ಸಾವಿತ್ರಿ ದೇವಾಲಯ, ಆಂಧ್ರಪ್ರದೇಶ ಕಾಮಾಕ್ಯ ದೇವಾಲಯ, ಬಿಹಾರದ ಮುಜಾಫರ್ ನಗರದ ಮಾತಾಮಂದಿರ ಈ ದೇವಾಲಯಗಳಲ್ಲಿ ಕೆಲವು ದಿವಸ ಪುರುಷಭಕ್ತರಿಗೆ ಪ್ರವೇಶ ನಿಷಿದ್ಧ ಕೇರಳದ ಮಹಿಳಾ ಶಬರಿಮಲೆ ಎಂದು ಕರೆಸಲ್ಪಡುವ ದೇವಸ್ಥಾನದಲ್ಲಿ ಮಹಿಳೆಯರಿಂದಲೇ ನೈವೇದ್ಯ ಸಮರ್ಪಣೆ, ಪುರುಷರು ಮಾಡುವಂತಿಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿರುವ ಅಣ್ಣಪ್ಪನಲ್ಲಿಗೆ ಮಹಿಳೆ ನಿಷೇದ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಕಾಂಪ್ರಬೈಲು ಉಳ್ಳಾಲ್ತಿ ದೈವಸ್ಥಾನಕ್ಕೆ ಮಹಿಳೆ ನಿಷೇಧ. ಅನಂತಾಡಿ ದೈವಸ್ಥಾನದಲ್ಲಿ ಒಂದು ದೈವದ ನೇಮಕ್ಕೆ ಮಹಿಳೆಗೆ ನಿಷೇಧ.ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ, ನಂಬಿಕೆ. ಇಲ್ಲಿ ಪುರುಷ-ಸ್ತ್ರೀ ಅಸಮಾನತೆಯ ಲಾವಶೇಷವೂ ಇಲ್ಲ ಎಂಬುದು ನಾಸ್ತಿಕರಿಗೆ ಹೇಗೆ ಅರ್ಥವಾದೀತು ? ಇತ್ತೀಚೆಗೆ ನಿವೃತ್ತ ನ್ಯಾಯಾದೀಶರೊಬ್ಬರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮುದಾಯದ ಹಕ್ಕುಗಳನ್ನು ಗೌರವಿಸಬೇಕಾಗಿರುವುದರಿಂದ ಧರ್ಮದ ವಿಷಯಗಳ ಬಗ್ಗೆ ನ್ಯಾಯಾಂಗದ ಹಸ್ತಕ್ಷೇಪ ಸರಿಯಲ್ಲ. ನ್ಯಾಯಾಂಗ ತನ್ನ ಮಿತಿಯನ್ನು ಮೀರಬಾರದು. ಇಲ್ಲಿನ ಸುಪ್ರೀಂ ಕೋರ್ಟು ಬಗ್ಗೆ ದೇಶ-ವಿದೇಶಗಳಲ್ಲಿ ಅಪಾರ ಗೌರವ ಇದೆ. ಅದನ್ನು ಉಳಿಸಿಕೊಳ್ಳಬೇಕು ಅಂದಿದ್ದಾರೆ.
ಇದ್ಯಾವ ನ್ಯಾಯ ?
ಶಬರಿಮಲೆಗೆ ಆಗಮಿಸುವ ಕೋಟ್ಯಂತರ ಭಕ್ತರಿಂದ ಕಾಣಿಕೆಯಾಗಿ ಸಂಗ್ರಹವಾಗುವ ಕೋಟ್ಯಾಂತರ ರೂಪೈ ನಾಸ್ತಿಕ ಕಮ್ಯುನಿಷ್ಟ್ ಸರಕಾರಕ್ಕೆ. ಅಲ್ಲಿ ಭಕ್ತರಿಗೆ ಸಮರ್ಪಕ ವ್ಯವಸ್ಥೆಗಳಿಲ್ಲ. ವಾವರ ಪಳ್ಳಿಯ ಕಾಣಿಕೆ ಹಣ ಅವರ ಕುಟುಂಬಸ್ಥರಿಗೆ ಇದ್ಯಾವ ನ್ಯಾಯ ?ತಂತ್ರಾಗಮನದ ಮೂಲಕ ಶಾಸ್ತ್ರ ಬದ್ಧವಾಗಿ ನಿರ್ಮಾಣಗೊಂಡು ಗುಡಿಯಲ್ಲಿ ಪ್ರತಿಷ್ಟಾಪನೆಗೊಂಡ ಮೂರ್ತಿ ಇರುವ ದೇವಾಲಯವನ್ನು ಸಾರ್ವಜನಿಕ ಸೊತ್ತು ಎಂದು ಹೇಳುವ ನ್ಯಾಯಾಂಗದಿಂದ ನ್ಯಾಯ ನಿರೀಕ್ಷಿಸಲಾದೀತೇ? ಅನಾಗರಿಕ-ಕೌಟಿಂಬಿಕ ವ್ಯವಸ್ಥೆಯ ನಾಶ-ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ನಾಶದಂತಹ ತೀರ್ಪುಗಳು ಹೊರಬಿದ್ದಾಗ ಹಿಂದೂ ಶ್ರದ್ಧೆಗೆ ಮರ್ಮಾಘಾತವಾದಂತಲ್ಲವೇ ?ಮುಸ್ಲಿಂರಿಗೆ ಸುಪ್ರೀಂ ಕುರಾನ್, ಕ್ರೈಸ್ತರಿಗೆ ಸುಪ್ರೀಂ ಬೈಬಲ್, ಹಿಂದುಗಳಿಗೆ ಸುಪ್ರೀಂ ಧರ್ಮ-ನಂಬಿಕೆ ಅಲ್ಲವೇ? ಯಾರೋ ಬೆರಳೆಣೆಕೆಯ ನಾಸ್ತಿಕರ ಉದ್ಧಟತನಕ್ಕೆ ಮನ್ನಣೆ ನೀಡುವ ನೆಪದಲ್ಲಿ ಕೋಟ್ಯಂತರ ಹಿಂದುಗಳ ಧಾರ್ಮಿಕ ಹಕ್ಕಿಗೆ, ಭಾವನೆಗಳಿಗೆ ಘಾಸಿ ಮಾಡುವುದು ಸಂವಿಧಾನದ ಉಲ್ಲಂಘನೆಯಲ್ಲವೇ ?
ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ಹೋಮ-ಹವನ, ಪ್ರತಿಷ್ಠಾಪನೆ, ಪೂಜೆ ಧಾರ್ಮಿಕ ವಿಧಿ-ವಿಧಾನಗಳು ಹೇಗಿರಬೇಕಂದು ಮಂತ್ರ-ತಂತ್ರಗಳು ಯಾವ ರೀತಿ ಇರಬೇಕಂದು ತೀರ್ಮಾನ ಮಾಡುವುದು ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಅನುಭವವುಳ್ಳ ಋತ್ವಿಜರು. ತಂತ್ರಿಗಳು, ಪುರೋಹಿತರು, ಅರ್ಚಕರು. ಅದನ್ನು ಶಾಸಕಾಂಗವೋ-ನ್ಯಾಯಾಂಗವೋ-ಕಾರ್‍ಯಾಂಗವೋ ಹೀಗೇ ಇರಬೇಕೆಂದು ಆಗ್ರಹಿಸಿದರೆ ಅದು ಸಂವಿಧಾನದತ್ತವಾದ ಧಾರ್ಮಿಕ ಹಕ್ಕುಗಳ ಉಲ್ಲಂಘನೆ
ಯಲ್ಲವೇ ?
ಶಬರಿಮಲೆಯಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಧಾರ್ಮಿಕ ಸಂಪ್ರದಾಯ, ಕಟ್ಟುಪಾಡುಗಳಿಗೆ, ವಿಧಿ-ವಿಧಾನಗಳಿಗೆ ತಡೆ ಒಡ್ಡುತ್ತಿರುವ ಕೋರ್ಟು ತೀರ್ಪನ್ನು ಅನುಷ್ಠಾನಗೊಳಿಸುವ ತರಾತುರಿಯಲ್ಲಿ ಕೇರಳ ಸರಕಾರ ನಡೆಸುತ್ತಿರುವ ಹುನ್ನಾರದ ವಿರುದ್ಧ ಶಾಂತಿಯುತವಾಗಿ ಅಯ್ಯಪ್ಪ ನಾಮ ಜಪದೊಂದಿಗೆ ಪ್ರತಿಭಟನೆ ನಡೆಸುತ್ತ್ತಿರುವ ಭಕ್ತರನ್ನು ಬಂಧಿಸಿ ಸುಳ್ಳುಕೇಸು ಹಾಕಿ ಸೆರೆಮನೆಗೆ ಅಟ್ಟುತ್ತಿರುವುದು ಯಾವ ನ್ಯಾಯ ?
೧೯೪೮ರಲ್ಲಿ ನಡೆದ ಮಹಾತ್ಮ ಗಾಂಧಿಯವರ ಹತ್ಯೆಯ ಅರೋಪದಿಂದ ಆರ್.ಎಸ್.ಎಸ್. ನಿರಪರಾಧಿ ಎಂದು ನ್ಯಾಯಾಲಯ ತೀರ್ಪಿತ್ತರೂ, ಅದನ್ನು ಧಿಕ್ಕರಿಸಿ ಇಂದಿಗೂ ಆರ್.ಎಸ್.ಎಸ್.ನವರು ಗಾಂಧಿ ಹಂತಕರೆಂದು ಹೇಳುತ್ತಿರುವುದು ನ್ಯಾಯಾಂಗ ನಿಂದನೆಯಲ್ಲವೇ ?
ಶಾಬಾನೋ ಎಂಬ ಮುಸ್ಲಿಂ ಮಹಿಳೆ ತನಗೆ ತಲಾಕ್ ಕೊಟ್ಟು ಬಿಟ್ಟ ಗಂಡನಿಂದ ಪರಿಹಾರಕ್ಕೆ ಕೋರ್ಟು ಮೆಟ್ಟಿಲೇರಿದಾಗ ಆಕೆಗೆ ಆತ ಪರಿಹಾರ ಕೊಡಬೇಕೆಂಬ ಕೋರ್ಟು ತೀರ್ಪನ್ನು ಧಿಕ್ಕರಿಸಿ, ಸಂವಿಧಾನ ತಿದ್ದುಪಡಿ ಮಾಡಿ ಪರಿಹಾರವನ್ನು ಸರಕಾರ ಕೊಡಬೇಕೆಂದು ಮಾಡಿದ್ದು ನ್ಯಾಯಾಲಯವನ್ನು ಧಿಕ್ಕರಿಸಿದಂತೆ ಅಲ್ಲವೇ ?
ವಾರಣಾಸಿಯಲ್ಲಿ ಶಿಯಾ ಮುಸ್ಲಿಮರ ಮಸೀದಿಯನ್ನು ಸುನ್ನಿಗಳು ಅಕ್ರಮವಾಗಿ ಇಟ್ಟುಕೊಂಡಿದ್ದವರ ವಿರುದ್ದ ಕೊಟ್ಟ ಕೋರ್ಟು ತೀರ್ಪು 12 ವರ್ಷಗಳ ಕಾಲ ಪಾಲನೆ ಆಗದಿರುವಾಗ ತೀರ್ಪು ಅನುಷ್ಠಾನದ ಆವೇಶ- ಬದ್ಧತೆ ಅಂದ್ಯಾಕೆ ಇರಲಿಲ್ಲ, ಶಬರಿಮಲೆ ಬಗ್ಗೆ ಇಂದ್ಯಾಕೆ ಇದೆ ? ಒಂದೇ ಕಾರಣ ಅಲ್ಲಿ ಮುಸ್ಲಿಮರು, ಇಲ್ಲಿ ಹಿಂದುಗಳು ಅಲ್ಲವೇ ?
ಅಲಹಾಬಾದ್ ಹೈಕೋರ್ಟು ಇಂದಿರಾ ಗಾಂಧಿ ಎಂ.ಪಿ. ಆಗಿ ಆಯ್ಕೆ ಆದುದನ್ನು ಅಕ್ರಮ ಎಂದು ಸಂಸತಸದಸ್ಯತ್ವವನ್ನು ರದ್ದುಗೊಳಿಸಿದಾಗ ಅದನ್ನು ಧಿಕ್ಕರಿಸಿ ತರ್ತುಪರಿಸ್ಥಿತಿ ಘೋಷಿಸಲಿಲ್ಲವೇ ?
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಬದಿಯಿಂದ 500 ಮೀಟರ್ ಅಂತರದೊಳಗೆ ಬಾರ್ ಮತ್ತು ಮದ್ಯದಂಗಡಿ ಮುಚ್ಚಬೇಕೆಂಬ ಸುಪ್ರೀಂ ಕೋರ್ಟು ತೀರ್ಪು, ಕಂಬಳ ನಿಷೇದದ ತೀರ್ಪು, ಜಲ್ಲಿಕಟ್ಟು ತೀರ್ಪು, ಮರುಪರಿಶೀಲನೆಗೊಂಡು ಜನರ ಭಾವನೆಗಳಿಗೆ ಬೆಲೆ ಸಿಗಲಿಲ್ಲವೇ ?
ಮಹಾತ್ಮ ಗಾಂಧಿಯವರ ನೇತೃತ್ವದ ಉಪ್ಪಿನ ಸತ್ಯಾಗ್ರಹ, ಜೆ.ಪಿ. ನೇತೃತ್ವದ ಜನಾಂದೋಲನ, 1990 ಮತ್ತು 1992ರ ಅಯೋದ್ಯ ಕರಸೇವೆ ಇವೆಲ್ಲವೂ ಕಾನೂನು ಉಲ್ಲಂಘನೆಯೇ ? ಅನೀತಿ, ಅನ್ಯಾಯದ ಕಾನೂನುಗಳನ್ನು ಉಲ್ಲಂಘಿಸುವುದು ಈ ದೇಶದ ಪರಂಪರೆಯಲ್ಲವೇ ?ಆದುದರಿಂದ ಶಬರಿಮಲೆಯ ಸಂಪ್ರದಾಯ, ಪಾವಿತ್ರ್ಯತೆ ಕೆಡಿಸುವ ಹುಚ್ಚು ಸಾಹಸಕ್ಕೆ ಕೇರಳದ ಪಿಣರಾಯಿ ಸರಕಾರ ಮುನ್ನುಗ್ಗದೆ, ಅದರಿಂದ ಹಿಂದೆ ಸರಿದು ಆಸ್ತಿಕ ಜನರ ಭಾವನೆಗಳನ್ನು ಗೌರವಿಸಬೇಕು.ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಿ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕ್ಷೇತ್ರದ ಸಂಪ್ರದಾಯವನ್ನು ರಕ್ಷಿಸಬೇಕು.ವಿಶ್ವವಿಖ್ಯಾತ ಧಾರ್ಮಿಕ ಕೇಂದ್ರವಾದ ಶಬರಿಮಲೆಯಲ್ಲಿ ನಿಷೇಧಾಜ್ಞೆ ಹೇರಿ, ಸಾವಿರಾರು ಪೋಲೀಸರನ್ನು, ಕಮಾಂಡೋಗಳನ್ನು, ಆರ್.ಎ.ಎಫ್.ಗಳನ್ನು ನೇಮಿಸಿ ಕ್ಷೇತ್ರವನ್ನು ರಣರಂಗವಾಗಿಸಿದ್ದಲ್ಲದೆ, ಬಲತ್ಕಾರವಾಗಿ ಮಹಿಳೆಯರನ್ನು ಶಬರಿಮಲೆಗೆ ಮುನ್ನುಗ್ಗಿಸುವ ಕೇರಳ ಸರಕಾರವನ್ನು ವಜಾಗೊಳಿಸಿ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು.ಕೊನೆಯಲ್ಲಿ ಒಂದು ಮಾತು
ಶಬರಿಮಲೆಗೆ ಮಹಿಳೆಯರು (ಎಲ್ಲಾ ವಯಸ್ಸಿನ) ಯಾಕೆ ಹೋಗಬಾರದು ಎಂಬ ಪ್ರಶ್ನೆ ಉದ್ಭವವಾಗಲು ಒಂದು ಕಾರಣ? ವ್ರತಾಚರಣೆಯ ನಿಯಮದಲ್ಲಿ ಸಡಿಲತೆ (ಪುರುಷ ವೃತಧಾರಿಗಳಿಂದ) 48 ದಿವಸಗಳ ಕಠಿನ ವ್ರತಾಚರಣೆ, ಬ್ರಹ್ಮಚರ್ಯ ಪಾಲನೆ, ಶರೀರ-ಮನಸ್ಸು-ಬುದ್ಧಿ ಶುದ್ಧಗೊಳಿಸಿ, ನಿಯಮಪಾಲನೆ, ಷಡ್ವೈರಿಗಳನ್ನು ಹತೋಟಿಯಲ್ಲಿಟ್ಟು ಸಚ್ಚಾರಿತ್ರ್ಯವಂತರಾಗಿ, ಶ್ರದ್ಧಾಭಕ್ತಿಯಿಂದ ವ್ರತಾನುಷ್ಠಾನಕ್ಕೆ ಲೋಪವಾಗದಂತೆ ಎಲ್ಲಾ ಚಟಗಳಿಂದ ಮುಕ್ತರಾಗಿ ಅಯ್ಯಪ್ಪ ಚಿಂತನೆಯ ಮೂಲಕ ಕ್ಷೇತ್ರದ ಕಾರಣಿಕ-ಸಂಪ್ರದಾಯ ಕಟ್ಟಳೆಗಳ ರಕ್ಷಕನಾಗಿ ಪವಿತ್ರಯಾತ್ರೆ ಕೈಗೊಂಡು ದೇವರ ದರ್ಶನ ಪಡೆದು ಕೃತಾರ್ಥರಾಗೋಣ. 48 ದಿವಸದ ವ್ರತವನ್ನು 40, 30, 20, 10, 3 ಕ್ಕೆ ಇಳಿಸಿದ್ದು ಮಹಾಪರಾದವಲ್ಲವೇ ? ಸಿಕ್ಕಿದ್ದನ್ನೆಲ್ಲ ತಿನ್ನುವುದು, ಕುಡಿಯುವುದು, ಏನೇನೋ ಮಾತನಾಡುವುದು, ವರ್ತಿಸುವುದು ವ್ರತಭಂಗವಲ್ಲವೇ ?ವ್ರತದ- ಯಾತ್ರೆಯ ನಿಯಮಾವಳಿಗಳನ್ನು ಉಲ್ಲಂಘಿಸುವ, ದುರ್ಬಲಗೊಳಿಸುವ, ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ.


ಸ್ವಾಮಿಯೇ ಶರಣಂ ಅಯ್ಯಪ್ಪಾ
ರಾಧಾಕೃಷ್ಣ ಅಡ್ಯಂತಾಯ
ಕಾರ್ಯದರ್ಶಿ ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ

More from the blog

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...