ವಿಟ್ಲ: ತುಳು ಮನೆ ಮತ್ತು ಮನಗಳ ಭಾಷೆಯಾಗಬೇಕು. ಪ್ರತೀ ಮನೆಗಳಲ್ಲಿ ತುಳು ಮಾತನಾಡಿದಾಗ, ಮಾತ್ರ ಭಾಷೆಯನ್ನು ಉಳಿಸಲು ಸಾಧ್ಯ. ತುಳುವಿನ ಸ್ಥಾನ ಮಾನದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ತುಳುವಿನ ಬಗೆಗಿನ ಕೆಲಸ ಕಾರ್‍ಯಗಳು ಆಚಾರ ವಿಚಾರ ಇರುವವರೆಗೆ ನಿಲ್ಲಲು ಸಾಧ್ಯವಿಲ್ಲ. ಕೃಷಿ ಋಷಿಯನ್ನು ಮರೆತ ಕಾರಣ ಬದುಕಿನಲ್ಲಿ ಬದಲಾವಣೆಯಾಗಿದೆ. ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಒಡಿಯೂರು ಆತ್ರೇಯ ಮಂಟಪದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ವತಿಯಿಂದ ನಡೆದ ತುಳು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಸಂಶೋಧಕಿ ಡಾ. ಇಂದಿರಾ ಹೆಗ್ಡೆ ಮಾತನಾಡಿ ಸಂಸ್ಕೃತಿಯಲ್ಲಿ ತುಳುವಿಗೆ ಅದರದ್ದೇ ಸ್ಥಾನ ಮಾನವಿದೆ. ತುಳುವಿನ ಹೆಸರಲ್ಲಿ ರಾಜಕೀಯ ಪಕ್ಷ ಇದ್ದಾಗ ಸ್ಥಾನಮಾನಕ್ಕೂ ಸಹಕಾರಿಯಾಗಬಹುದು. ನೇತ್ರಾವತಿ ತಿರುಗಿಸಲು ಹೊರಟಾಗ ಪುರುಷ ಶಕ್ತಿಯ ಹೋರಾಟ ಕಾಣಿಸಿಲ್ಲ. ಸಂಸ್ಕೃತಿ ಆಚಾರ ವಿಚಾರ ಉಳಿಯಲು ಪುಸ್ತಕಗಳು ಸಹಕಾರಿ. ಒಡಿಯೂರಿನಲ್ಲಿ ನಡೆಯುತ್ತಿರುವ ತುಳುವಿನ ಕೆಲಸಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಕಂಬಳ ಅಕಾಡೆಮಿ ಸಂಚಾಲಕ ಕೆ. ಗುಣಪಾಲ ಕಡಂಬ ಮಾತನಾಡಿ ಕರಾವಳಿಯಲ್ಲಿ ತುಳು ಉಳಿಸುವ ನಿಟ್ಟಿನಲ್ಲಿ ಕಂಬಳದ ಪಾತ್ರವೂ ಇದೆ. ತುಳು ಲಿಪಿಯನ್ನು ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್‍ಯ ನಡೆಯಬೇಕು. ಎಲ್ಲಾ ಭಾಷೆಗಳ ಜತೆಗೆ ತುಳುವಿನ ಫಲಕವೂ ಅಳವಡಿಸುವ ಕಾರ್‍ಯವಾಗಬೇಕು. ತುಳು ಸಾಹಿತ್ಯಗಳನ್ನು ಪ್ರೋತ್ಸಾಹ ಮಾಡಬೇಕಾಗಿದೆ. ಎಂದು ಹೇಳಿದರು.
ಅದೃಷ್ಟ ತುಳುವೆ ಬಂಗಾರ್ ಪೆಜಿವೆ ಕಾರ್‍ಯಕ್ರಮದಲ್ಲಿ ಯಶೋಧರ ಸಾಲ್ಯಾನ್, ಸುಂದರ್, ಚಂದಪ್ಪ ನಾಯ್ಕ ಕೆ., ಜಯಲಕ್ಷ್ಮಿ, ರಕ್ಷಿತ್ ಕಾಸರಗೋಡು ಅವರು ಬಂಗಾರದ ಬಹುಮಾನ ಪಡೆದರು.
ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಉಗ್ಗಪ್ಪ ಪೂಜಾರಿ, ಜಾನಪದ ಸೇವೆಗಾಗಿ ಕೇಶವ ಶೆಟ್ಟಿ ಕೆ. ಆದೂರು, ಬೇಸಾಯ ಸಾಧನೆಗಾಗಿ ಕೆ. ಎಸ್. ನಂಬಿಯಾರ್, ದೈವಾರಾಧನೆ ಕಾರ್‍ಯಕ್ಕಾಗಿ ನಿಟ್ಟೋಣಿ ಬೆಳ್ಳೂರು, ಕುಲಕಸುಬು ಕ್ಷೇತ್ರದ ಕೊರಗಪ್ಪ ಮೂಲ್ಯ ಕನ್ಯಾನ ಅವರನ್ನು ತುಳುಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ ಮಲಾರು ಜಯರಾಮ ರೈ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗುರುದೇವ ವಿದ್ಯಾ ಪೀಠದ ಶಿಕ್ಷಕ ಶರತ್ ಆಳ್ವ ಚನಿಲ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಗ್ರಾಮ ಸಂಯೋಜಕಿ ಲೀಲಾ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮಂಗಳೂರು ತಾಲೂಕು ವಿಸ್ತರಣಾಧಿಕಾರಿ ನವೀನ್ ಶೆಟ್ಟಿ, ಪುತ್ತೂರು ವಿಸ್ತರಣಾಧಿಕಾರಿ ಸುರೇಶ್ ಶೆಟ್ಟಿ ಮೊಗೆರೋಡಿ, ಕೇಂದ್ರ ಕಚೇರಿಯ ವೀಕ್ಷಾ ರೈ ಅವರು ಸನ್ಮಾನ ಪತ್ರ ಓದಿದರು.
ಒಡಿಯೂರು ಜೈ ಗುರುದೇವ ಕಲಾಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಸ್ವಾಗತಿಸಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಪುತ್ತೂರು ಶಾಖೆ ವ್ಯವಸ್ಥಾಪಕ ನಿತ್ಯಾನಂದ ಶೆಟ್ಟಿ ಮನವಳಿಕೆ ವಂದಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಬಂಟ್ವಾಳ ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಕಾರ್‍ಯಕ್ರಮ ನಿರೂಪಿಸಿದರು.

