ಬಂಟ್ವಾಳ : ಆಧುನಿಕ ಜಗತ್ತಿನಲ್ಲಿ ಪಾಶ್ಚತ್ಯ ಸಂಸ್ಕೃತಿಗೆ ಮಾರುಹೋಗಿ ಕ್ಯಾಂಡಲ್ ಆರಿಸಿ ಕೇಕ್‌ಕಟ್ ಮಾಡುವುದರ ಮೂಲಕ ಅರ್ಥವಿಲ್ಲದ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಹುಟ್ಟುಹಬ್ಬದ ದಿನದಂದು ಆಡಂಬರದ ಹುಟ್ಟುಹಬ್ಬ ಆಚರಿಸುವ ಬದಲು, ಪರೋಪಕಾರವನ್ನು ಮಾಡಿ ಅರ್ಥಪೂರ್ಣವಾಗಿ ಆಚರಿಸೋಣ ಎಂಬುದನ್ನು ಕಥೆಯ ಮೂಲಕ ಮಕ್ಕಳಿಗೆ ವಿವರಿಸಿ ಕಾರ್‍ಯಕ್ರಮದ ಅತಿಥಿಯಾಗಿ ಆಗಮಿಸಿದ ಕಲ್ಲಡ್ಕ ಶ್ರೀರಾಮ ಪದವಿ ವಿಭಾಗದ ರಸಾಯನ ಶಾಸ್ತ್ರದ ಉಪನ್ಯಾಸಕಿಯಾದ ಕವಿತಾ ಶುಭಹಾರೈಸಿದರು.


ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಜ. 5ರ ಶನಿವಾರದಂದು ಭಜನೆ ಮತ್ತು ನವೆಂಬರ್ ಹಾಗೂ ದಶಂಬರ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಹುಟ್ಟುಹಬ್ಬವನ್ನು ಗಿಡ ನೆಡುವುದರ ಮೂಲಕ ಆಚರಿಸಿಕೊಳ್ಳಿ ಹಾಗೂ ನಿಮ್ಮ ಸುತ್ತಮುತ್ತಲಿನ ಸ್ವಚ್ಛತೆಯನ್ನು ಕಾಪಾಡಿಕೊಂಡು ಮೋದೀಜಿ ಕಂಡ ಕನಸನ್ನು ನನಸು ಮಾಡಿ ಎಂದು ಮಾತೃಭಾರತಿ ಸಮಿತಿಯ ಸದಸ್ಯರಾದ ಮಲ್ಲಿಕಾ ಶೆಟ್ಟಿ ಶುಭಕೋರಿದರು.
ಹುಟ್ಟುಹಬ್ಬ ಆಚರಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಶಾಲಾ ಮಾತಾಜಿಯವರು ಆರತಿ, ಅಕ್ಷತೆ, ತಿಲಕಧಾರಣೆ ಹಾಗೂ ಸಿಹಿಯನ್ನು ನೀಡಿದರು. ಹುಟ್ಟುಹಬ್ಬ ಆಚರಿಸಿಕೊಂಡ ಮಕ್ಕಳು ಭಾರತ ಮಾತೆಗೆ ಪುಷ್ಪಾರ್ಚನೆ ಹಾಗೂ ನಿಧಿ ಸಮರ್ಪಣೆ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಅತಿಥಿಗಳಿಗೆ ಹೂಗುಚ್ಛ ನೀಡಿ ಸಾಂಕೇತಿಕವಾಗಿ ಸ್ವಾಗತಿಸಿದರು. 7ನೇ ತರಗತಿಯ ಜ್ಞಾನೇಶ್ ಪ್ರೇರಣಾ ಗೀತೆ ಹಾಡಿದನು. ಕಾರ್ಯಕ್ರಮದಲ್ಲಿ ಮಂಗಳೂರಿನಲ್ಲಿ ನಡೆದ ವಿಧ್ಯಾಭಾರತಿ ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀರಾಮ ಸೌಹಾರ್ದ ಸಹಕಾರಿ ಸಂಘದಲ್ಲಿ ಕಾರ್‍ಯನಿರ್ವಹಿಸುತ್ತಿರುವ ಸಂಗೀತಾ, ಶಾಲಾ ಪೋಷಕರಾದ ವಾಣಿ , ಶ್ಯಾಮಲ, ಪದ್ಮನಾಭ, ಶಾಲಾ ಸಹಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಹಾಗೂ ಪೂರ್ವಗುರುಕುಲ ಪ್ರಮುಖರಾದಂತಹ ರೂಪಕಲಾ ಉಪಸ್ಥಿತಿಯಿದ್ದರು.
ಕಾರ್‍ಯಕ್ರಮವನ್ನು ಶಿಕ್ಷಕರಾದ ಚೈತ್ರ ನಿರೂಪಿಸಿ, ಸುಮಂತ್ ಆಳ್ವ ಸ್ವಾಗತಿಸಿ, ಸುಮಿತ್ರಾ ವಂದಿಸಿದರು.