ಬಂಟ್ವಾಳ : ಸಜಿಪನಡು ಹಾಗೂ ತುಂಬೆ ಗ್ರಾಮಗಳ ನಡುವೆ ಸಂಪರ್ಕ ಸೇತುವೆಯನ್ನು ನಿರ್ಮಾಣ ಮಾಡುವ ಬಗ್ಗೆ ಇಲ್ಲಿನ ಜನರ ಬಹು ಕಾಲದ ಬೇಡಿಕೆಗೆ ಕೊನೆಗೂ ಕ್ಷೇತ್ರದ ಶಾಸಕರೂ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಯು.ಟಿ. ಖಾದರ್ ಸ್ಪಂದಿಸಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖಾ ಮುಖ್ಯ ಕಾರ್ಯದರ್ಶಿ ಕೃಷ್ಣ ರೆಡ್ಡಿ ಅವರು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜಿಪ ಅವರೊಂದಿಗೆ ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸುಮಾರು ೨೪ ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಬೃಹತ್ ಸೇತುವೆ ನಿರ್ಮಾಣಗೊಂಡರೆ ಈ ಎರಡು ಗ್ರಾಮಗಳ ಜನರು ಸಲೀಸಾಗಿ ಸಂಪರ್ಕ ಸಾಧಿಸುವ ಅವಕಾಶವನ್ನು ಪಡೆಯಲಿದ್ದಾರೆ. ಸದ್ಯ ಸಜಿಪನಡು ಗ್ರಾಮದ ಜನರು ಮಂಗಳೂರು ಮಹಾನಗರವನ್ನು ತಲುಪಬೇಕಾದರೆ ಸುತ್ತು ಬಳಸಿ ಎರಡು ಮೂರು ಬಸ್ಸುಗಳ ಮೂಲಕ ಸಂಚರಿಸಬೇಕಾದ ಅನಿವಾರ್ಯಯತೆ ಇದೆ. ಸ್ವಂತ ವಾಹನಗಳನ್ನು ಹೊಂದಿರುವ ಶ್ರೀಮಂತ ವರ್ಗದ ಮಂದಿ ತಮ್ಮ ಖಾಸಗಿ ವಾಹನಗಳ ಮೂಲಕ ಬೇಕಾದಂತೆ ಸಂಚಾರವನ್ನು ಮಾಡತ್ತಾರೆ. ಆದರೆ ಸಾಮಾನ್ಯ ಬಡ ಜನರು ಸಂಚಾರಕ್ಕಾಗಿ ಸಾರ್ವಜನಿಕ ಸಾರಿಗೆ ಬಸ್ಸುಗಳನ್ನೇ ಆಶ್ರಯಿಸಿಕೊಂಡಿದ್ದು, ಈ ಬಸ್ಸುಗಳ ಮೂಲಕ ಒಂದೋ ತೊಕ್ಕೊಟ್ಟು ಮಾರ್ಗವಾಗಿ ಅಥವಾ ಮೆಲ್ಕಾರ್ ಮಾರ್ಗವಾಗಿ ಸುತ್ತು ಬಳಸಿ ಸಂಚರಿಸಬೇಕಾಗಿದೆ. ಈ ದೀರ್ಘ ಸಂಚಾರಕ್ಕಾಗಿ ಇಲ್ಲಿನ ಜನ ಅಪಾರ ಪ್ರಮಾಣದ ಹಣಕಾಸು ವ್ಯಯಿಸಬೇಕಲ್ಲದೆ ಸುದೀರ್ಘ ಸಮಯವನ್ನೂ ಮೀಸಲಿಡಬೇಕಾಗಿದೆ. ಇಂದಿನ ಆಧುನಿಕ ಯುಗದ ಸನ್ನಿವೇಶದಲ್ಲಿ ಜನ ಸದಾ ನಿಬಿಡತೆಯಿಂದ ಕೂಡಿದ್ದು, ಸಜಿಪನಡು ಗ್ರಾಮದ ಜನ ಮಂಗಳೂರು ನಗರಕ್ಕೆ ಕೆಲಸ-ಕಾರ್ಯಗಳ ನಿಮಿತ್ತ ಸಂಚರಿಸಬೇಕಾದರೆ ದಿನವಿಡೀ ವ್ಯಯಿಸುವ ಅಗತ್ಯತೆ ಇದೆ. ಎರಡು ಗ್ರಾಮಗಳ ನಡುವಿನ ಸಂಪರ್ಕಕ್ಕೂ ಬಹಳಷ್ಟು ಸುಲಭವಾಗುತ್ತದೆ. ಎರಡು ಗ್ರಾಮಗಳ ನಡುವೆ ಸಂಪರ್ಕ ಸಾಧಿಸಲು ಸುತ್ತು ಬಳಸಿ ಸಂಚಾರಕ್ಕೆ ಸುಮಾರು ಅರ್ಧ ತಾಸಿಗೂ ಅಧಿಕ ಸಮಯ ತಗಲುತ್ತಿದ್ದು, ಈ ಸೇತುವೆ ನಿರ್ಮಾಣಗೊಂಡರೆ ಕೇವಲ ೧೦ ನಿಮಿಷದಲ್ಲಿ ಈ ಎರಡು ಗ್ರಾಮಗಳ ನಡುವೆ ಸಂಪರ್ಕ ಸಾಧಿಸಬಹುದು. ಈ ನಿಟ್ಟಿನಲ್ಲಿ ಸಚಿವ ಖಾದರ್ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ತುಂಬೆ-ಸಜಿಪನಡು ಸಂಪರ್ಕ ಸೇತುವೆ ನಿರ್ಮಾಣವಾದರೆ ಈ ಎರಡೂ ಗ್ರಾಮದ ಜನರ ಪಾಲಿಗೆ ಬಹಳಷ್ಟು ಪ್ರಯೋಜನವಾಗಲಿದೆ.
ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಸಂದರ್ಭ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕರಾವಳಿ ವಲಯದ ಅಧ್ಯಕ್ಷ ಯು.ಬಿ. ಸಲೀಂ, ಲೋಕೋಪಯೋಗಿ ಇಲಾಖಾಧಿಕಾರಿಗಳಾದ ಕಾಂತರಾಜು, ಯಶವಂತ, ಉಮೇಶ್ ಭಟ್, ರವೀಂದ್ರನಾಥ್ ಶೆಟ್ಟಿ, ಸಜಿಪನಡು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ರಝಾಕ್ ಹಾಜಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯದರ್ಶಿ ಆಸಿಫ್ ಸಜಿಪ, ಸಜಿಪನಡು ಗ್ರಾ.ಪಂ. ಮಾಜಿ ಅಧ್ಯಕ್ಷ ಸೋಮನಾಥ್ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಸದಸ್ಯ ಮೋನಪ್ಪ ಮಜಿ, ಪ್ರಮುಖರಾದ ಬಶೀರ್ ಬೋಳಮೆ, ಗೋಪಾಲಕೃಷ್ಣ ತುಂಬೆ, ನಿಸಾರ್ ಸಜಿಪ ಮೊದಲಾದವರು ಜೊತೆಗಿದ್ದು, ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.