ವಿಟ್ಲ: ಗುರುಕುಲ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ಮಧ್ಯೆ ಪ್ರವೇಶಿಸದೇ ಮಕ್ಕಳು ಪ್ರಶಾಂತವಾಗಿ ಶಿಕ್ಷಣ ಕಲಿಯಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗುವುದು. ಮಕ್ಕಳಿಗೆ ಗುರುಕುಲಗಳು ಮನೆಯ ವಾತಾವರಣವನ್ನು ಕಲ್ಪಿಸುತ್ತದೆ.
ಗುರುಕುಲದ ಕಾರ್ಯವೈಖರಿ ಎಲ್ಲರಿಗೂ ಮಾದರಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಅವರು ವಿಟ್ಲ ಸಮೀಪದ ಮೂರುಕಜೆ ಮೈತ್ರೇಯಿ ಗುರುಕುಲದಲ್ಲಿ ಸೋಮವಾರ ವಿದ್ಯಾರ್ಥಿಗಳ ಜತೆಗೆ ಸಂವಾದ ಕಾರ್ಯಕ್ರಮ ನಡೆಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮಾಡುವ ನಿಟ್ಟಿನಲ್ಲಿ ರಾಜ್ಯಗಳ ಅಭಿಪ್ರಾಯ ಕೇಳಲಾಗಿದ್ದು, ಮುಂದಿನ ದಿನಗಳಲ್ಲಿ ಪರಿಪೂರ್ಣ ಶಿಕ್ಷಣದ ಸಿಗುವ ಕಾರ್ಯವಾಗಬಹುದು. ಮೀಸಲಾತಿಯಿಂದ ಸಾಕಷ್ಟು ಪ್ರಯೋಜನಗಳಿದ್ದು, ಅದನ್ನು ಮುಂದುವರಿಸುವ ಅಗತ್ಯವಿದೆ ಎಂದು ತಿಳಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವಿಧಾನಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಗುರುಕುಲ ಮಾರ್ಗದರ್ಶಕ ಮಂಡಳಿಯ ಡಾ. ರಾಮಚಂದ್ರ ಭಟ್ ಕೋಟೆಮನೆ, ಕಜಂಪಾಡಿ ಸುಬ್ರಮಣ್ಯ ಭಟ್, ಅಜೇಯ ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ, ಕಾರ್ಯದರ್ಶಿ ರವೀಂದ್ರ ಪಿ., ಕೋಶಾಧಿಕಾರಿ ಸುಬ್ರಾಯ ಪೈ, ಸೀತಾರಾಮ ಕೆದಿಲಾಯ, ಎ.ಎಸ್ ಭಟ್, ವಿಟ್ಲಪಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ ಮತ್ತಿತರರು ಉಪಸ್ಥಿತರಿದ್ದರು.
ಮಾತೃಶ್ರೀ ವಿದ್ಯಾಧರೆ ಸ್ವಾಗತಿಸಿದರು. ಶೃತಿ ಪ್ರಸ್ತಾವನೆಗೈದರು. ಸಿಂಚನಾ, ವೈಷ್ಣವಿ ಗುರುಕುಲದ ದಿನಚರಿಯ ಮಾಹಿತಿ ನೀಡಿದರು. ಶುತಕೀರ್ತಿ ವಂದಿಸಿದರು. ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.

