Sunday, July 13, 2025

ಸಜಿಪಮುನ್ನೂರು ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಆಗ್ರಹ: ಖಾಲಿ ಕೊಡ ಪ್ರದರ್ಶಿಸಿ ಎಸ್ಡಿಪಿಐ ಧರಣಿ

ಬಂಟ್ವಾಳ: ಸಜಿಪಮುನ್ನೂರು ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಎಸ್ಡಿಪಿಐ ಸಜಿಪಮುನ್ನೂರು ಗ್ರಾಮ ಸಮಿತಿ ವತಿಯಿಂದ ಖಾಲಿ ಕೊಡ ಪ್ರದರ್ಶಿಸಿ ಇಲ್ಲಿನ ಪಂಚಾಯತ್ ಮುಂಭಾಗದಲ್ಲಿ ಬುಧವಾರ ಅನಿರ್ದಿಷ್ಟಾವಧಿ ಧರಣಿ ನಡೆಯಿತು.
ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್. ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿ, ಸಜೀಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ಈ ಪ್ರದೇಶದ ಜನರು ಮೂಲಭೂತ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸಜೀಪ ಮುನ್ನೂರು ಗ್ರಾಮದ 3ನೆ ಬ್ಲಾಕ್‌ನಲ್ಲಿರುವ ನೀರು ಶುದ್ಧೀಕರಣ ಘಟಕವು ಹಾಳಾಗಿದ್ದು, ನೇರವಾಗಿ ನದಿಯ ಮೂಲಕವೇ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನೀರು ಕುಡಿಯಲು ಅಯೋಗ್ಯವಾಗಿದ್ದು, ಇದರಿಂದ ಜನರು ರೋಗದ ಭೀತಿ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯತ್ ಅನುದಾನದಡಿ ಸುಮಾರು 28 ಲಕ್ಷ ರೂ. ವೆಚ್ಚದಲ್ಲಿ ಸಜೀಪ ಮುನ್ನೂರು ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗಿದೆ. ಅದಲ್ಲದೆ, ಇದರ ಕಾಮಗಾರಿ ಕಳಪೆ ಹಾಗೂ ಅಪೂರ್ಣವಾಗಿದ್ದು, ಘಟಕವು ಸರಿಯಾಗಿ ಕಾರ್ಯನಿರ್ವಸುತ್ತಿಲ್ಲ. ಇದರಿಂದ ಜನರಿಗೆ ಕುಡಿಯಲು ನೇರವಾಗಿ ನದಿಯಿಂದಲೇ ನೀರು ಪೂರೈಕೆ ಮಾಡುತ್ತಿದೆ. ಈ ನೀರು ಕಲುಷಿತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂದು ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ. ಇದರಿಂದ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಅಭಾವ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಎಸ್ಡಿಪಿಐ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ ಮಾತನಾಡಿ, ಈ ಶುದ್ಧೀಕರಣ ಘಟಕವನ್ನು ಸ್ಥಳೀಯ ಗ್ರಾಮ ಪಂಚಾಯತ್‌ಗೆ ಹಸ್ತಾಂತರ ಮಾಡಿಲ್ಲ. ಕುಡಿಯುವ ನೀರಿನ ಸಮಸ್ಯೆ ಹಾಗೂ ಘಟಕದ ಕಳಪೆ ಕಾಮಗಾರಿಯ ಬಗ್ಗೆ ಶಾಸಕ, ಜಿಲ್ಲಾಧಿಕಾರಿ, ಗ್ರಾಪಂ ಅಧ್ಯಕ್ಷ, ಪಿಡಿಒ ಸಹಿತ ಜಿಪಂ ಇಂಜಿನೀಯರ್ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದೇ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಶುದ್ಧೀಕರಣ ನೀರಿನ ಘಟಕದಿಂದ 75 ಮನೆಗಳಿಗೆ ಮಾತ್ರ ನೀರು ಸರಬರಾಜು ಆಗುತ್ತಿದೆ. ಆದರೆ, ಸಜೀಪ ಮುನ್ನೂರು ಗ್ರಾಮದಲ್ಲಿ ಸುಮಾರು 356 ಮನೆಗಳಿಗೆ ತಲುಪುತ್ತಿಲ್ಲ ಎಂದು ಅವರು, ಎಲ್ಲ ಮನೆಗಳಿಗೆ ಕುಡಿಯುವ ನೀರಿನ ಶಾಶ್ವತ ಪರಿಹಾರ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ಧರಣಿಯಲ್ಲಿ ಎಸ್ಡಿಪಿಐ ಕ್ಷೇತ್ರ ಉಪಾಧ್ಯಕ್ಷ ಖಲಂದರ್ ಪರ್ತಿಪ್ಪಾಡಿ, ಸಜಿಪಮುನ್ನೂರು ಗ್ರಾಪಂ ಸದಸ್ಯರಾದ ಹಂಝ ನಂದಾವರ, ಮಜೀದ್, ಮುಸ್ತಫಾ ಹಾಜರಿದ್ದರು. ಎಸ್ಡಿಪಿಐ ಗ್ರಾಮ ಸಮಿತಿ ಸದಸ್ಯ ಮಲಿಕ್ ಕೊಳಕೆ ಸ್ವಾಗತಿಸಿ, ನಿರೂಪಿಸಿದರು.
ಇಲ್ಲಿರುವ ಒಂದು ಘಟಕದಿಂದ ಗ್ರಾಮದ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅದಲ್ಲದೆ, ಪಂಪ್‌ಸೆಟ್‌ನಲ್ಲಿ ನೀರು ಪೂರೈಕೆ ಸಾಮರ್ಥ್ಯವೂ ಕಡಿಮೆ. ಇನ್ನೊಂದು ಘಟಕ ನಿರ್ಮಾಣಕ್ಕೆ ಅನುದಾನ ಕೊರತೆಯು ಇದೆ. ಇದರಿಂದ ಗ್ರಾಮದ ಕೆಲವು ಮನೆಗಳಿಗೆ ನದಿಯಿಂದಲೇ ನೇರವಾಗಿ ಪೂರೈಕೆ ಮಾಡಲಾಗುತ್ತಿದೆ.
-ಪ್ರಕಾಶ್, ಸಜಿಪಮುನ್ನೂರು ಗ್ರಾಪಂ ಪಿಡಿಒ

More from the blog

‘ಭೂಮಿಯಲ್ಲಿ ಜೀವನ’ ಗದ್ದೆಯಲ್ಲಿ ನೇಜಿ‌ ನೆಡುವ ವಿಶೇಷ ಕಾರ್ಯಕ್ರಮ..

ಬಂಟ್ವಾಳ :  ಸಹ್ಯಾದ್ರಿ ಕಾಲೇಜು ಮಂಗಳೂರು ಇಲ್ಲಿನ ಎಂ.ಬಿ.ಎ.ವಿದ್ಯಾರ್ಥಿಗಳ ಕಾರ್ಪೋರೆಟ್ ಸಾಮಾಜಿಕ ಜವಬ್ದಾರಿ ಕ್ಲಬ್ ಆಯೋಜಿಸಿದ "ಭೂಮಿಯಲ್ಲಿ ಜೀವನ" ಗದ್ದೆಯಲ್ಲಿ ನೇಜಿ‌ ನೆಡುವ ವಿಶೇಷ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ನಾವೂರದ ಸಾಮಾಜಿಕ ನೇತಾರ...

ತುಂಬೆಯ ಕಾವ್ಯ ಕೆ. ನಾಯಕ್ ಗೆ ಪಿ.ಎಚ್.ಡಿ ಪದವಿ..

ಬಂಟ್ವಾಳ: ತುಂಬೆಯ ಕಾವ್ಯ. ಕೆ. ನಾಯಕ್ ಇವರು ಐಐಎಸ್‌ಸಿ‌ನ ಅಂತರ್‌ಶಿಸ್ತಿನ ವಿಜ್ಞಾನ ವಿಭಾಗದ ಡೀನ್ ಹಾಗೂ ನ್ಯಾನೋ ಸೈನ್ಸ್ ಮತ್ತು ಇಂಜಿನಿಯರಿಂಗ್ ಕೇಂದ್ರದ ಪ್ರಾಧ್ಯಾಪಕ ಪ್ರೊ. ನವಕಾಂತ್ ಭಟ್ ಅವರ ಮಾರ್ಗದರ್ಶನದಲ್ಲಿ “ಎಲೆಕ್ಟ್ರೋಕೆಮಿಕಲ್...

ಫರಂಗಿಪೇಟೆ: ಸಂಕಲ್ಪ ಸಿದ್ಧಿಗಾಗಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭೇಟಿ..

ಬಂಟ್ವಾಳ : ಸಂಕಲ್ಪ ಸಿದ್ಧಿಗಾಗಿ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಯವರು ಜು.12ರಂದು ಫರಂಗಿಪೇಟೆಯ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯಿಂದ...

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...